ದೆಹಲಿ ಆಗಸ್ಟ್ 27: ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯೊಳಗೆ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯಲ್ಲಿ (Kolkata Doctor rape-murder) ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಭಾಗಿಯಾಗಿರುವ ಸಾಧ್ಯತೆಯನ್ನು ತಳ್ಳಿಹಾಕಲು ಡಿಎನ್‌ಎ ಮತ್ತು ಫೊರೆನ್ಸಿಕ್ ವರದಿಗಳ ಕುರಿತು ಸಿಬಿಐ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ (AIIMS) ತಜ್ಞರನ್ನು ಸಂಪರ್ಕಿಸಲಿದೆ. ಈ ವರದಿಗಳು ಮತ್ತು ಏಮ್ಸ್ ಪರಿಶೀಲನೆಯು ಸಂಜಯ್ ರಾಯ್ ಅಪರಾಧ ಎಸಗಿದ ಏಕೈಕ ಆರೋಪಿಯೇ ಎಂದು ಖಚಿತಪಡಿಸಿಕೊಳ್ಳಲು ಸಿಬಿಐಗೆ ಸಹಾಯ ಮಾಡುತ್ತದೆ ಎಂದು ಪಿಟಿಐ ವರದಿ ಮಾಡಿದೆ.
ಇಲ್ಲಿಯವರೆಗೆ ಏಜೆನ್ಸಿಯು ಅಪರಾಧದಲ್ಲಿ ರಾಯ್ ಒಬ್ಬನೇ ಆರೋಪಿಯಾಗಿದ್ದಾನೆ ಎಂಬ ಸುಳಿವುಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. ಆದರೆ AIIMS ತಜ್ಞರ ಅಭಿಪ್ರಾಯವನ್ನು ಪಡೆದ ನಂತರವೇ ಇತರರ ಪಾಲ್ಗೊಳ್ಳುವಿಕೆಯನ್ನು ತಳ್ಳಿಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ 36 ಗಂಟೆಗಳ ಅವಧಿಯ ಪಾಳಿಯ ಮಧ್ಯೆ ಆಕೆ ಕೋಣೆಯಲ್ಲಿ ಮಲಗಿದ್ದಾಗ ರಾಯ್ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ತೀವ್ರ ಗಾಯಗಳೊಂದಿಗೆ ಆಕೆಯ ದೇಹ ಆಗಸ್ಟ್ 9 ರಂದು ಬೆಳಿಗ್ಗೆ ಪತ್ತೆಯಾಗಿದೆ.
ಆಗಸ್ಟ್ 9 ರಂದು ಮುಂಜಾನೆ 4.03 ಕ್ಕೆ ಸೆಮಿನಾರ್ ಹಾಲ್‌ಗೆ ಪ್ರವೇಶಿಸಿದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸಂಜಯ್ ರಾಯ್ ಎಂಬ ನಾಗರಿಕ ಸ್ವಯಂಸೇವಕನನ್ನು ಪೊಲೀಸರು ಆಗಸ್ಟ್ 10 ರಂದು ಬಂಧಿಸಿದ್ದಾರೆ. ಸಿಬಿಐ ಆತನನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿದೆ.
ರಾಯ್, ಆರ್‌ಜಿ ಕಾರ್‌ನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಇತರ ಐವರ ಪಾಲಿಗ್ರಾಫ್ ಪರೀಕ್ಷೆಯು ಇತರ ಯಾವುದೇ ವ್ಯಕ್ತಿಯ ಪಾತ್ರದ ಬಗ್ಗೆ ಸಿಬಿಐಗೆ ಯಾವುದೇ ಸುಳಿವು ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಯ್ನ ಪಾಲಿಗ್ರಾಫ್ ಪರೀಕ್ಷೆಯು ಅಪರಾಧ ನಡೆದಾಗ ಆರ್ ಜಿ ಕರ್ ಎದೆಯ ವಿಭಾಗದ ಸೆಮಿನಾರ್ ಹಾಲ್‌ಗೆ ಆತನೊಂದಿಗೆ ಬೇರೆ ಯಾರಾದರೂ ಹೋಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಮೂಲಗಳು ಹೇಳಿರುವುದಾಗಿ ಸಿಎನ್ಎನ್-ನ್ಯೂಸ್ 18 ವರದಿ ಮಾಡಿದೆ
ಆಗಸ್ಟ್ 9 ರಂದು ಮುಂಜಾನೆ 4.03 ಗಂಟೆಗೆ ರಾಯ್ ಆರ್‌ಜಿ ಕರ್‌ಗೆ ಏಕಾಂಗಿಯಾಗಿ ಪ್ರವೇಶಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. “ಪಾಲಿಗ್ರಾಫ್ ಪರೀಕ್ಷೆಯ ಉತ್ತರಗಳು ಸಾಮಾನ್ಯವಾಗಿ ಹೌದು ಅಥವಾ ಇಲ್ಲ. ಒಬ್ಬ ವ್ಯಕ್ತಿಯು ಸುಳ್ಳು ಹೇಳುತ್ತಿದ್ದಾನೆಯೇ ಎಂದು ಖಚಿತಪಡಿಸಿಕೊಳ್ಳಲು ದೇಹದ ನಿಯತಾಂಕಗಳನ್ನು ತಜ್ಞರು ವಿಶ್ಲೇಷಿಸುತ್ತಾರೆ. ಫೋರೆನ್ಸಿಕ್ ತಂಡವು ರಾಯ್ ಜತೆ ಬೇರೆ ಯಾರಾದರೂ ಶಾಮೀಲಾಗಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಕೇಳಿದ್ದರು. ಇದಕ್ಕೆ ಆತ ಇಲ್ಲ ಎಂದು ಉತ್ತರಿಸಿದ್ದ ಎಂದು ತನಿಖೆಯಲ್ಲಿ ತೊಡಗಿರುವ ಅಧಿಕಾರಿಯೊಬ್ಬರು ಸಿಎನ್‌ಎನ್-ನ್ಯೂಸ್ 18 ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರತಿಭಟನೆ ನಿರತರ ಮೇಲೆ ಪೊಲೀಸರ ದಬ್ಬಾಳಿಕೆ ಖಂಡಿಸಿ ಬುಧವಾರ ಬಂಗಾಳ ಬಂದ್‌ಗೆ ಕರೆ ನೀಡಿದ ಬಿಜೆಪಿ
ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಕೋಲ್ಕತ್ತಾ ಪೊಲೀಸ್ ಎಎಸ್‌ಐ ಅನುಪ್ ದತ್ತಾ ಅವರ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಮಂಗಳವಾರ ನ್ಯಾಯಾಲಯದ ಅನುಮತಿ ಕೋರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ದತ್ತಾ ಅವರನ್ನು ಸಿಬಿಐ ವಿಚಾರಣೆ ನಡೆಸಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:41 pm, Tue, 27 August 24