ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ: ಪ್ರಧಾನಿ ಮೋದಿ ಮಧ್ಯಸ್ಥಿಕೆ ಕೋರಿದ ಐಎಂಎ

|

Updated on: Aug 17, 2024 | 8:50 PM

ಪತ್ರಿಕಾ ಪ್ರಕಟಣೆಯಲ್ಲಿ ತಮ್ಮ ಬೇಡಿಕೆ ಮುಂದಿರಿಸಿದ ಐಎಂಎ, "ವೈದ್ಯರು ವಿಶೇಷವಾಗಿ ಮಹಿಳೆಯರು ವೃತ್ತಿಯ ಸ್ವರೂಪದಿಂದಾಗಿ ಹಿಂಸೆಗೆ ಗುರಿಯಾಗುತ್ತಾರೆ. ಆಸ್ಪತ್ರೆಗಳು ಮತ್ತು ಕ್ಯಾಂಪಸ್‌ಗಳ ಒಳಗೆ ವೈದ್ಯರ ಸುರಕ್ಷತೆಯನ್ನು ಒದಗಿಸುವುದು ಅಧಿಕಾರಿಗಳ ಜವಾಬ್ದಾರಿ ಎಂದು ಹೇಳಿದೆ. ಅದೇ ವೇಳೆ ಆಸ್ಪತ್ರೆಗಳಲ್ಲಿ ಭದ್ರತಾ ಪ್ರೋಟೋಕಾಲ್‌ಗಳು ವಿಮಾನ ನಿಲ್ದಾಣಗಳಲ್ಲಿ ಇರುವಂತೆ ಕಟ್ಟುನಿಟ್ಟಾಗಿರುವುದನ್ನು ಖಚಿತಪಡಿಸಿಕೊಳ್ಳಲು ಐಎಂಎ ಸರ್ಕಾರವನ್ನು ಒತ್ತಾಯಿಸಿದೆ.

ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣ: ಪ್ರಧಾನಿ ಮೋದಿ ಮಧ್ಯಸ್ಥಿಕೆ ಕೋರಿದ ಐಎಂಎ
ಐಎಂಎ ಪ್ರತಿಭಟನೆ
Follow us on

ದೆಹಲಿ ಆಗಸ್ಟ್ 17: ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಯುವ ಸ್ನಾತಕೋತ್ತರ ವೈದ್ಯೆಯ ಮೇಲೆ ಅತ್ಯಾಚಾರವೆಸಗಿ ನಡೆದ ಕೊಲೆ (Kolkata doctor rape-murder case)ಖಂಡಿಸಿ  ವೈದ್ಯರು ರಾಷ್ಟ್ರವ್ಯಾಪಿ ಮುಷ್ಕರ ನಡೆಸುತ್ತಿದ್ದಾರೆ. ಇದರ ನಡುವೆಯೇ ಭಾರತೀಯ ವೈದ್ಯಕೀಯ ಸಂಘ (IMA) ಶನಿವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ (Narendra Modi) ಪತ್ರ ಬರೆದು ಬೇಡಿಕೆಗಳನ್ನು ಮುಂದಿಟ್ಟಿದೆ. ಆಗಸ್ಟ್ 9 ರ ಮುಂಜಾನೆ ವೈದ್ಯೆ ಕರ್ತವ್ಯದಲ್ಲಿದ್ದಾಗ ಆಕೆಯ ಕೊಲೆ ನಡೆದಿತ್ತು. ಈ ಪ್ರಕರಣ ಖಂಡಿಸಿ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಯುತ್ತಿದ್ದಾಗಲೇ ಆಗಸ್ಟ್ 15 ರಂದು ಜನರ ಗುಂಪು ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿತ್ತು.

ಪತ್ರಿಕಾ ಪ್ರಕಟಣೆಯಲ್ಲಿ ತಮ್ಮ ಬೇಡಿಕೆ ಮುಂದಿರಿಸಿದ ಐಎಂಎ, “ವೈದ್ಯರು ವಿಶೇಷವಾಗಿ ಮಹಿಳೆಯರು ವೃತ್ತಿಯ ಸ್ವರೂಪದಿಂದಾಗಿ ಹಿಂಸೆಗೆ ಗುರಿಯಾಗುತ್ತಾರೆ. ಆಸ್ಪತ್ರೆಗಳು ಮತ್ತು ಕ್ಯಾಂಪಸ್‌ಗಳ ಒಳಗೆ ವೈದ್ಯರ ಸುರಕ್ಷತೆಯನ್ನು ಒದಗಿಸುವುದು ಅಧಿಕಾರಿಗಳ ಜವಾಬ್ದಾರಿ ಎಂದು ಹೇಳಿದೆ.

ಐಎಂಎ ಪತ್ರಿಕಾ ಪ್ರಕಟಣೆ


ಕೆಲಸದಲ್ಲಿನ ಪರಿಸ್ಥಿತಿಗಳು ಮತ್ತು ಆಸ್ಪತ್ರೆಯಲ್ಲಿ ವೈದ್ಯರಿಗೆ ಸುರಕ್ಷಿತ ಸ್ಥಳಗಳ ಕೊರತೆಯ ವಿರುದ್ಧ ಐಎಂಎ ದೂರಿದ್ದು, ಸಮಸ್ಯೆ ಪರಿಹರಿಸಲು ಪ್ರಧಾನ ಮಂತ್ರಿಯರು ಮಧ್ಯಪ್ರವೇಶಿಸಬೇಕು ಎಂದು ಕೋರಿದೆ.

ಐಎಂಎ ಪತ್ರಿಕಾ ಪ್ರಕಟಣೆಯಲ್ಲೇನಿದೆ?

1. ಕೇಂದ್ರೀಯ ಶಾಸನವನ್ನು ಜಾರಿಗೊಳಿಸುವುದು: 1897 ರ ಸಾಂಕ್ರಾಮಿಕ ರೋಗಗಳ ಕಾಯಿದೆಗೆ 2020 ರಲ್ಲಿ ಮಾಡಲಾದ ತಿದ್ದುಪಡಿಗಳನ್ನು “ಆರೋಗ್ಯ ಸೇವೆಗಳ ಸಿಬ್ಬಂದಿ ಮತ್ತು ಕ್ಲಿನಿಕಲ್ ಸ್ಥಾಪನೆಗಳು (ಹಿಂಸಾಚಾರದ ನಿಷೇಧ ಮತ್ತು ಆಸ್ತಿ ಹಾನಿ ಮಸೂದೆ 2019) ಕರಡುಗೆ ಸೇರಿಸುವ ಕೇಂದ್ರ ಕಾಯಿದೆಯನ್ನು ಜಾರಿಗೆ ತರಲು IMA ಕರೆ ನೀಡಿದೆ. ಆರೋಗ್ಯ ಕಾರ್ಯಕರ್ತರನ್ನು ರಕ್ಷಿಸಲು ಪ್ರಸ್ತುತ ಜಾರಿಯಲ್ಲಿರುವ 25 ರಾಜ್ಯ ಕಾನೂನುಗಳನ್ನು ಇದು ಬಲಪಡಿಸುತ್ತದೆ ಎಂದು ಐಎಂಎ ಹೇಳಿದೆ.

2. ಸುಧಾರಿತ ಭದ್ರತಾ ಪ್ರೋಟೋಕಾಲ್‌ಗಳು: ಆಸ್ಪತ್ರೆಗಳಲ್ಲಿ ಭದ್ರತಾ ಪ್ರೋಟೋಕಾಲ್‌ಗಳು ವಿಮಾನ ನಿಲ್ದಾಣಗಳಲ್ಲಿ ಇರುವಂತೆ ಕಟ್ಟುನಿಟ್ಟಾಗಿರುವುದನ್ನು ಖಚಿತಪಡಿಸಿಕೊಳ್ಳಲು ಐಎಂಎ ಸರ್ಕಾರವನ್ನು ಒತ್ತಾಯಿಸಿದೆ. ಇದು ಕಡ್ಡಾಯ ಭದ್ರತಾ ಅರ್ಹತೆಗಳೊಂದಿಗೆ ಆಸ್ಪತ್ರೆಗಳನ್ನು ಸುರಕ್ಷಿತ ವಲಯಗಳಾಗಿ ಘೋಷಿಸುವುದು, ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸುವುದು, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವುದು ಮತ್ತು ಭವಿಷ್ಯದಲ್ಲಿ ಅಂತಹ ಘಟನೆಗಳನ್ನು ತಡೆಯಲು ಸ್ಪಷ್ಟ ಪ್ರೋಟೋಕಾಲ್‌ಗಳನ್ನು ಸ್ಥಾಪಿಸುವುದನ್ನು ಒಳಗೊಂಡಿರುತ್ತದೆ.

3. ಸುಧಾರಿತ ಕೆಲಸದ ಪರಿಸ್ಥಿತಿಗಳು: ವೈದ್ಯರಿಗೆ ಸುಧಾರಿತ ಕೆಲಸದ ಪರಿಸ್ಥಿತಿಗಳನ್ನು ಸಹ ಐಎಂಎ ಕೇಳಿದೆ. “ಸಂತ್ರಸ್ತರು ಇದ್ದ 36 ಗಂಟೆಗಳ ಡ್ಯೂಟಿ ಶಿಫ್ಟ್ ಮತ್ತು ವಿಶ್ರಾಂತಿ ಪಡೆಯಲು ಸುರಕ್ಷಿತ ಸ್ಥಳಗಳ ಕೊರತೆ ಮತ್ತು ಸಾಕಷ್ಟು ವಿಶ್ರಾಂತಿ ಕೊಠಡಿಗಳು, ರೆಸಿಡೆಂಟ್ ವೈದ್ಯರಿಗೆ ಅನುಕೂಲದ ಕೊರತೆಗಳು ಇವೆ” ಎಂದು ಐಎಂಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಕೋಲ್ಕತ್ತಾ ಅತ್ಯಾಚಾರ-ಕೊಲೆ ಪ್ರಕರಣ: ಸಿಎಂ ಮಮತಾ ರಾಜೀನಾಮೆಗೆ ನಿರ್ಭಯಾ ತಾಯಿ ಒತ್ತಾಯ

4. ಕ್ಷಿಪ್ರ ತನಿಖೆ: ನ್ಯಾಯವನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಒದಗಿಸುವುದನ್ನು ಖಾತ್ರಿಪಡಿಸುವ, ಒಂದು ನಿಗದಿತ ಕಾಲಮಿತಿಯೊಳಗೆ ಅಪರಾಧದ ಬಗ್ಗೆ “ಸೂಕ್ಷ್ಮ ಮತ್ತು ವೃತ್ತಿಪರ ತನಿಖೆ” ಯನ್ನು ಐಎಂಎ ಒತ್ತಾಯಿಸಿದೆ.

5. ಸಂತ್ರಸ್ತೆಯ ಕುಟುಂಬಕ್ಕೆ ಪರಿಹಾರ: ಐಎಂಎ ಅತ್ಯಾಚಾರ ಸಂತ್ರಸ್ತೆಯ ಕುಟುಂಬಕ್ಕೆ ಪರಿಹಾರವನ್ನು ಸಹ ಕೋರಿದೆ. ಸಂತ್ರಸ್ತೆಯ ಕುಟುಂಬಕ್ಕೆ ಸೂಕ್ತ ಮತ್ತು ಗೌರವಾನ್ವಿತ ಪರಿಹಾರವನ್ನು ನೀಡಬೇಕೆಂದು ಐಎಂಎ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ