ನಾಸ್ಕಾಮ್ ಐಟಿ ಕಂಪನಿ ಸಹ-ಸಂಸ್ಥಾಪಕ, ಸಾಫ್ಟವೇರ್ ಉದ್ಯಮಿ ಕೆ.ವಿ.ರಮಣಿ (K V Ramani) 2004ರಲ್ಲಿ ತಮ್ಮ ಫ್ಯೂಚರ್ ಸಾಫ್ಟ್‌ವೇರ್ (Future Software) ಮತ್ತು ಹ್ಯೂಸ್ ಸಾಫ್ಟ್‌ವೇರ್(Hughes Software)ನಿಂದ ನಿರ್ಗಮಿಸಿದ್ದಾರೆ. ಆದರೆ ಹೀಗೆ ನಿರ್ಗಮಿಸುವ ಮೊದಲು ಅವರು ಮಾಡಿದ ಅದ್ಭುತ ಕೆಲಸವೊಂದು ಪ್ರಶಂಸೆಗೆ ಪಾತ್ರವಾಗಿದೆ. ತಾವು ತಮ್ಮ ಫ್ಯೂಚರ್ ಸಾಫ್ಟ್‌ವೇರ್ ಮತ್ತು ಹ್ಯೂಸ್ ಸಾಫ್ಟ್‌ವೇರ್ ವ್ಯವಹಾರಗಳಿಂದ ಹೊರಬರುವ ಹೊತ್ತಿಗೆ ತಮ್ಮ ಒಟ್ಟಾರೆ ಆಸ್ತಿಯಲ್ಲಿ ಶೇ.12ರಷ್ಟನ್ನು ಮಾತ್ರ ಕೆ.ವಿ.ರಮಣಿ ತಮಗಾಗಿ, ಕುಟುಂಬಕ್ಕಾಗಿ ಎಂದು ಇಟ್ಟುಕೊಂಡಿದ್ದಾರೆ. ಉಳಿದ ಶೇ.85ಕ್ಕೂ ಹೆಚ್ಚಿನ ಪ್ರಮಾಣದ ಆಸ್ತಿ, ಹಣವನ್ನು ಶಿರಡಿಯ ಶ್ರೀ ಸಾಯಿ ಟ್ರಸ್ಟ್(Sri Sai Trust)ಗೆ ನೀಡಿದ್ದಾರೆ.
2004ರಲ್ಲಿ ಅವರು ಟ್ರಸ್ಟ್ಗೆ ನೀಡಿದ ಆಸ್ತಿಯ ಮೌಲ್ಯ ಸುಮಾರು 325-350 ಕೋಟಿ ರೂಪಾಯಿ ಆಗಿದೆ. ಅಂದಿನಿಂದಲೂ ಶ್ರೀ ಸಾಯಿ ಟ್ರಸ್ಟ್ ಇಂದಿನವರೆಗೆ ಯಾರಿಂದಲೂ ದೇಣಿಗೆ ಪಡೆದಿಲ್ಲ. ಆದರೆ ಪದವಿ ಶಿಕ್ಷಣ ಪಡೆಯದ ಪಾಲಕರ ಮಕ್ಕಳು, ಪದವಿ ಪಡೆದವರೆ ಅಂಥವರಿಗೆ ಸ್ಕಾಲರ್ಶಿಪ್ ನೀಡುತ್ತಿದೆ. ಇಲ್ಲಿಯವರೆಗೆ ಸಾವಿರಾರು ರೂಪಾಯಿಗಳಷ್ಟು ವಿದ್ಯಾರ್ಥಿ ವೇತನ ನೀಡಿದೆ. ವೈದ್ಯಕೀಯ ತುರ್ತು ನೆರವು ಅಗತ್ಯವಿರುವ 4000 ಮಂದಿಗೆ ಸಹಾಯ ಮಾಡುತ್ತಿದೆ. ಅಷ್ಟೇ ಅಲ್ಲ, ಒಂದು ದಿನಕ್ಕೆ ದೇಶಾದ್ಯಂತ 5000 ಜನರಿಗೆ ಅನ್ನ ನೀಡುತ್ತಿದೆ..ದೇಶಾದ್ಯಂತ 450 ಸಾಯಿಬಾಬಾ ದೇಗುಲಗಳನ್ನು ನಿರ್ಮಿಸಿದೆ.
ರಮಣಿ ಅವರಿಗೀಗ 70 ವರ್ಷ. 2021ರ ಆಗಸ್ಟ್ನಲ್ಲಿ ಸಾಯಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದು, ಅದರ ಸಂಸ್ಥಾಪನಾ ಕುಲಪತಿಗಳಾಗಿದ್ದಾರೆ. ಚೆನ್ನೈನ ಹಳೇ ಮಹಾಬಲಪುರಂ ರಸ್ತೆಯಲ್ಲಿರುವ ಈ ವಿಶ್ವವಿದ್ಯಾಲಯ ವಿವಿಧ ವಿಷಯಗಳ ಅಧ್ಯಯನವನ್ನು ಒಳಗೊಂಡಿದೆ ಮತ್ತು ಎರಡು ಅಥವಾ ಹೆಚ್ಚಿನ ಶೈಕ್ಷಣಿಕ ವಿಭಾಗವನ್ನು ಹೊಂದಿರುವುದು ವಿಶೇಷವಾಗಿದೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಕೆ.ವಿ.ರಮಣಿ, ನಾವು ಶಿಕ್ಷಣವನ್ನು ಸೇವೆಯೆಂದು ಪರಿಗಣಿಸಿದ್ದೇವೆ ಹೊರತು ಅದನ್ನೂ ಒಂದು ಉದ್ಯಮದಂತೆ ನೋಡುತ್ತಿಲ್ಲ. ಶಿಕ್ಷಣವನ್ನು ಸೇವೆಯಂತೆ ನೋಡಿದರೆ ಅಲ್ಲಿ ಒಂದು ರೂಪಾಯಿ ಕೂಡ ತೆಗೆದುಕೊಳ್ಳಬೇಕು ಎನ್ನಿಸುವುದಿಲ್ಲ ಎಂದು ಹೇಳಿದ್ದಾರೆ.
ಪ್ರತಿಭಾಪಲಾಯನದ ಬಗ್ಗೆ ಬೇಸರ
ಇಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಕೆ.ವಿ.ರಮಣಿ, ಭಾರತ ಜಗತ್ತಿನಲ್ಲಿಯೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ದೊಡ್ಡ ದೇಶ. ನಾವು ಇಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಉನ್ನತ ಶಿಕ್ಷಣ ನೀಡಲು ಬಯಸುತ್ತಿದ್ದೇವೆ. ಹೆಚ್ಚು ಉದಯೋನ್ಮುಖ ತಂತ್ರಜ್ಞಾನಗಳು, ಸೇವೆಗಳು ಮತ್ತು ಕೈಗಾರಿಕೆಗಳಲ್ಲಿ ನಮ್ಮ ಯುವಜನರಿಗೆ ಅವಕಾಶ ನೀಡುವುದು ನಮ್ಮ ಉದ್ದೇಶ. ಆದರೆ ಪ್ರತಿಭಾವಂತರು ಹೆಚ್ಚಿನ ಜನರು ವಿದೇಶಗಳಿಗೆ ಹಾರುತ್ತಿದ್ದಾರೆ. ನಾವು ನೀಡುವ ಅವಕಾಶಗಳ ಮೂಲಕ ಅವರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ವರ್ಷವೇ 55 ಸಾವಿರ ಭಾರತೀಯ ವಿದ್ಯಾರ್ಥಿಗಳಿಗೆ ಯುಎಸ್ ವೀಸಾ ನೀಡಲಾಗಿದೆ. ಇದು ಆರ್ಥಿಕತೆಗೂ ಹಿನ್ನಡೆ ತರುವ ವಿಚಾರ ಎಂದು ಹೇಳಿದರು.
ಕೆ.ವಿ.ರಮಣಿ ಅವರು ನಾಸ್ಕಾಮ್ (ಭಾರತದ ಭಾರತದ ರಾಷ್ಟ್ರೀಯ ಸಾಫ್ಟ್‌ವೇರ್ ಮತ್ತು ಸೇವಾ ಕಂಪನಿಗಳ ಸಂಘ)ನ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರು. 1997-98ರ ಅವಧಿಯಲ್ಲಿ ನಾಸ್ಕಾಮ್ನ ಅಧ್ಯಕ್ಷರೂ ಆಗಿದ್ದರು. ಈ ಅವಧಿಯಲ್ಲಿ ನಾಸ್ಕಾಮ್ ಉತ್ತಮ ಬೆಳವಣಿಗೆಯಾಗಿದೆ. ನಾಸ್ಕಾಮ್ ಸಹ ಸಂಸ್ಥಾಪಕರಾಗಿ ನವಭಾರತ ಬ್ರ್ಯಾಂಡ್ ನಿರ್ಮಿಸಿದ್ದಲ್ಲದೆ, ಹಿಂದುಳಿದ ವರ್ಗದವರಿಗೆ ಶಿಕ್ಷಣ, ವೈದ್ಯಕೀಯ ಸೇವೆಗಳನ್ನು ನೀಡುತ್ತಿರುವ ಕಾರಣಕ್ಕೆ ಪ್ರಧಾನಿ ಮೋದಿಯವರಿಂದ ಸನ್ಮಾನಿತರೂ ಆಗಿದ್ದಾರೆ.
ಇದನ್ನೂ ಓದಿ: Diwali 2021 Astrology: ದೀಪಾವಳಿಗೆ ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಹಣಕಾಸು ವರ್ಷ ಭವಿಷ್ಯ