ಭಾರತದ ಎರಡನೇ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ 118ನೇ ಜನ್ಮದಿನ. 1964-66ರಿಂದ ದೇಶದ ಪ್ರಧಾನಿಯಾಗಿದ್ದ ಅವರು, ಅದಕ್ಕೂ ಮೊದಲು ಜವಾಹಾರ್ ಲಾಲ್ ನೆಹರೂ ಕ್ಯಾಬಿನೆಟ್ನಲ್ಲಿ ಪ್ರಮುಖ ಹುದ್ದೆ ನಿಭಾಯಿಸಿದ್ದರು. ಹಾಗೇ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದರು. ಜೈ ಜವಾನ್-ಜೈ ಕಿಸಾನ್ ತತ್ವ ಅವರದ್ದಾಗಿತ್ತು. 1965ರಲ್ಲಿ ಪಾಕ್ ವಿರುದ್ಧ ನಡೆದ ಯುದ್ಧವನ್ನೂ ಮುನ್ನಡೆಸಿದ್ದರು. ಭಾರತ ಮೆಚ್ಚಿದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ 1966ರ ಜನವರಿ 11ರಂದು ಉಜ್ಬೆಕಿಸ್ತಾನ್ದಲ್ಲಿ ನಿಧನರಾದರು. ಶಾಸ್ತ್ರಿ ಮೃತಪಟ್ಟು ಸುಮಾರು 5 ದಶಕಗಳೇ ಕಳೆದುಹೋಗಿದ್ದರೂ, ಅವರ ಸಾವಿನ ಸುತ್ತ ಇರುವ ಒಂದಷ್ಟು ನಿಗೂಢ ಅಂಶಗಳಿಗೆ ಇನ್ನೂ ಒಂದು ಸ್ಪಷ್ಟನೆ ಸಿಕ್ಕಿಲ್ಲ.
ನಿಧನರಾದ ಕ್ಷಣ ಹೇಗಿತ್ತು?
1965ರಲ್ಲಿ ಭಾರತ-ಪಾಕ್ ಯುದ್ಧ ನಡೆದಿತ್ತು. ಅದಾದ ನಂತರ 1966ರ ಜನವರಿ 10ರಂದು ಲಾಲ್ಬಹದ್ದೂರ್ ಶಾಸ್ತ್ರಿ ಪಾಕಿಸ್ತಾನದ ಅಂದಿನ ಅಧ್ಯಕ್ಷ ಅಯೂಬ್ ಖಾನ್ ಜತೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕು ತಾಷ್ಕೆಂಟ್ಗೆ ತೆರಳಿದ್ದರು. ಆದರೆ ಅಯೂಬ್ ಖಾನ್ರನ್ನು ಭೇಟಿಯಾಗಿ ಒಂದೇ ತಾಸಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಶಾಸ್ತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದೇ ಪ್ರತಿಪಾದಿಸಲಾಯಿತಾದರೂ ಹಲವು ಅನುಮಾಗಲೂ ಇಂದಿಗೂ ಹಾಗೇ ಉಳಿದುಹೋಗಿವೆ.
ಅಂದು ಲಾಲ್ ಬಹದ್ದೂರ್ ಶಾಸ್ತ್ರಿ ಮೃತಪಟ್ಟ ಮೇಲೆ ಅವರ ಮುಖ ಮತ್ತು ದೇಹ ನೀಲಿ ಬಣ್ಣಕ್ಕೆ ತಿರುಗಿತ್ತು. ಹೊಟ್ಟೆ, ಬೆನ್ನು, ಕುತ್ತಿಗೆಯ ಮೇಲೆ ಕತ್ತರಿಸಿದ ಗುರುತು ಹಾಗೂ ಬಿಳಿ ಕಲೆಗಳು ಇದ್ದವರು ಎಂದು ಕುಟುಂಬದವರೇ ಹೇಳಿದ್ದಾರೆ. ಆದರೆ ಇವರ ಸಾವಿನ ಕುರಿತಾದ ತನಿಖೆಗೆ ಒಂದು ಸರಿಯಾದ ಫಲಿತಾಂಶವೇ ಸಿಗಲಿಲ್ಲ ಅಥವಾ ಬಹಿರಂಗಪಡಿಸಲಿಲ್ಲ. ಶಾಸ್ತ್ರಿ ಸಾವಿನ ತನಿಖೆ ಸಂಬಂಧಪಟ್ಟ ಯಾವುದೇ ದಾಖಲೆ ಪಾರ್ಲಿಮೆಂಟ್ ಲೈಬ್ರರಿಯಲ್ಲೂ ಇಲ್ಲ. ಸಾವಿನ ಹಿಂದಿನ ಕಾರಣಗಳು ಏನೇ ಇರಲಿ, ಅದಕ್ಕೆ ಸಂಬಂಧಪಟ್ಟ ದಾಖಲೆಗಳು ಯಾಕೆ ನಾಶವಾದವು? ಅಥವಾ ನಾಪತ್ತೆಯಾದವು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
ಲಾಲ್ ಬಹದ್ದೂರ್ ಶಾಸ್ತ್ರಿ ಸಾವಿನ ಕುರಿತಾಗಿರುವ ನಾಲ್ಕು ರಹಸ್ಯಗಳು ಹೀಗಿವೆ..
ಪೋಸ್ಟ್ ಮಾರ್ಟಮ್ ಇಲ್ಲ
ಲಾಲ್ ಬಹದ್ದೂರ್ ಶಾಸ್ತ್ರಿ ಮೃತಪಟ್ಟ ನಂತರ ಅವರ ದೇಹ ನೀಲಿಗಟ್ಟಿತ್ತು. ಮೈಮೇಲೆಲ್ಲ ಬಿಳಿಬಣ್ಣದ ಕಲೆ, ಕತ್ತರಿಸಿದ ಮಾರ್ಕ್ಗಳು ಇರುವುದಾಗಿ ಕುಟುಂಬವೇ ಹೇಳಿತ್ತು. ಅವರಿಗೆ ವಿಷ ಪ್ರಾಶನ ಆಗಿದ್ದರಿಂದಲೇ ಮೈ ನೀಲಿಯಾಗಿರಬಹುದು ಎಂದೂ ಪ್ರತಿಪಾದಿಸಿತ್ತು. ಆದರೆ ನಂತರ ಪೋಸ್ಟ್ ಮಾರ್ಟಮ್ ಕೂಡ ಮಾಡಲಿಲ್ಲ. ಅಷ್ಟಾದರೂ ಮೈಮೇಲೆ ಹೇಗೆ ಕತ್ತರಿಸಿದ ಗುರುತುಗಳು ಬಂದವು? ಲಾಲ್ ಬಹದ್ದೂರ್ ಶಾಸ್ತ್ರಿ ತುಂಬ ಆರೋಗ್ಯವಾಗಿದ್ದರು ಎಂದು ಅವರ ಖಾಸಗಿ ವೈದ್ಯ ಆರ್.ಎನ್.ಚುಗ್ ಅವರೇ ಹೇಳಿದ್ದರು. ಶಾಸ್ತ್ರೀಜಿ ಸಾವಿಗೆ ಸಂಬಂಧಪಟ್ಟಂತೆ ನಾವು ನಮ್ಮ ಮತ್ತು ರಷ್ಯಾ ವೈದ್ಯರ ಮೂಲಕ ವೈದ್ಯಕೀಯ ತನಿಖೆ ನಡೆಸಿದ್ದೇವೆ ಎಂದು 2009ರ ಭಾರತ ಸರ್ಕಾರ ಹೇಳಿಕೊಂಡಿದೆ. ಆದರೆ ಒಂದೇ ಒಂದು ದಾಖಲೆಯೂ ಲಭ್ಯವಿಲ್ಲ.
ಸಾಕ್ಷಿಗೆ ಇದ್ದವರ ದುರಂತ ಅಂತ್ಯ
ಲಾಲ್ ಬಹದ್ದೂರ್ ಶಾಸ್ತ್ರಿ ತಷ್ಕೆಂಟ್ಗೆ ಹೋಗಿದ್ದಾಗ ಅವರೊಂದಿಗೆ ಇದ್ದ ಸೇವಕ ರಾಮ್ನಾಥ್ ಮತ್ತು ಖಾಸಗಿ ವೈದ್ಯ ಡಾ. ಆರ್.ಎನ್.ಚುಗ್ ಅವರನ್ನು ಸಂಸತ್ತಿನ ಸಮಿತಿಯ ಎದುರು ಹಾಜರಾಗುವಂತೆ ಹೇಳಲಾಗಿತ್ತು. ಆದರೆ ಅವರು ದುರಂತ ಅಂತ್ಯ ಕಾಣಬೇಕಾಯಿತು. ಇದಾಗಿದ್ದು 1977ರಲ್ಲಿ. ಸಂಸತ್ತಿನೆದುರು ಸಾಕ್ಷಿ ಹೇಳಲು ಹೊರಟಿದ್ದಾಗ ಡಾ. ಚುಗ್ ಮತ್ತು ಅವರ ಇಡೀ ಕುಟುಂಬ ಅಪಘಾತಕ್ಕೆ ಬಲಿಯಾಯಿತು. ಅವರ ವಾಹನಕ್ಕೆ ಟ್ರಕ್ಡಿಕ್ಕಿ ಹೊಡೆದಿತ್ತು. ವೈದ್ಯರ ಮಗಳು ಬದುಕುಳಿದಳಾದರೂ ಅಂಗವಿಕಲಳಾದಳು. ಇನ್ನು ಸರ್ವಂಟ್ ರಾಮನಾಥ್ ತನಗೆ ಸತ್ಯ ಗೊತ್ತಿದೆ ಎಂದು ಹೇಳಿಕೊಂಡಿದ್ದರೂ ಅದನ್ನು ಬಹಿರಂಗ ಪಡಿಸುವ ಅವರಿಗೂ ಅಪಘಾತವಾಯಿತು. ಕಾರು ಡಿಕ್ಕಿ ಹೊಡೆದು ಕಾಲು ಪೂರ್ತಿಯಾಗಿ ಹೋಗಿದ್ದಲ್ಲದೆ, ನೆನಪಿನ ಶಕ್ತಿಯೂ ಇಲ್ಲದಂತಾಯಿತು.
ಶಾಸ್ತ್ರಿ ಸಾವಿನ ಹಿಂದೆ ಸಿಐಎ?
ಲಾಲ್ ಬಹದ್ದೂರ್ ಶಾಸ್ತ್ರಿ ಸಾವಿಗೆ ಯುನೈಟೆಡ್ ಸ್ಟೇಟಸ್ನ ಕೇಂದ್ರ ಗುಪ್ತಚರ ದಳ (CIA) ಸಂಚು ರೂಪಿಸಿತ್ತಾ ಎಂಬುದೊಂದು ಪ್ರಶ್ನೆ ಇದೆ. ಹಿಂದೊಮ್ಮೆ ಸಿಐಎ ಏಜೆಂಟ್ವೊಬ್ಬ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿ, ಲಾಲ್ ಬಹದ್ದೂರ್ ಶಾಸ್ತ್ರಿ ಸಾವಿನ ಹಿಂದೆ ಸಿಐಎ ಮತ್ತು ಭಾರತದ ಪರಮಾಣು ಭೌತವಿಜ್ಞಾನಿ ಹೋಮಿಬಾಬಾ ಇದ್ದಾರೆ ಎಂಬುದನ್ನು ದೃಢಪಡಿಸಿದ್ದರು. ಆದರೆ ಆ ಬಗ್ಗೆ ಯಾವುದೇ ವಿಶೇಷ ತನಿಖೆ ನಡೆದಂತೆ ಇಲ್ಲ..ದಾಖಲೆಗಳೂ ಇಲ್ಲ. ಭಾರತ ಪರಮಾಣು ರಂಗದಲ್ಲಿ ಸುಧಾರಿತ ರಾಜ್ಯವಾಗಿ ಹೊರಹೊಮ್ಮುತ್ತಿದೆ. ಇದು ಯುಎಸ್ಗೆ ಅಪಾಯ ಎಂಬ ಕಾರಣಕ್ಕೆ ಲಾಲ್ ಬಹದ್ದೂರ್ ಶಾಸ್ತ್ರಿ ಹತ್ಯೆಯಾಗಿದೆ. ಹಾಗೇ, ಇಂಡೋ-ರಷ್ಯಾ ಪ್ರಾಬಲ್ಯ ಕೊನೆಗೊಳಿಸಬೇಕಾಗಿತ್ತು ಎಂದು ಸಿಐಎ ಏಜೆಂಟ್ ಹೇಳಿದ್ದಾಗಿ ವರದಿಯಾಗಿತ್ತು.
ಆರ್ಟಿಐ ಮಾಹಿತಿಯೂ ಸ್ಪಷ್ಟನೆಯಿಲ್ಲ
ಲಾಲ್ ಬಹದ್ದೂರ್ ಶಾಸ್ತ್ರಿ ಸಾವಿನ ಬಗ್ಗೆ ಮಾಹಿತಿ ಕೇಳಿ ಅನೂಜ್ ಧರ್ ಎಂಬುವರು ಆರ್ಟಿಐಗೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಮಂತ್ರಿ ಕಚೇರಿ, ಲಾಲ್ ಬಹದ್ದೂರ್ ಶಾಸ್ತ್ರಿ ಸಾವಿನ ಸಂಬಂಧ ಒಂದೇ ಒಂದು ವರ್ಗೀಕೃತ ದಾಖಲೆ ಲಭ್ಯವಿದೆ. ಆದರೆ ಅದು ವಿದೇಶಿ ಸಂಬಂಧಗಳ ಮೇಲೆ ಪ್ರಭಾವ ಬೀರಬಹುದು ಎಂದಿತ್ತು. ಒಟ್ಟಾರೆ ಯಾವ ಒಂದು ಪ್ರಶ್ನೆಗೂ ನಿಖರ ಉತ್ತರವೇ ಇಲ್ಲದಂತಾಗಿದೆ.
ಇದನ್ನೂ ಓದಿ: Vijayanagara district: ಇಂದು ಕನ್ನಡ ನಾಡಿಗೆ ಸಂಭ್ರಮ- 6 ತಾಲೂಕಿನ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆಗೆ ಅಧಿಕೃತ ಚಾಲನೆ