ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ (Land For Jobs Case) ಸಂಬಂಧಿಸಿದಂತೆ, ಬಿಜೆಪಿ (BJP) ಜಾರಿ ನಿರ್ದೇಶನಾಲಯ (ED) ಮುಖಾಂತರ ನನ್ನ ಮಗಳು, ಮೊಮ್ಮಗಳು ಮತ್ತು ಗರ್ಭಣಿಯಾದ ನನ್ನ ಸೊಸೆಗೆ ಕಿರುಕುಳ ನೀಡುತ್ತಿದೆ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ (Lalu Prasad Yadav) ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. “ಬಿಜೆಪಿ ದ್ವೇಷದಿಂದ ಆಧಾರ ರಹಿತವಾದ ಆರೋಪ ಮಾಡುತ್ತಿದೆ. ನಾನು ತುರ್ತು ಪರಿಸ್ಥಿತಿಯ ಕರಾಳದಿನಗಳನ್ನು ನೋಡಿ, ಎದುರಿಸಿ ಬಂದಿದ್ದೇನೆ. ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದ್ದು, ನಿನ್ನೆ (ಮಾ.10) ರಂದು ಬಿಜೆಪಿಯ ಇಡಿ ಅಧಿಕಾರಿಗಳು ನನ್ನ ಹೆಣ್ಣುಮಕ್ಕಳು, ಪುಟ್ಟ ಮೊಮ್ಮಗಳು ಮತ್ತು ಗರ್ಭಿಣಿ ಸೊಸೆಯನ್ನು 15 ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಇದಕ್ಕೆ ನಾನು ಬಗ್ಗುವುದಿಲ್ಲ. ಬಿಜೆಪಿ ಇಷ್ಟು ಕೆಳಮಟ್ಟದ ರಾಜಕಾರಣ ಮಾಡಬಾರದು” ಎಂದು ಟ್ವೀಟ್ ಮಾಡಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ಬಿಜೆಪಿ (BJP) ವಿರುದ್ಧ ನಾನು ಸೈದ್ಧಾಂತಿಕ ಹೋರಾಟವನ್ನು ಮುಂದುವರೆಸುತ್ತೇನೆ ಎಂದು ಹೇಳಿದರು. “ನಾನು ಅವರ ಮುಂದೆ ಎಂದಿಗೂ ತಲೆಬಾಗಲ್ಲ. ನನ್ನ ಕುಟುಂಬ ಮತ್ತು ಪಕ್ಷದ ಯಾರೂ ನಿಮ್ಮ ರಾಜಕೀಯದ ಮುಂದೆ ತಲೆಬಾಗುವುದಿಲ್ಲ” ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ (ಮಾ.10) ರಂದು ಇಡಿ ಅಧಿಕಾರಿಗಳು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ದೆಹಲಿ ಮೆನೆಯಲ್ಲಿ ಶೋಧ ನಡೆಸಿದ್ದರು. ಮಾರ್ಚ್ 6 ರಂದು ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ದೇವಿಯವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಶನಿವಾರ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ತೇಜಸ್ವಿ ಯಾದವ್‌ಗೆ ಸಮನ್ಸ್ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಮನೆ ಮೇಲೆ ಇ.ಡಿ ದಾಳಿ
ನಿನ್ನೆ (ಮಾ.10) ರಂದು ಹಗರಣಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ್ ಯಾದವ್ ಅವರ ಮೂವರು ಪುತ್ರಿಯರು ಹಾಗೂ ಆರ್‌ಜೆಡಿ ನಾಯಕರ ಸ್ಥಳಗಳು ಸೇರಿದಂತೆ ಅನೇಕ ಕಡೆಗಳಲ್ಲಿ ಇಡಿ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದರು. ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಿಹಾರದ ಪಟ್ನಾ, ದೆಹಲಿ, ರಾಂಚಿ, ಮುಂಬೈ ಸೇರಿದಂತೆ ಅನೇಕ ಕಡೆಗಳಲ್ಲಿ ಇಡಿ ಶೋಧ ಕಾರ್ಯ ನಡೆಸಿತ್ತು.
ಹೆಸರೇ ಹೇಳುವಂತೆ, ಸರಕಾರಿ ಉದ್ಯೋಗ ಪಡೆಯಲು ಬಯಸುವವರಿಂದ ಭೂಮಿ ಪಡೆದು ಅವರಿಗೆ ಉದ್ಯೋಗ ನೀಡುವಂತಹ ಹಗರಣ ಇದಾಗಿದೆ. 2004 ರಿಂದ 2009ರ ಕೇಂದ್ರ ಕಾಂಗ್ರೆಸ್ ಸರಕಾರದಲ್ಲಿ ಲಾಲು ಪ್ರಸಾದ್ ಯಾದವ್ ಅವರು ರೈಲ್ವೆ ಖಾತೆ ಸಚಿವರಾಗಿದ್ದರು. ಈ ವೇಳೆ ಬಿಹಾರದ ಅನೇಕರಿಗೆ ರೈಲ್ವೆ ಉದ್ಯೋಗ ನೀಡಲು ಲಾಲು ಮತ್ತು ಅವರ ಕುಟುಂಬದವರು ಈ ಹಗರಣ ನಡೆಸಿದ್ದರು ಎಂಬ ಆರೋಪವಿದೆ.
ಉದ್ಯೋಗದ ಸಲುವಾಗಿ ಜನರಿಂದ ಕಡಿಮೆ ದರದಲ್ಲಿ ಇವರು ಭೂಮಿಗಳನ್ನು ಖರೀದಿ ಮಾಡುತ್ತಿದ್ದರು ಎಂಬ ಆರೋಪವಿದೆ. ಈ ಮೂಲಕ ಲಾಲು ಮತ್ತು ಕುಟುಂಬವು ಸಾಕಷ್ಟು ಆಸ್ತಿ ಮಾಡಿದೆ ಎನ್ನಲಾಗುತ್ತಿದೆ. ಲಾಲು ಪ್ರಸಾದ್ ಯಾದವ್ ಮಾತ್ರವಲ್ಲದೆ ಅವರ ಪುತ್ರ ತೇಜಸ್ವಿ ಯಾದವ್, ಹೆಣ್ಣು ಮಕ್ಕಳಾದ ಹೇಮಾ ಮತ್ತು ಮಿಸಾ ಅವರನ್ನೂ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:07 pm, Sat, 11 March 23