ದೆಹಲಿ: ಲೋಕಸಭೆಯಲ್ಲಿ ಸೋಮವಾರ ಎಸ್ಪಿಜಿ ತಿದ್ದುಪಡಿ ವಿಧೇಯಕ ಮಂಡನೆಯಾಗಿತ್ತು. ಈ ತಿದ್ದುಪಡಿ ವಿಧೇಯಕದ ಕುರಿತು ಬುಧವಾರ ಲೋಕಸಭೆಯಲ್ಲಿ ಚರ್ಚೆ ನಡೆದು, ಎಸ್ಪಿಜಿ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ಕೂಡ ದೊರೆತಿದೆ. ತಿದ್ದುಪಡಿ ವಿಧೇಯಕದ ಪ್ರಕಾರ ಪ್ರಧಾನಿ ಮತ್ತು ಅವರ ಜೊತೆಗೆ ವಾಸವಿರುವ ಕುಟುಂಬಸ್ಥರನ್ನು ಹೊರತುಪಡಿಸಿ ಇತರರಿಗೆ ಎಸ್ಪಿಜಿ ಭದ್ರತೆ ಒದಗಿಸುವಂತಿಲ್ಲ. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸಮರಕ್ಕೆ ಕಾರಣವಾಗಿದೆ.
ಇದ್ದಕ್ಕಿದ್ದಂತೆ ಸೆಕ್ಯೂರಿಟಿ ವಾಪಸ್ ಪಡೆದಿದ್ದಕ್ಕೆ ಕಾಂಗ್ರೆಸ್ ಗರಂ..!
ಎಸ್ಪಿಜಿ ತಿದ್ದುಪಡಿ ವಿಧೇಯಕದ ಚರ್ಚೆ ವೇಳೆ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಹಿಂದಿನ ಸರ್ಕಾರಗಳು ಎಸ್ಪಿಜಿ ಕಾಯ್ದೆಯನ್ನ ತಮಗೆ ಇಷ್ಟ ಬಂದಂತೆ ಬದಲಾಯಿಸಿದ್ರು. ಈಗ ಇದನ್ನ ಸರಿಪಡಿಸೋ ಕಾಲ ಸನ್ನಿಹಿತವಾಗಿದೆ. ಹೀಗಾಗಿ ತಿದ್ದುಪಡಿ ವಿಧೇಯಕ ಮಂಡಿಸಿದ್ದೇವೆ ಎಂದು ಹೇಳಿದರು. ಇದೇ ಚರ್ಚೆಯಲ್ಲಿ ಮಾತನಾಡಿದ ಮನೀಷ್ ತಿವಾರಿ, ಗಾಂಧಿ ಪರಿವಾರಕ್ಕೆ ನೀಡಿದ್ದ ಎಸ್ಪಿಜಿ ಭದ್ರತೆಯನ್ನ ಏಕಾಏಕಿ ವಾಪಸ್ ಪಡೆದಿದ್ಯಾಕೆ ಅಂತಾ ಪ್ರಶ್ನಿಸಿದ್ರು.
ಅಲ್ದೆ, ರಾಜಕೀಯ ವೈಷಮ್ಯಕ್ಕಾಗಿ ಎಸ್ಪಿಜಿ ಭದ್ರತೆ ವಾಪಸ್ ಪಡೆಯಲಾಗಿದೆ ಅಂತಾ ಆರೋಪಿಸಿದ್ರು. ಇದಕ್ಕೆ ತಿರುಗೇಟು ನೀಡಿದ ಅಮಿತ್ ಶಾ, ಎಸ್ಪಿಜಿ ಭದ್ರತೆಯಲ್ಲಿರೋರು ಪಾಲಿಸಬೇಕಾದ ನಿಯಮಗಳನ್ನ ಗಾಂಧಿ ಕುಟುಂಬ ಹಲವು ಬಾರಿ ಉಲ್ಲಂಘಿಸಿದೆ. ಎಸ್ಪಿಜಿ ಭದ್ರತೆಯನ್ನ ಮೀರಿ ನೂರು ಕಿಲೋ ಮೀಟರ್ ವೇಗದಲ್ಲಿ ಐಷಾರಾಮಿ ಬೈಕ್ ಚಲಾಯಿಸಿದ್ದಾರೆ ಇದಕ್ಕೇನು ಹೇಳ್ತೀರಿ ಅಂತಾ ಪ್ರಶ್ನಿಸಿದ್ರು.
ಎಸ್ಪಿಜಿ ತಿದ್ದುಪಡಿ ವಿಧೇಯಕದ ಚರ್ಚೆಯಲ್ಲಿ ಭಾಗವಹಿಸಿದ್ದ ಡಿಎಂಕೆ ಸಂಸದ ಎ.ರಾಜಾ, ನಾಥೂರಾಮ್ ಗೋಡ್ಸೆ ತಾನು ಗಾಂಧಿಯನ್ನ ಕೊಂದಿದ್ದೇಕೆ ಅಂತಾ ಹೇಳಿಕೊಂಡಿದ್ದಾನೆ ಅಂತಾ ಉದಾಹರಣೆ ನೀಡಿದ್ರು. ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸಂಸದೆ ಪ್ರಗ್ಯಾಸಿಂಗ್ ಠಾಕೂರ್, ನಾಥೂರಾಮ್ ಗೋಡ್ಸೆ ದೇಶಭಕ್ತನಾಗಿದ್ದ. ಅದನ್ನ ಈಗ ಏಕೆ ಪ್ರಸ್ತಾಪಿಸುತ್ತೀರಿ ಅಂತಾ ಆಕ್ಷೇಪಿಸಿದ್ರು. ಇದು ಲೋಕಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯ್ತು. ಈ ವೇಳೆ ಮಧ್ಯಪ್ರವೇಶಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇವಲ ಎ.ರಾಜಾ ಮಾತುಗಳು ಮಾತ್ರ ಕಡತಕ್ಕೆ ಹೋಗಲಿ. ಪ್ರಗ್ಯಾಸಿಂಗ್ ಠಾಕೂರ್ ಹೇಳಿದ್ದನ್ನ ಕಡತದಿಂದ ತೆಗೆಯಿರಿ ಅಂತಾ ಹೇಳಿದ್ರು.
ರಾಜ್ಯಸಭೆಯಲ್ಲಿ ಬುಧವಾರ ದೇಶದ ಆರ್ಥಿಕತೆಯ ಕುರಿತು ಚರ್ಚೆ ನಡೀತು. ಈ ವೇಳೆ ಉತ್ತರ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ದೇಶದ ಆರ್ಥಿಕ ಪ್ರಗತಿ ಕುಂಠಿತವಾಗಿರೋದು ನಿಜ. ಆದ್ರೆ, ಆರ್ಥಿಕ ಹಿಂಜರಿತ ಆಗ್ತಿದೆ ಅನ್ನೋದನ್ನ ಒಪ್ಪಲು ಸಾಧ್ಯವಿಲ್ಲ. ವರ್ಷದ ಆರಂಭದಲ್ಲಿ ಆರ್ಥಿಕ ಪ್ರಗತಿ ನಿಧಾನವಾಗಿದ್ದು ನಿಜ, ಆದ್ರೆ ಕೇಂದ್ರ ಸರ್ಕಾರ ಆರ್ಥಿಕ ಪುನಶ್ಚೇತನಕ್ಕೆ ತೆಗೆದುಕೊಂಡ ಕ್ರಮಗಳಿಂದ ಆಟೋಮೊಬೈಲ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಿಧಾನವಾಗಿ ಪರಿಸ್ಥಿತಿ ಸುಧಾರಿಸುತ್ತಿದೆ ಅಂತಾ ಹೇಳಿದ್ರು. ನಿರ್ಮಲಾ ಸೀತಾರಾಮನ್ ನೀಡಿದ ಉತ್ತರದಿಂದ ತೃಪ್ತರಾಗದ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದ್ರು.
Published On - 11:11 am, Thu, 28 November 19