ದೆಹಲಿ, ಜು.31: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಾಳೆ (ಆ.1) ಮಹಾರಾಷ್ಟ್ರದ ಪುಣೆಗೆ ಭೇಟಿ ನೀಡಲಿದ್ದು, ಅನೇಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು (Lokmanya Tilak National Award) ತಿಲಕ್ ಸ್ಮಾರಕ ಮಂದಿರ ಟ್ರಸ್ಟ್ (ಹಿಂದ್ ಸ್ವರಾಜ್ ಸಂಘ) ಪ್ರದಾನ ಮಾಡಲಿದೆ. ಜತೆಗೆ ಅವರು ಪುಣೆಯಯಲ್ಲಿರುವ ದಗ್ದುಶೇತ್ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ ಎಂದು ಪ್ರಧಾನ ಮಂತ್ರಿಗಳ ಕಛೇರಿ ತಿಳಿಸಿದೆ. ಬೆಳಿಗ್ಗೆ 11 ಗಂಟೆಗೆ ದಗ್ದುಶೇತ್ ದೇವಾಲಯದಲ್ಲಿ ಪೂಜೆ ಸಲ್ಲಿಸಿ, 11.45ಕ್ಕೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ನಂತರ 12.45ಕ್ಕೆ ನೂತನ ಮೆಟ್ರೋ ರೈಲು ಸಂಚಾರಕ್ಕೆ ಚಾಲನೆ ಮತ್ತು ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದೆ.
ಪುಣೆ ಮೆಟ್ರೋ ಮೊದಲ ಹಂತದ ಕಾರಿಡಾರ್ ಕಾಮಗಾರಿ ಪೂರ್ಣಗೊಂಡಿದೆ. ಇದೀಗ ರೈಲು ಸಂಚಾರಕ್ಕೆ ಸಿದ್ಧಗೊಂಡಿದ್ದು, ನಾಳೆ ಪ್ರಧಾನಿ ಮೋದಿ ಮೆಟ್ರೋಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಈ ಮೆಟ್ರೋ ಫುಗೆವಾಡಿ ನಿಲ್ದಾಣದಿಂದ ಸಿವಿಲ್ ಕೋರ್ಟ್ ನಿಲ್ದಾಣದವರೆಗೆ ಹಾಗೂ ಗಾರ್ವೇರ್ ಕಾಲೇಜು ನಿಲ್ದಾಣದಿಂದ ರೂಬಿ ಹಾಲ್ ಕ್ಲಿನಿಕ್ ನಿಲ್ದಾಣದವರೆಗೆ ಸಂಚಾರಿಸಲಿದೆ ಎಂದು ಪ್ರಧಾನ ಮಂತ್ರಿಗಳ ಕಛೇರಿ ತಿಳಿಸಿದೆ. ಈ ಯೋಜನೆಗೆ 2016ರಲ್ಲಿ ಪ್ರಧಾನಿ ಮೋದಿ ಅವರು ಅಡಿಕಲ್ಲು ಹಾಕಿದ್ದರು. ಇನ್ನು ಈ ಮೆಟ್ರೋ ಪುಣೆ ನಗರದ ಪ್ರಮುಖ ಸ್ಥಳಗಳಾದ ಶಿವಾಜಿ ನಗರ, ಸಿವಿಲ್ ಕೋರ್ಟ್, ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಕಚೇರಿ, ಪುಣೆ ಆರ್‌ಟಿಒ ಮತ್ತು ಪುಣೆ ರೈಲು ನಿಲ್ದಾಣವನ್ನು ಸಂಪರ್ಕಿಸಲಿದೆ ಎಂದು ಹೇಳಿದೆ.
ದೇಶದ್ಯಾಂತ ಆಧುನೀಕತೆ ಜತೆಗೆ ಪರಿಸರ ಸ್ನೇಹಿ ಸಾರಿಗೆ ಸಂಪರ್ಕಗಳನ್ನು ನೀಡುವುದು ಸರ್ಕಾರದ ಗುರಿಯಾಗಿದೆ, ಆ ನಿಟ್ಟಿನಲ್ಲಿ ಈ ಯೋಜನೆ ಮಹತ್ವವನ್ನು ಪಡೆದಿದೆ. ರಾಷ್ಟ್ರದಾದ್ಯಂತ ಇಂತಹ ಯೋಜನೆಗಳನ್ನು ತರಲು ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಪ್ರಧಾನ ಮಂತ್ರಿಗಳ ಕಛೇರಿ ತಿಳಿಸಿದೆ. ಮೆಟ್ರೋಗೆ ಚಾಲನೆ ನೀಡಿದ ನಂತರ ಪ್ರಧಾನಿ ಮೋದಿ ಅವರು ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ (ಪಿಸಿಎಂಸಿ) ಅಡಿಯಲ್ಲಿ ತ್ಯಾಜ್ಯದಿಂದ ಇಂಧನ ತಯಾರಿಸುವ ಸ್ಥಾವರಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಈ ಸ್ಥಾವರವನ್ನು 300 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ವಾರ್ಷಿಕವಾಗಿ ಸುಮಾರು 2.5 ಲಕ್ಷ ಮೆ.ಟನ್ ತ್ಯಾಜ್ಯವನ್ನು ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಯುಎಸ್ ಸಂಸತ್ತಿನಲ್ಲೂ ನಮಸ್ಕಾರ ಎನ್ನುತ್ತಲೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ
ಇನ್ನು ಪ್ರಧಾನಿ ಮೋದಿ ಈ ಕಾರ್ಯಕ್ರಮದ ಜತೆಗೆ ಅವರು ಬಡವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ (Pradhan Mantri Awas Yojana) ನಿರ್ಮಿಸಲಾದ 1,280 ಕ್ಕೂ ಹೆಚ್ಚು ಮನೆಗಳನ್ನು ಹಸ್ತಾಂತರಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮಂತ್ರಿ ಮೋದಿಯವರಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದೆ.
ಆಗಸ್ಟ್ 1 ಲೋಕಮಾನ್ಯ ತಿಲಕರ ಪುಣ್ಯತಿಥಿ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಧಾನಿ ಮೋದಿ ಈ ಪ್ರಶಸ್ತಿಗೆ ಭಾಜನರಾದ 41ನೇ ವ್ಯಕ್ತಿ. ಈ ಹಿಂದೆ ಡಾ. ಶಂಕರ್ ದಯಾಳ್ ಶರ್ಮಾ, ಪ್ರಣಬ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ, ಇಂದಿರಾ ಗಾಂಧಿ, ಮನಮೋಹನ್ ಸಿಂಗ್, ಎನ್.ಆರ್. ನಾರಾಯಣ ಮೂರ್ತಿ, ಇ. ಶ್ರೀಧರನ್ ಮುಂತಾದ ಗಣ್ಯರಿಗೂ ನೀಡಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:55 am, Mon, 31 July 23