ಸಮ್ಮತಿಯ ಸೆಕ್ಸ್​ ವಯಸ್ಸಿನ ಮಿತಿ 18ರಿಂದ 16ಕ್ಕೆ ಇಳಿಸಿ; ಸರ್ಕಾರಕ್ಕೆ ಮಧ್ಯ ಪ್ರದೇಶ ಹೈಕೋರ್ಟ್ ಸಲಹೆ

|

Updated on: Jul 01, 2023 | 4:46 PM

ಸಮ್ಮತಿಯ ದೈಹಿಕ ಸಂಪರ್ಕದ ವಯಸ್ಸಿನ ಮಿತಿಯನ್ನು ಕೇಂದ್ರ ಸರ್ಕಾರವು 18ಕ್ಕೆ ಹೆಚ್ಚಳ ಮಾಡಿತ್ತು. ಇದರಿಂದಾಗಿ ಸಮ್ಮತಿಯ ಸೆಕ್ಸ್​ ಆಗಿದ್ದರೂ ಒಂದು ವೇಳೆ ಪ್ರಕರಣ ದಾಖಲಾದರೆ ಅದು ಪೋಕ್ಸೊ ಅಡಿ ಬರುತ್ತಿತ್ತು.

ಸಮ್ಮತಿಯ ಸೆಕ್ಸ್​ ವಯಸ್ಸಿನ ಮಿತಿ 18ರಿಂದ 16ಕ್ಕೆ ಇಳಿಸಿ; ಸರ್ಕಾರಕ್ಕೆ ಮಧ್ಯ ಪ್ರದೇಶ ಹೈಕೋರ್ಟ್ ಸಲಹೆ
ಸಾಂದರ್ಭಿಕ ಚಿತ್ರ
Follow us on

ಗ್ವಾಲಿಯರ್: ಪುರುಷ ಮತ್ತು ಸ್ತ್ರೀಯ ನಡುವಣ ಸಹಮತದ ದೈಹಿಕ ಸಂಬಂಧದ (ಸಮ್ಮತಿಯ ಸೆಕ್ಸ್) ವಯಸ್ಸನ್ನು 18 ವರ್ಷದಿಂದ 16 ವರ್ಷಕ್ಕೆ ಇಳಿಸುವಂತೆ ಮಧ್ಯಪ್ರದೇಶ ಹೈಕೋರ್ಟ್‌ನ (Madhya Pradesh High Court) ಗ್ವಾಲಿಯರ್ ಪೀಠವು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. 2020ರ ಜುಲೈ 17ರಂದು ವರದಿಯಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ದೀಪಕ್ ಕುಮಾರ್ ಅಗರ್ವಾಲ್ ಅವರ ಏಕಸದಸ್ಯ ಪೀಠವು ಈ ಸಲಹೆ ನೀಡಿದೆ.

ಭಾರತೀಯ ದಂಡಸಂಹಿತೆ (ಐಪಿಸಿ), ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಮತ್ತು ಐಟಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ರಾಹುಲ್ ಚಂದೇಲ್ ಜಾದವ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಗರ್ವಾಲ್ ವಿಚಾರಣೆ ನಡೆಸಿದ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಕರಣದ ಸೆಷನ್ಸ್ ವಿಚಾರಣೆಯೂ ಬಾಕಿ ಇತ್ತು.

ಸಮ್ಮತಿಯ ದೈಹಿಕ ಸಂಪರ್ಕದ ವಯಸ್ಸಿನ ಮಿತಿಯನ್ನು ಕೇಂದ್ರ ಸರ್ಕಾರವು 18ಕ್ಕೆ ಹೆಚ್ಚಳ ಮಾಡಿತ್ತು. ಇದರಿಂದಾಗಿ ಸಮ್ಮತಿಯ ಸೆಕ್ಸ್​ ಆಗಿದ್ದರೂ ಒಂದು ವೇಳೆ ಪ್ರಕರಣ ದಾಖಲಾದರೆ ಅದು ಪೋಕ್ಸೊ ಅಡಿ ಬರುತ್ತಿತ್ತು. ಈ ಬಗ್ಗೆ ಪ್ರಸ್ತಾಪಿಸಿದ ನ್ಯಾಯಪೀಠ, ಇದರಿಂದ ಸಮಾಜದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಈಗ 14 ವರ್ಷ ವಯಸ್ಸಾಗುವಾಗಲೇ ಪ್ರತಿಯೊಬ್ಬ ಹುಡುಗ ಅಥವಾ ಹುಡುಗಿ ಪ್ರೌಢಾವಸ್ಥೆಯನ್ನು ತಲುಪುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳ ಲಭ್ಯತೆ, ಅರಿವು ಮತ್ತು ಸುಲಭವಾಗಿ ದೊರೆಯುವ ಇಂಟರ್ನೆಟ್ ಸಂಪರ್ಕದಿಂದಾಗಿ ಚಿಕ್ಕ ವಯಸ್ಸಿನಲ್ಲೇ ಲೈಂಗಿಕತೆಯ ಕುರಿತಾದ ಅರಿವು ಹೆಚ್ಚಾಗುತ್ತಿದೆ ಎಂದು ಹೇಳಿದೆ.

ಸಾಮಾಜಿಕ ಮಾಧ್ಯಮಗಳು, ಇಂಟರ್ನೆಟ್ ಪ್ರಭಾವದಿಂದಾಗಿ ಹೆಣ್ಣು ಮತ್ತು ಗಂಡು ಮಕ್ಕಳು ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ಈ ಆಕರ್ಷಣೆಗಳು ಒಪ್ಪಿಗೆಯೊಂದಿಗೆ ದೈಹಿಕ ಸಂಬಂಧ ಹೊಂದಲು ಕಾರಣವಾಗುತ್ತಿದೆ. ಇಂಥ ಪ್ರಕರಣಗಳಲ್ಲಿ, ಪುರುಷರನ್ನು ಅಪರಾಧಿಗಳು ಎನ್ನಲಾಗದು. ಅವರು ಹೆಣ್ಣಿನ ಸಂಪರ್ಕಕ್ಕೆ ಬಂದಾಗ ವಯಸ್ಸಿನ ವಿಷಯದಿಂದ ದೈಹಿಕ ಸಂಬಂಧಗಳನ್ನು ಬೆಳೆಸಿಕೊಳ್ಳುವಂತಾಗುತ್ತದೆ. ಈ ಕಾರಣಕ್ಕಾಗಿಯೇ, ಭಾರತೀಯ ದಂಡಸಂಹಿತೆಯಲ್ಲಿ, 16 ವರ್ಷಗಳ ವಯಸ್ಸಿನ ಮಿತಿಯನ್ನು ನಿಗದಿ ಮಾಡಲಾಗಿತ್ತು ಎಂದು ಪೀಠ ಹೇಳಿರುವುದಾಗಿ ‘ಎಎನ್​ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ತೀಸ್ತಾ ಸೆಟಲ್ವಾಡ್ ಜಾಮೀನು ಅರ್ಜಿ ತಿರಸ್ಕೃತ; ತಕ್ಷಣವೇ ಶರಣಾಗುವಂತೆ ಗುಜರಾತ್ ಹೈಕೋರ್ಟ್ ಆದೇಶ

ಸಾಮಾನ್ಯವಾಗಿ, ಹದಿಹರೆಯದ ಹುಡುಗಿಯರು ಮತ್ತು ಹುಡುಗರು ಸ್ನೇಹ ಬೆಳೆಸುತ್ತಾರೆ. ನಂತರದ ಆಕರ್ಷಣೆಯಿಂದಾಗಿ ದೈಹಿಕ ಸಂಬಂಧಗಳನ್ನು ಬೆಳೆಸುತ್ತಾರೆ. ಆದರೆ, ಇದರಿಂದಾಗಿ ಸಮಾಜದಲ್ಲಿ ಹುಡುಗನನ್ನು ಅಪರಾಧಿಯಂತೆ ನೋಡಲಾಗುತ್ತದೆ. ಇಂದು, ಹೆಚ್ಚಿನ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಕಾನೂನು ವೈಪರೀತ್ಯದಿಂದ ಹದಿಹರೆಯದ ಹುಡುಗರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ, ಮೊದಲಿನಂತೆಯೇ ಸಮ್ಮತಿಯ ವಯಸ್ಸನ್ನು 18 ರಿಂದ 16 ವರ್ಷಕ್ಕೆ ಇಳಿಸುವ ಬಗ್ಗೆ ಕೇಂದ್ರ ಸರ್ಕಾರ ಯೋಚಿಸಬೇಕೆಂದು ನಾನು ವಿನಂತಿಸುತ್ತೇನೆ. ಅನ್ಯಾಯವನ್ನು ಸರಿಪಡಿಸಲು ತಿದ್ದುಪಡಿಗಳನ್ನು ಮಾಡಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ.

ರಾಹುಲ್ ಚಂದೇಲ್ ಜಾದವ್ ವಿರುದ್ಧ ಪೋಕ್ಸೋ ಅಡಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ನ್ಯಾಯಪೀಠ ಕೇಂದ್ರಕ್ಕೆ ಈ ಸಲಹೆ ನೀಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ