ಮಧ್ಯ ಪ್ರದೇಶ: ಲಿವ್​ಇನ್ ಸ್ನೇಹಿತೆಯನ್ನು ಕೊಂದು ಫ್ರಿಡ್ಜ್​ನಲ್ಲಿಟ್ಟ ವಿವಾಹಿತ! ಬರೋಬ್ಬರಿ 8 ತಿಂಗಳು ಅಲ್ಲೇ ಇತ್ತು ಮೃತದೇಹ

|

Updated on: Jan 11, 2025 | 1:36 PM

ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನೇ ಹೋಲುವಂತಹ ಭೀಕರ ಕೃತ್ಯವೊಂದು ಮಧ್ಯಪ್ರದೇಶದಲ್ಲಿ ಘಟಿಸಿದೆ. ಲಿವ್ ಇನ್ ಸ್ನೇಹಿತೆಯನ್ನು ವಿವಾಹಿತನೋರ್ವ ಕೊಂದು 8 ತಿಂಗಳ ಕಾಲ ಫ್ರಿಡ್ಜ್​ನಲ್ಲಿಟ್ಟಿದ್ದಾನೆ. ಪ್ರಕರಣ ಈಗ ಬೆಳಕಿಗೆ ಬಂದಿದ್ಹೇಗೆ? ಹಂತಕನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ಹೇಗೆ ಎಂಬ ಮಾಹಿತಿ ಇಲ್ಲಿದೆ.

ಮಧ್ಯ ಪ್ರದೇಶ: ಲಿವ್​ಇನ್ ಸ್ನೇಹಿತೆಯನ್ನು ಕೊಂದು ಫ್ರಿಡ್ಜ್​ನಲ್ಲಿಟ್ಟ ವಿವಾಹಿತ! ಬರೋಬ್ಬರಿ 8 ತಿಂಗಳು ಅಲ್ಲೇ ಇತ್ತು ಮೃತದೇಹ
ಲಿವ್​ಇನ್ ಸ್ನೇಹಿತೆಯನ್ನು ಕೊಂದು ಫ್ರಿಡ್ಜ್​ನಲ್ಲಿಟ್ಟ ವಿವಾಹಿತ!
Follow us on

ಭೋಪಾಲ್, ಜನವರಿ 11: ವಿವಾಹಿತನೊಬ್ಬ ಲಿವ್​ಇನ್ ರಿಲೇಶನ್​ ಶಿಪ್​ನಲ್ಲಿದ್ದ ಸ್ನೇಹಿತೆಯನ್ನ ಕೊಂದು, ಮೃತದೇಹದ ಕೈಗಳನ್ನು ಕುತ್ತಿಗೆಗೆ ಬಲವಾಗಿ ಕಟ್ಟಿ ಫ್ರಿಡ್ಜ್​ನಲ್ಲಿಟ್ಟಿದ್ದ ಭೀಬತ್ಸ ಕೃತ್ಯ ಮಧ್ಯಪ್ರದೇಶದ ದೇವಾಸ್ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಬರೋಬ್ಬರಿ 8 ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ಆರೋಪಿ ಸಂಜಯ್ ಪಾಟಿದಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ದೇವಾಸ್ ನಗರದಲ್ಲಿ ನಡೆದಿದ್ದೇನು?

ಉಜ್ಜಯಿನಿ ನಿವಾಸಿಯಾಗಿರುವ ಆರೋಪಿ ಸಂಜಯ್ ಪಾಟಿದಾರ್ ಕಳೆದ ಐದು ವರ್ಷಗಳಿಂದ ಪ್ರತಿಭಾ ಯಾನೆ ಪಿಂಕಿ ಪ್ರಜಾಪತಿ ಜೊತೆ ಲಿವ್ಇನ್ ಸಂಬಂಧದಲ್ಲಿದ್ದ. ಆದರೆ ಆಕೆ ತನ್ನನ್ನು ಮದುವೆಯಾಗು ಎಂದು ಒತ್ತಾಯಿಸಲು ಶುರುಮಾಡಿದ್ದಾಳೆ. ಅದಾಗಲೇ ಮದುವೆಯಾಗಿದ್ದ ಸಂಜಯ್ ಪಾಟಿದಾರ್, ಮದುವೆಗೆ ನಿರಾಕರಿಸಿದ್ದ. ಪ್ರತಿಭಾ ಮತ್ತಷ್ಟು ಪೀಡಿಸುತ್ತಿದ್ದಂತೆ ತನ್ನ ಸ್ನೇಹಿತ ವಿನೋದ್​ ದವೆಯನ್ನು ಕರೆಸಿಕೊಂಡಿದ್ದ ಸಂಜಯ್, ಪ್ರತಿಭಾಳನ್ನು ಕೊಲೆ ಮಾಡಿ ಮೃತದೇಹವನ್ನ ಫ್ರಿಡ್ಜ್​ನಲ್ಲಿಟ್ಟು ಮನೆ ಖಾಲಿ ಮಾಡಿದ್ದ. ಆದರೆ, ಆಗಾಗ ಬಂದು ಹೋಗುತ್ತಿದ್ದ.

ಪ್ರಕರಣ ಬಯಲಾಗಿದ್ದು ಹೇಗೆ?

ಸಂಜಯ್ ಬಾಡಿಗೆ ಪಡೆದಿದ್ದ ಮನೆಯ ಫ್ರಿಡ್ಜ್​ನಲ್ಲಿ ಮೃತದೇಹವನ್ನಿಟ್ಟಿದ್ದ. ಶ್ರೀವಾಸ್ತವ ಎಂಬವರಿಂದ ಮನೆಯನ್ನು ಬಾಡಿಗೆ ಪಡೆದಿದ್ದ ಸಂಜಯ್, ವರ್ಷದ ಹಿಂದೆಯೇ ಮನೆ ಬಿಟ್ಟಿದ್ದ. ಆದಾಗ್ಯೂ ಆಗಾಗ ಬಂದು ಹೋಗುವುದನ್ನು ಮಾಡುತ್ತಿದ್ದ. ಅಲ್ಲದೆ, ಕೆಲವು ವಸ್ತುಗಳನ್ನು ಅಧ್ಯಯನ ಕೊಠಡಿ ಮತ್ತು ಮಾಸ್ಟರ್ ಬೆಡ್‌ರೂಮ್‌ನಲ್ಲಿ ಇರಿಸುವುದನ್ನು ಮುಂದುವರೆಸಿದ್ದ. ಹೀಗಾಗಿ ಮನೆ ಮಾಲೀಕರಿಗೂ ಹೆಚ್ಚಿನ ವಿಚಾರ ಗೊತ್ತಿರಲಿಲ್ಲ.

ಇತ್ತೀಚೆಗೆ, ನೆರೆ ಮನೆಯವರು ಅನುಮಾನ ಬಂದು ಮನೆಯ ಬಾಗಿಲು ತೆರೆಯುವಂತೆ ಮಾಲೀಕರನ್ನು ಕೇಳಿದ್ದರು. ಹಾಗೆ ಬಾಗಿಲು ತೆರೆದಾಗ ಪಾಟಿದಾರ್​ಗೆ ಸಂಬಂಧಿಸಿದ ವಸ್ತುಗಳು ಒಳಗಿದ್ದ ಕಾರಣ ಮತ್ತೆ ಲಾಕ್ ಮಾಡಿದ್ದರು. ಆದರೆ, ಬುಧವಾರದಿಂಧ ವಿದ್ಯುತ್ ಸರಬರಾಜನ್ನು ಆಫ್ ಮಾಡಿದ್ದರು. ಇದರಿಂದಾಗಿ ಫ್ರಿಡ್ಜ್​ನಲ್ಲಿದ್ದ ಮೃತದೇಹದ ವಾಸನೆ ಅಕ್ಕಪಕ್ಕದ ಮನೆಯವರಿಗೆ ಬಂದಿತ್ತು ಎಂದು ಪೊಲೀಸ್ ಅಧಿಕಾರಿ ಅಮಿತ್ ಸೋಲಂಕಿ ಎಂಬವರು ತಿಳಿಸಿದ್ದಾರೆ.

ಭೀಬತ್ಸ ಸ್ಥಿತಿಯಲ್ಲಿತ್ತು ಮೃತದೇಹ

ಸೀರೆಯುಟ್ಟುಕೊಂಡು, ಆಭರಣ ತೊಟ್ಟು, ಅಲಂಕರಿಸಿಕೊಂಡು, ಕುತ್ತಿಗೆಯನ್ನು ತನ್ನ ಕೈಗಳಿಂದ ತಾನೇ ಬಲವಾಗಿ ಬಿಗಿಯಾಗಿ ಕಟ್ಟಿಕೊಂಡು ಕುಳಿತಿರುವ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿತ್ತು. ಫ್ರಿಡ್ಜ್ ತೆರೆದವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಭಯಾನಕ ಸತ್ಯ ಬಯಲಾಗಿದೆ.

ಯುವತಿಯನ್ನು 2024ರ ಜೂನ್​ನಲ್ಲೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸಂಜಯ್​ ಪಡೆದಿದ್ದ ಬಾಡಿಗೆ ಮನೆಯಿಂದ ದುರ್ವಾಸನೆ ಬರಲು ಆರಂಭಿಸಿದ್ದರಿಂದ ನೆರೆಮನೆಯವರು ಮನೆಯ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಮನೆ ಮಾಲೀಕ ಬಂದು ನೋಡಿದಾಗ ಮಹಿಳೆಯ ಮೃತದೇಹ ಫ್ರಿಡ್ಜ್​ನಲ್ಲಿರುವುದು ​ಗೊತ್ತಾಗಿದೆ ಎಂದು ದೇವಾಸ್ ಪೊಲೀಸ್ ವರಿಷ್ಠಾಧಿಕಾರಿ ಪುನೀತ್ ಗೆಹ್ಲೋಟ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಸಿಟ್ಟಿನ ಕೈಗೆ ಬುದ್ಧಿಕೊಟ್ಟ ಅಣ್ಣ, ಹೆಣವಾದ ತಮ್ಮ

ನೆರೆಹೊರೆಯವರ ಪ್ರಕಾರ ಪ್ರತಿಭಾಳನ್ನು ಮಾರ್ಚ್ 24ರ ನಂತರ ಯಾರೂ ನೋಡಿರಲಿಲ್ಲ. ನೆರೆಮನೆಯವರಿಗೆ ಸಂಜಯ್ ಅವಳು ಮನೆಗೆ ಹೋಗಿದ್ದಾಳೆ ಎಂದು ತಿಳಿಸಿದ್ದ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ