ವಾಲ್ಮೀಕಿಯನ್ನು ತಾಲಿಬಾನ್​​ಗೆ ಹೋಲಿಸಿದ ಕವಿ ಮುನಾವರ್ ರಾಣಾ ವಿರುದ್ಧ ಎಫ್ಐಆರ್

| Updated By: ರಶ್ಮಿ ಕಲ್ಲಕಟ್ಟ

Updated on: Aug 24, 2021 | 5:09 PM

Munawwar Rana: ರಾಣಾ ತನ್ನ ಹೇಳಿಕೆಗಳಿಂದ ಮಹರ್ಷಿ ವಾಲ್ಮೀಕಿಯನ್ನು ಅಗೌರವಿಸಿದ್ದಾರೆ ಮತ್ತು ವಾಲ್ಮೀಕಿ ಸಮುದಾಯ ಮತ್ತು ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಮಾಳವೀಯ ಆರೋಪಿಸಿದ್ದಾರೆ. ಅವರು ಮಹರ್ಷಿ ವಾಲ್ಮೀಕಿಯನ್ನು ತಾಲಿಬಾನ್ ಜೊತೆ ಹೋಲಿಸಿದರು ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದರು.

ವಾಲ್ಮೀಕಿಯನ್ನು ತಾಲಿಬಾನ್​​ಗೆ ಹೋಲಿಸಿದ ಕವಿ ಮುನಾವರ್ ರಾಣಾ ವಿರುದ್ಧ ಎಫ್ಐಆರ್
ಮುನಾವರ್ ರಾಣಾ
Follow us on

ಗುನಾ: ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿಯನ್ನು ತಾಲಿಬಾನ್ ಜೊತೆ ಹೋಲಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಉರ್ದು ಕವಿ ಮುನಾವರ್ ರಾಣಾ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಬಿಜೆಪಿಯ ಪರಿಶಿಷ್ಟ ಜಾತಿ ಘಟಕದ ರಾಜ್ಯ ಕಾರ್ಯದರ್ಶಿ ಸುನಿಲ್ ಮಾಳವೀಯ ಮತ್ತು ವಾಲ್ಮೀಕಿ ಸಮುದಾಯದ ಇತರ ಸದಸ್ಯರು ನೀಡಿದ ದೂರಿನ ಮೇರೆಗೆ ಸೋಮವಾರ ರಾಣಾ ವಿರುದ್ಧ ಗುನಾದಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಾಹಿನಿಯೊಂದರಲ್ಲಿ ಮಾತನಾಡಿದ ರಾಣಾ “ರಾಮಾಯಣ ಬರೆದ ನಂತರ ವಾಲ್ಮೀಕಿ ದೇವರಾದರು, ಅದಕ್ಕೂ ಮೊದಲು ಅವರು ಡಕಾಯಿತ ಆಗಿದ್ದರು. ವ್ಯಕ್ತಿಯ ಪಾತ್ರ ಬದಲಾಗಬಹುದು. ಅಂತೆಯೇ, ತಾಲಿಬಾನ್‌ಗಳು ಈಗ ಭಯೋತ್ಪಾದಕರಾಗಿದ್ದಾರೆ, ಆದರೆ ಜನರು ಮತ್ತು ಪಾತ್ರಗಳು ಬದಲಾಗುತ್ತವೆ ಎಂದಿದ್ದರು.

ರಾಣಾ ತನ್ನ ಹೇಳಿಕೆಗಳಿಂದ ಮಹರ್ಷಿ ವಾಲ್ಮೀಕಿಯನ್ನು ಅಗೌರವಿಸಿದ್ದಾರೆ ಮತ್ತು ವಾಲ್ಮೀಕಿ ಸಮುದಾಯ ಮತ್ತು ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಮಾಳವೀಯ ಆರೋಪಿಸಿದ್ದಾರೆ.
ಅವರು ಮಹರ್ಷಿ ವಾಲ್ಮೀಕಿಯನ್ನು ತಾಲಿಬಾನ್ ಜೊತೆ ಹೋಲಿಸಿದರು ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದರು. ಹಾಗಾಗಿ ನಾವು ಅವರ ವಿರುದ್ಧ ದೂರು ದಾಖಲಿಸಿದ್ದೇವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಗುನಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಮಿಶ್ರಾ ಸೋಮವಾರ, “ರಾಣಾ ವಿರುದ್ಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಸಂಬಂಧಪಟ್ಟ ಜಿಲ್ಲೆಗೆ (ಉತ್ತರ ಪ್ರದೇಶದ ಲಕ್ನೋ) ರವಾನಿಸಲಾಗುತ್ತದೆ.

ರಾಣಾ ವಿರುದ್ಧ ಐಪಿಸಿ ಸೆಕ್ಷನ್ 505 (2) (ಸಾರ್ವಜನಿಕ ಕಿಡಿಗೇಡಿತನಕ್ಕೆ ಹೇಳಿಕೆಗಳು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಉತ್ತರ ಪ್ರದೇಶದ ಲಕ್ನೋದಲ್ಲಿರುವ ಹಜರತ್‌ಗಂಜ್ ಪೊಲೀಸ್ ಠಾಣೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಕಾಬೂಲ್‌ನಿಂದ ಉಕ್ರೇನ್ ವಿಮಾನ ಹೈಜಾಕ್ ಆಗಿಲ್ಲ; ಇಂಧನ ಖಾಲಿಯಾಗಿ ವಿಮಾನ ಬಂದಿತ್ತು ಎಂದ ಇರಾನ್

ಇದನ್ನೂ ಓದಿ:  ಅಫ್ಘಾನಿಸ್ತಾನ ಬೆಳವಣಿಗೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತುಕತೆ

(Madhya Pradesh police registered FIR against Urdu poet Munawwar Rana for comparing Valmiki to Taliban)

Published On - 5:06 pm, Tue, 24 August 21