ಅಸ್ಸಾಂ ವಿದ್ಯಾರ್ಥಿ ನಾಯಕನ ಹತ್ಯೆಯ ಪ್ರಮುಖ ಆರೋಪಿ ಅಪಘಾತದಲ್ಲಿ ಸಾವು; ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸ್​ ಕಾರು ಡಿಕ್ಕಿ

ಅನಿಮೇಶ್​ ಭೂಯಾನ್​ ಹತ್ಯೆ ಕೇಸ್​​ನಲ್ಲಿ ಪ್ರಮುಖ ಆರೋಪಿಯಾಗಿದ್ದ ನೀರಜ್​ ದಾಸ್​ನನ್ನು ಪೊಲೀಸರು ಹಿಡಿದು ಕಾರಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು. ಆದರೆ ತಪ್ಪಿಸಿಕೊಳ್ಳಲು ಯತ್ನಿಸಿದ.

ಅಸ್ಸಾಂ ವಿದ್ಯಾರ್ಥಿ ನಾಯಕನ ಹತ್ಯೆಯ ಪ್ರಮುಖ ಆರೋಪಿ ಅಪಘಾತದಲ್ಲಿ ಸಾವು; ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸ್​ ಕಾರು ಡಿಕ್ಕಿ
ನೀರಜ್​ ದಾಸ್​ (ಫೋಟೋ ಕೃಪೆ ಇಂಡಿಯಾ ಟುಡೆ)
Edited By:

Updated on: Dec 01, 2021 | 8:34 AM

 ಅಸ್ಸಾಂನಲ್ಲಿ ಸೋಮವಾರ ಗುಂಪು ಹತ್ಯೆಯೊಂದು ನಡೆದಿತ್ತು. ಆಲ್​ ಅಸ್ಸಾಂ ವಿದ್ಯಾರ್ಥಿ ಒಕ್ಕೂಟ (AASU)ದ ನಾಯಕ ಅನಿಮೇಶ್​ ಭೂಯಾನ್​ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದ.  ಹಾಗೇ ಇನ್ನಿಬ್ಬರು ಗಾಯಗೊಂಡಿದ್ದರು. ಆದರೆ ಈ ಪ್ರಕರಣದ ಪ್ರಮುಖ ಆರೋಪಿ ಈಗ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಅದೂ ಕೂಡ ಪೊಲೀಸ್ ಕಾರು ಢಿಕ್ಕಿ ಹೊಡೆದು ಸತ್ತಿದ್ದಾನೆ. 

ಅನಿಮೇಶ್​ ಭೂಯಾನ್​ ಹತ್ಯೆ ಕೇಸ್​​ನಲ್ಲಿ ಪ್ರಮುಖ ಆರೋಪಿಯಾಗಿದ್ದ ನೀರಜ್​ ದಾಸ್​ನನ್ನು ಮಂಗಳವಾರ ರಾತ್ರಿ ಪೊಲೀಸರು ಹಿಡಿದು ಕಾರಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು. ಆದರೆ ಈತ ತಪ್ಪಿಸಿಕೊಳ್ಳುವ ಸಲುವಾಗಿ ಕಾರಿನಿಂದ ಹಾರಿ, ಓಡಲು ಪ್ರಯತ್ನಿಸಿದ. ಆದರೆ ಆತ ಹಾರಿದ ಕೂಡಲೇ ಹಿಂದೆ ಇದ್ದ ಇನ್ನೊಂದು ಪೊಲೀಸ್​ ಕಾರು ಬಂದು ಡಿಕ್ಕಿ ಹೊಡೆದು, ಆತ ಗಂಭೀರವಾಗಿ ಗಾಯಗೊಂಡಿದ್ದ. ಆಸ್ಪತ್ರೆಗೆ ದಾಖಲು ಮಾಡಿದರೂ ಪ್ರಯೋಜನವಾಗಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು ಸೋಮವಾರ ಅಸ್ಸಾಂನಲ್ಲಿ ನಡೆದ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹಿರಿಯ ನಾಗರಿಕರೊಬ್ಬರು ಅಪಘಾತದಲ್ಲಿ ಗಾಯಗೊಂಡಿದ್ದರು. ಅವರನ್ನು ರಕ್ಷಿಸಲು ಮುಂದಾದ ಅನಿಮೇಶ್​ ಭೂಯಾನ್​ ಮತ್ತು ಇನ್ನಿಬ್ಬರ ಮೇಲೆ ಗುಂಪೊಂದು ತೀವ್ರ ಹಲ್ಲೆ ನಡೆಸಿತ್ತು. ಅದರಲ್ಲಿ ಭೂಯಾನ್​ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ. ಅದರಲ್ಲೊಬ್ಬ ಪತ್ರಕರ್ತನೂ ಇದ್ದಾರೆ.  ಗುಂಪು ಹಲ್ಲೆಯ ವಿಡಿಯೋ ಕೂಡ ಸಿಕ್ಕಾಪಟೆ ವೈರಲ್ ಆಗಿತ್ತು.

ಇದನ್ನೂ ಓದಿ:  Video: ಅಪಘಾತದಲ್ಲಿ ಗಾಯಗೊಂಡ ಹಿರಿಯ ನಾಗರಿಕನನ್ನು ರಕ್ಷಿಸಲು ಹೋದವರ ಮೇಲೆ ಗುಂಪು ಹಲ್ಲೆ; ಪ್ರಾಣವನ್ನೇ ಕಳೆದುಕೊಂಡ ಯುವಕ