ಮಧ್ಯಪ್ರದೇಶದಲ್ಲಿ ಮತ್ತೊಂದು ಸೋಂಕಿನ ಆತಂಕ; ನಾಲ್ಕು ದಿನಗಳಲ್ಲಿ 48ಕಾಗೆಗಳು ಸಾವು, ವಲಸೆ ಹಕ್ಕಿಗಳ ಮೇಲೆ ನಿಗಾ
ಇಷ್ಟೊಂದು ಕಾಗೆಗಳು ಸತ್ತ ಹಿನ್ನೆಲೆಯಲ್ಲಿ ಅವುಗಳ ಸ್ಯಾಂಪಲ್ ತಪಾಸಣೆಗಾಗಿ ಲ್ಯಾಬೋರೇಟರಿಗೆ ಕಳಿಸಲಾಗಿತ್ತು.ತಪಾಸಣೆ ನಡೆಸಿದಾಗ ಅವುಗಳಲ್ಲಿ H5N8 ಇರುವುದು ಗೊತ್ತಾಗಿದೆ.
ಮತ್ತೆ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ. ಕೊರೊನಾದ ರೂಪಾಂತರಗಳೂ ದಾಂಗುಡಿ ಇಡುತ್ತಿವೆ. ಈ ಮಧ್ಯೆ ಇನ್ನೊಂದು ಆತಂಕಕಾರಿ ಸಂಗತಿ ಎದುರಾಗಿದ್ದು ಮಧ್ಯಪ್ರದೇಶದ ಅಗರ್ ಮಲ್ವಾ ಜಿಲ್ಲೆಯಲ್ಲಿ 48 ಕಾಗೆಗಳ ಮೃತದೇಹ ಸಿಕ್ಕಿದ್ದು, ಅವುಗಳಲ್ಲೀಗ ಹಕ್ಕಿಜ್ವರ ಸೋಂಕು(H5N8) ದೃಢಪಟ್ಟಿದೆ. ಅಂದಹಾಗೆ ಈ 48 ಕಾಗೆಗಳು ಭೋಪಾಲ್ನಿಂದ 180 ಕಿಮೀ ದೂರದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಮೃತಪಟ್ಟವಾಗಿವೆ.
ಇಷ್ಟೊಂದು ಕಾಗೆಗಳು ಸತ್ತ ಹಿನ್ನೆಲೆಯಲ್ಲಿ ಅವುಗಳ ಸ್ಯಾಂಪಲ್ ತಪಾಸಣೆಗಾಗಿ ಲ್ಯಾಬೋರೇಟರಿಗೆ ಕಳಿಸಲಾಗಿತ್ತು.ತಪಾಸಣೆ ನಡೆಸಿದಾಗ ಅವುಗಳಲ್ಲಿ H5N8 ಇರುವುದು ಗೊತ್ತಾಗಿದೆ ಎಂದು ಅಗರ್ ಮಾಲ್ವಾ ಜಿಲ್ಲಾಧಿಕಾರಿ ಅಧ್ವೇಶ್ ಶರ್ಮಾ ಹೇಳಿದ್ದಾರೆ. 48 ಕಾಗೆಗಳೊಂದಿಗೆ ಒಂದು ಕೋಳಿಯೂ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಸದ್ಯ ಪೌಲ್ಟ್ರಿಯಲ್ಲಿರುವ ಇತರ ಕೋಳಿಗಳ ಮಾದರಿಯನ್ನೂ ಕಳಿಸಲಾಗಿದೆ. ಆದರೆ ಅವುಗಳ ವರದಿ ಇನ್ನೂ ಬಂದಿಲ್ಲ. ಅಲ್ಲಿಯವರೆಗೂ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಮಟನ್ ಮಾರಾಟ ಮಾರುಕಟ್ಟೆಯನ್ನು ಮುಚ್ಚಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಗರ್ ಮಾಲ್ವಾದಲ್ಲಿ ಹಕ್ಕಿ ಜ್ವರ ನಿಯಂತ್ರಣ ಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟದ ಕಂಟ್ರೋಲ್ ರೂಂ ನಿರ್ಮಿಸಲಾಗಿದೆ. ಅದಕ್ಕೆ ಪಶುಸಂಗೋಪನಾ ಇಲಾಖೆಯ ಡಾ. ಎಸ್.ವಿ.ಕೋಸಾರ್ವಾಲ್ ನೇತೃತ್ವವಿದೆ. ಹಾಗೇ, ಹಕ್ಕಿಜ್ವರದಿಂದ ಪಕ್ಷಿಗಳು ಮೃತಪಡುತ್ತಿವೆ. ಹಾಗಾಗಿ ಜನರೂ ಕೂಡ ಎಚ್ಚರಿಕೆಯಿಂದ ಇರಬೇಕು ಎಂದು ಅರಿವು ಮೂಡಿಸಲಾಗುತ್ತಿದೆ ಎಂದು ಜಿಲ್ಲಾಡಳಿತದ ಇನ್ನೊಬ್ಬರು ಅಧಿಕಾರಿ ಮಾಹಿತಿ ನೀಡಿದ್ದಾರೆ. ಚಳಿಗಾಲದಲ್ಲಿ ಬಹುಮುಖ್ಯವಾಗಿ ವಲಸೆ ಹಕ್ಕಿಗಳು ಈ ಹಕ್ಕಿಜ್ವರ ಸೋಂಕನ್ನು ಹರಡುತ್ತವೆ. ಹೀಗಾಗಿ ರಾಜ್ಯದ ಸಂರಕ್ಷಿತ ಪ್ರದೇಶಗಳು ಮತ್ತು ನೀರಿನ ಮೂಲಗಳಿಗೆ ವಲಸೆ ಬರುವ ಹಕ್ಕಿಗಳ ಮೇಲೆ ನಿಗಾ ಇಡಲಾಗುವುದು ಎಂದು ಹೇಳಿದ್ದಾರೆ. ಈ ಎಚ್5ಎನ್8 ಎಂಬುದು ಒಂದು ರೀತಿಯ ಜ್ವರವಾಗಿದ್ದು, ಇದು ಕಾಡು ಪಕ್ಷಿಗಳು ಮತ್ತು ಕೋಳಿಗಳಿಗೆ ಸಿಕ್ಕಾಪಟೆ ಮಾರಕವಾಗಿದೆ. ಮನುಷ್ಯರಿಗೂ ಹರಡುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: Vrat Festivals December 2021: ಡಿಸೆಂಬರ್ ಮಾಸದಲ್ಲಿ ಬರುವ ವ್ರತ, ಹಬ್ಬ ಹರಿದಿನಗಳ ವಿವರಗಳು ಇಲ್ಲಿವೆ