ತೈಲ ಬೆಲೆ ಏರಿಕೆ ವಿರೋಧಿಸಿ ಎಲೆಕ್ಟ್ರಿಕ್ ಸ್ಕೂಟರ್ ಏರಿದ ಮಮತಾ ಬ್ಯಾನರ್ಜಿ

|

Updated on: Feb 25, 2021 | 4:23 PM

ಕೆಲವರು ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ತೈಲ ಬೆಲೆ ಇಳಿಸುವುದಾಗಿ ಹೇಳಿದ್ದ ಚಿತ್ರಗಳನ್ನು ಹಂಚಿಕೊಂಡು ದೀದಿ ನಡೆಯನ್ನು ಪ್ರಶಂಸಿದ್ದಾರೆ. ಮುಖ್ಯಮಂತ್ರಿಯಾಗಿ ಅವರು ಎಲೆಕ್ಟ್ರಿಕ್ ಸ್ಕೂಟರ್​ನಲ್ಲಿ ತೆರಳಿರುವುದು ಒಂದು ಮಾದರಿ ನಡೆಎಂದು ಹೆಚ್ಚಿನವರು ಸಂತಸ ವ್ಯಕ್ತಪಡಿಸಿದ್ದಾರೆ.

ತೈಲ ಬೆಲೆ ಏರಿಕೆ ವಿರೋಧಿಸಿ ಎಲೆಕ್ಟ್ರಿಕ್ ಸ್ಕೂಟರ್ ಏರಿದ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಭಟನೆ ನಡೆಸಿದ ಮಾದರಿ ವಿಭಿನ್ನ
Follow us on

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ ಅವರಿಗೆ ಮಮತಾ ಬ್ಯಾನರ್ಜಿ ಅವರೇ ಸೈ! ರಾಜ್ಯವೊಂದರ ಮುಖ್ಯಮಂತ್ರಿಯಾಗಿ ಇಡೀ ದೇಶವ್ಯಾಪಿ ಇರುವ ಬಿಜೆಪಿಯ ನಾಯಕರನ್ನೇ ಒಂದು ಕ್ಷಣ ದಂಗುಬಡಿಯುವಂತೆ ಮಾಡುವ ಶಕ್ತಿಯುಳ್ಳ ಮಹಿಳೆ ಮಮತಾ ಬ್ಯಾನರ್ಜಿ. ಎಡಪಕ್ಷಗಳ ಭದ್ರ ಹಿಡಿತದಲ್ಲಿದ್ದ ಪಶ್ಚಿಮ ಬಂಗಾಳದಲ್ಲಿ ಸತತ ಹೋರಾಟಗಳಿಂದ ಟಿಎಂಸಿ ಪಕ್ಷ ಅಧಿಕಾರ ಸ್ಥಾಪಿಸಿದ ದೀದಿ ವಿರುದ್ಧ ಬಿಜೆಪಿಯ ಘಟಾನುಘಟಿ ನಾಯಕರು ತಿರುಬೀಳುತ್ತಲೇ ಇರುತ್ತಾರೆ. ಅದೇ ರೀತಿ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಮಮತಾ ಬ್ಯಾನರ್ಜಿ ಸಹ ವಿಶಿಷ್ಟವಾಗಿ ಪ್ರತಿರೋಧ ತೋರಿಸುತ್ತಲೇ ಇರುತ್ತಾರೆ. ಇದೀಗ ದೇಶದಲ್ಲಿ ಏರಿಕೆಯಾಗಿರುವ ತೈಲ ಬೆಲೆಗಳ ವಿರುದ್ಧ ಅವರು ಪ್ರತಿಭಟಿಸಿದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ದೇಶದಲ್ಲಿ ಪೆಟ್ರೋಲ್ ಬೆಲೆ ಶತಕ ಬಾರಿಸಿದೆ. ಡೀಸೆಲ್ ಬೆಲೆಯೂ ತಾನೇನೂ ಕಡಿಮೆಯಿಲ್ಲ ಎಂಬಂತೆ 80ರ ಗಡಿ ದಾಟಿದೆ. ಈ ಬೆಲೆ ಏರಿಕೆ ವಿರುದ್ಧ ಸಾರ್ವಜನಿಕರು, ವ್ಯಾಪಾರಿಗಳು ಸೇರಿ ಎಲ್ಲ ವಲಯಗಳಲ್ಲೂ ಟೀಕೆಗಳ ಸುರಿಮಳೆ ಕೇಳಿಬರುತ್ತಿದೆ. ಮಮತಾ ಬ್ಯಾನರ್ಜಿಯವರೂ ತೈಲ ಬೆಲೆ ಏರಿಕೆ ವಿರೋಧಿಸಿ ಎಲೆಕ್ಟ್ರಿಕ್ ಸ್ಕೂಟರ್​ನಲ್ಲಿ ತಮ್ಮ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ.

ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಅವರು ಎಲೆಕ್ಟ್ರಿಕ್ ಸ್ಕೂಟರ್ ಚಲಾಯಿಸಿದ್ದು, ಮಮತಾ ಬ್ಯಾನರ್ಜಿ ಸ್ಕೂಟರ್​ನ ಹಿಂಬದಿಯಲ್ಲಿ ಆಸೀನರಾಗಿದ್ದಾರೆ. ಅವರು ಎಲೆಕ್ಟ್ರಿಕ್ ಸ್ಕೂಟರ್​ನಲ್ಲಿ 5 ಕಿಮೀ ಪ್ರಯಾಣ ಮಾಡಿದ್ದಾಗಿ ತಿಳಿದುಬಂದಿದ್ದು, ರಸ್ತೆಯಲ್ಲಿ ಎದುರಾದ ಜನರಿಗೆ ಕೈಬೀಸಿದರು.

ಅಖಿಲ ಭಾರತ ತೃಣಮೂಲ ಕಾಂಗ್ರೆಸ್​ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅವರು ಎಲೆಕ್ಟ್ರಿಕ್ ಸ್ಕೂಟರ್​ನಲ್ಲಿ ಪ್ರಯಾಣಿಸುವ ವಿಡಿಯೋ ಹಂಚಿಕೊಳ್ಳಲಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜನಸಾಮಾನ್ಯರ ಪರ ಇದ್ದಾರೆ ಎಂದು ಬರೆದುಕೊಂಡಿದೆ ತೃಣಮೂಲ ಕಾಂಗ್ರೆಸ್ . ಡೀಸೆಲ್ ಅಥವಾ ಇನ್ನಿತರ ತೈಲ ಬಳಸುವ ವಾಹನದಲ್ಲಿ ಪ್ರಯಾಣಿಸದೇ ಎಲೆಕ್ಟ್ರಿಕ್ ಸ್ಕೂಟರ್​ನಲ್ಲಿ ಅವರು ಪ್ರಯಾಣ ಬೆಳೆಸಿದ್ದಾರೆ ಎಂದು ಟ್ವೀಟ್ ಮಾಡಲಾಗಿದೆ.

ಈ ಟ್ವೀಟ್​ಗೆ ನೆಟ್ಟಿಗರು ವಿಧವಿಧವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮಮತಾ ಬ್ಯಾನರ್ಜಿ ಅವರು ಪ್ರತಿದಿನವೂ ಹೀಗೆ ತಮ್ಮ ಕಚೇರಿಗೆ ತೆರಳುವರೇ ಎಂದು ಕೆಲವರು ಪ್ರಶ್ನಿಸಿದ್ದರೆ, ಇನ್ನು ಕೆಲವರು ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ತೈಲ ಬೆಲೆ ಇಳಿಸುವುದಾಗಿ ಹೇಳಿದ್ದ ಚಿತ್ರಗಳನ್ನು ಹಂಚಿಕೊಂಡು ದೀದಿ ನಡೆಯನ್ನು ಪ್ರಶಂಸಿದ್ದಾರೆ. ಮುಖ್ಯಮಂತ್ರಿಯಾಗಿ ಅವರು ಎಲೆಕ್ಟ್ರಿಕ್ ಸ್ಕೂಟರ್​ನಲ್ಲಿ ತೆರಳಿರುವುದು ಒಂದು ಮಾದರಿ ನಡೆ ಎಂದು ಹೆಚ್ಚಿನವರು ಸಂತಸ ವ್ಯಕ್ತಪಡಿಸಿದ್ದಾರೆ.

ಭರ್ಜರಿ ದಾಳಿ- ಪ್ರತಿದಾಳಿ

ಈಗಾಗಲೇ ಬಿಜೆಪಿ-ಟಿಎಂಸಿ ನಡುವೆ ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಪ್ರಚಾರ ನಡೆಯುತ್ತಿದೆ. ಅಲ್ಲದೇ, ಆರೋಪ-ಪ್ರತ್ಯಾರೋಪಗಳು ಸಹ ಅಷ್ಟೇ ಜೋರಾಗಿ ನಡೆಯುತ್ತಿದೆ.   ಡಿಜಿಟಲೀಕರಣದ ಮಂತ್ರ ಪಠಿಸುತ್ತಾ ಮಮತಾ ಬ್ಯಾನರ್ಜಿ ಫೆಬ್ರವರಿ 4 ರಂದು ‘ದೀದಿರ್ ದೂತ್’​ ಆ್ಯಪ್​ ರಿಲೀಸ್​ ಮಾಡಿದ್ದರು.  ಅಮಿತ್​ ಶಾ ಪಶ್ಚಿಮ ಬಂಗಾಳಕ್ಕೆ ತೆರಳಿದ ಸಂದರ್ಭದಲ್ಲಿ ಬಿಜೆಪಿ ಮೋದಿ ಪರ ಆ್ಯಪ್​  ಬಿಡುಗಡೆ ಮಾಡಿದ್ದರು.

ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿರುವ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕರು​,ಕಾರ್ಯಕರ್ತರು ಆ್ಯಪ್​ ಡೌನ್​ಲೋಡ್​ ಮಾಡುವಂತೆ ಕೋರುತ್ತಿದ್ದಾರೆ. ಅಷ್ಟೇ ಅಲ್ಲ, ಈ ಆ್ಯಪ್​ನ ವಿಶೇಷತೆ ಹಾಗೂ ಆ್ಯಪ್​ ಬಳಕೆ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಹೀಗಾಗಿ, ಕೆಲವೇ ದಿನಗಳಲ್ಲಿ ಈ ಆ್ಯಪ್​ಗಳು ಲಕ್ಷಾಂತರ ಡೌನ್​ಲೋಡ್​ ಕಂಡಿವೆ.

ಇದನ್ನೂ ಓದಿ:  ಪಶ್ಚಿಮ ಬಂಗಾಳದಲ್ಲಿ ಘೋಷಣೆಗಳ ಪ್ರವಾಹ: ಬಿಜೆಪಿಗೆ ಬೇಕಾಯ್ತು ಇಟಲಿ ಮೂಲದ ಹಾಡಿನ ಸಹಾಯ

ಪಶ್ಚಿಮ ಬಂಗಾಳವನ್ನು ಸೋನಾರ್ ಬಾಂಗ್ಲಾ ಮಾಡುತ್ತೇವೆ; ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಭರವಸೆ