
ಹೈದರಾಬಾದ್, ಡಿಸೆಂಬರ್ 26: ಮಕ್ಕಳ ಮುಂದೆಯೇ ತಂದೆಯೊಬ್ಬ ಪತ್ನಿಗೆ ಬೆಂಕಿ(Fire) ಹಚ್ಚಿದ್ದಲ್ಲದೆ ಅದೇ ಬೆಂಕಿಗೆ ಮಗಳನ್ನೂ ತಳ್ಳಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಪತಿ ಬೆಂಕಿ ಹಚ್ಚಿದ ಪರಿಣಾಮ ಮಹಿಳೆಯೊಬ್ಬರು ಸಜೀವ ದಹನಗೊಂಡಿದ್ದಾರೆ. ಮಗಳನ್ನು ಬೆಂಕಿಗೆ ತಳ್ಳಿ ಪರಾರಿಯಾಗಿದ್ದಾನೆ. ಕ್ರಿಸ್‌ಮಸ್‌ಗೆ ಒಂದು ದಿನ ಮೊದಲು ನಗರದ ನಲ್ಲಕುಂಟಾ ಪ್ರದೇಶದಲ್ಲಿ ಈ ಭೀಕರ ಘಟನೆ ನಡೆದಿದೆ.
ವೆಂಕಟೇಶ್ ತನ್ನ ಪತ್ನಿ ತ್ರಿವೇಣಿ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 24 ರಂದು, ಮಕ್ಕಳ ಮುಂದೆಯೇ ತ್ರಿವೇಣಿ ಮೇಲೆ ಹಲ್ಲೆ ನಡೆಸಿ, ನಂತರ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಅವರ ಮಗಳು ತನ್ನ ತಾಯಿಯನ್ನು ಉಳಿಸಲು ಪ್ರಯತ್ನಿಸಿದಾಗ, ಆಕೆಯನ್ನೂ ಬೆಂಕಿಗೆ ತಳ್ಳಿ ಮನೆಯಿಂದ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಅವರ ಕಿರುಚಾಟ ಕೇಳಿ ನೆರೆಹೊರೆಯವರು ಅವರ ಮನೆಗೆ ಓಡೋಡಿ ಬಂದಿದ್ದರು . ಆ ಹೊತ್ತಿಗೆ, ತೀವ್ರವಾದ ಸುಟ್ಟ ಗಾಯಗಳಿಂದ ತ್ರಿವೇಣಿ ಸಾವನ್ನಪ್ಪಿದ್ದರು. ಸಣ್ಣಪುಟ್ಟ ಗಾಯಗಳೊಂದಿಗೆ ಕೂದಲೆಳೆಯ ಅಂತರದಲ್ಲಿ ಪಾರಾದ ಅವರ ಮಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೆಂಕಟೇಶ್ ಮತ್ತು ತ್ರಿವೇಣಿ ಅವರದು ಪ್ರೇಮ ವಿವಾಹ.
ಮತ್ತಷ್ಟು ಓದಿ: ಕೊಲೆ ಆರೋಪ ಕೋರ್ಟ್ನಲ್ಲಿ ಸಾಬೀತಾದರೂ ಮಹಿಳೆ ಅಪರಾಧಮುಕ್ತ! ಮಂಗಳೂರಲ್ಲೊಂದು ಅಚ್ಚರಿಯ ತೀರ್ಪು
ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಒಬ್ಬಳು ಮಗಳು ಮತ್ತು ಒಬ್ಬ ಮಗ. ವೆಂಕಟೇಶ್ ತನ್ನ ಹೆಂಡತಿಯ ಬಗ್ಗೆ ಅನುಮಾನ ಬೆಳೆಸಿಕೊಂಡು ಆಗಾಗ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ನಿರಂತರ ಕಿರುಕುಳ ಸಹಿಸಲಾಗದೆ ತ್ರಿವೇಣಿ ಇತ್ತೀಚೆಗೆ ತನ್ನ ಹೆತ್ತವರ ಮನೆಗೆ ಹೋಗಿದ್ದಳು.
ತ್ರಿವೇಣಿ ತನ್ನ ಬಳಿಗೆ ಹಿಂತಿರುಗಿದ ನಂತರ, ವೆಂಕಟೇಶ್ ತಾನು ಬದಲಾಗುತ್ತೇನೆ ಎಂದು ಅವಳನ್ನು ಮನವೊಲಿಸಿ ಮನೆಗೆ ಕರೆದುಕೊಂಡು ಬಂದಿದ್ದ ನಂತರ ಈ ಅಪರಾಧ ನಡೆದಿದೆ ಎನ್ನಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ವೆಂಕಟೇಶ್ ನನ್ನು ಹಿಡಿಯಲು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಈ ಘಟನೆಯು ಪ್ರದೇಶದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಕೌಟುಂಬಿಕ ಹಿಂಸಾಚಾರ ಮತ್ತು ಪತಿ ಅಥವಾ ಪತ್ನಿ ನಡುವಿನ ಮನಸ್ತಾಪಗಳು, ಅಪನಂಬಿಕೆಯಿಂದ ನಡೆಯುವ ಅಪರಾಧಗಳ ಬಗ್ಗೆ ಕಳವಳ ವ್ಯಕ್ತವಾಗಿದೆ.
ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:20 pm, Fri, 26 December 25