ಮಧ್ಯಪ್ರದೇಶ: ದೇವರನ್ನು ಮೆಚ್ಚಿಸಲು 50 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಶಿರಚ್ಛೇದನ ಮಾಡಿ, ಶವವನ್ನು ತನ್ನ ಮನೆಯ ಪೂಜಾ ಕೋಣೆಯಲ್ಲಿ ಸಮಾಧಿ ಮಾಡಿರುವ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ.
ಸಿಂಗ್ರೌಲಿ ಜಿಲ್ಲಾ ಕೇಂದ್ರದಿಂದ 25 ಕಿ.ಮೀ ದೂರದಲ್ಲಿರುವ ಬಸೌಡಾ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದೆ. ಆರೋಪಿಯ ಇಬ್ಬರು ಮಕ್ಕಳು ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿ, ಆರೋಪಿಯನ್ನು ಗುರುವಾರ ಬಂಧಿಸಲಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ತಿಳಿಸಿದ್ದಾರೆ.
ಈ ವ್ಯಕ್ತಿ ತನ್ನ 45 ವರ್ಷದ ಹೆಂಡತಿಯನ್ನು ಬುಧವಾರ ಮುಂಜಾನೆ ಶಿರಚ್ಛೇದನ ಮಾಡಿದನೆಂದು ಆರೋಪಿಸಲಾಗಿದೆ. ನಂತರ ಆತ ತನ್ನ ಮನೆಯ ಪೂಜಾ ಕೋಣೆಯಲ್ಲಿ ಹೆಂಡತಿಯ ತಲೆ ಮತ್ತು ಮುಂಡವನ್ನು ಪ್ರತ್ಯೇಕವಾಗಿ ಹೂತು ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯ ಮಕ್ಕಳ ಪ್ರಕಾರ, ಆರೋಪಿ ತನ್ನ ನೆಚ್ಚಿನ ದೇವರನ್ನು ಮೆಚ್ಚಿಸಲು ತನ್ನ ಹೆಂಡತಿಯನ್ನು ಕೊಂದಿದ್ದಾನೆ ಎಂಬುದು ತಿಳಿದು ಬಂದಿದೆ. ಆತ ಕೆಲವು ದಿನಗಳ ಹಿಂದೆ ಮೇಕೆಯನ್ನು ಕೊಂದು, ಮೇಕೆಯ ದೇಹವನ್ನು ಪೂಜಾ ಕೋಣೆಯಲ್ಲಿ ಹೂತಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.