ಸೆಕ್ಯೂರಿಟಿ ಮೇಲೆ ಕಾರು​ ಹರಿಸಿ ಸಾಯಿಸಿದ್ದು.. ಆ ಯುವತಿಯ ಗಮನಕ್ಕೆ ಬರಲೇ ಇಲ್ವಂತೆ!

ಸೆಕ್ಯೂರಿಟಿ ಮೇಲೆ ಕಾರು​  ಹರಿಸಿ ಸಾಯಿಸಿದ್ದು.. ಆ ಯುವತಿಯ ಗಮನಕ್ಕೆ ಬರಲೇ ಇಲ್ವಂತೆ!

ಚೆನ್ನೈ:ಅಪಾರ್ಟ್ಮೆಂಟಿನ ಪಾರ್ಕಿಂಗ್ ಜಾಗದಲ್ಲಿ ನಿದ್ರೆಗೆ ಜಾರಿದ್ದ ಸೆಕ್ಯೂರಿಟಿ ಗಾರ್ಡ್ ಮೇಲೆ ಆಡಿ ಕಾರ್ ಹರಿದ ಪರಿಣಾಮದಿಂದಾಗಿ ಸೆಕ್ಯೂರಿಟಿ ಗಾರ್ಡ್ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಸೆಪ್ಟೆಂಬರ್ 2 ರಂದು ರಾತ್ರಿ 10 ಗಂಟೆ ಸುಮಾರಿಗೆ ಚೆನ್ನೈನ ಸ್ಯಾಂಟೋಮ್‌ನ ಫೋರ್‌ಶೋರ್ ಎಸ್ಟೇಟ್‌ನಲ್ಲಿ ಈ ಘಟನೆ ನಡೆದಿದ್ದು, ಮಂದವೆಲ್ಲಿಯ ನಿವಾಸಿಯಾಗಿರುವ ಹಾಗೂ ನಿವೃತ್ತ ಸರ್ಕಾರಿ ನೌಕರರಾದ ಡಿ.ಶಿವಪ್ರಕಾಸಂ (68) ಮೃತ ದುರ್ದೈವಿಯಾಗಿದ್ದಾರೆ. ಕೇವಲ ಒಂದು ವಾರದ ಮೊದಲು ಸೆಕ್ಯುರಿಟಿ ಕೆಲಸಕ್ಕೆ ಸೇರಿದ್ದ ಶಿವಪ್ರಕಾಸಂ ಘಟನೆಯ ಸಮಯದಲ್ಲಿ ನಿದ್ದೆ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವರದಿಗಳ ಪ್ರಕಾರ, ರಿಯಲ್ ಎಸ್ಟೇಟ್ ಏಜೆಂಟ್​ ಒಬ್ಬರ ಮಗಳಾದ 18 ವರ್ಷದ ಅಪರ್ಣಾ ಎಂಬ ಯುವತಿ ತನ್ನ ಆಡಿ ಕಾರ್​ನಲ್ಲಿ ಹೊರಗಿನಿಂದ ಬಂದು ಅಪಾರ್ಟ್‌ಮೆಂಟಿನ ಪಾರ್ಕಿಂಗ್ ಜಾಗದಲ್ಲಿ ಕಾರ್​ ಪಾರ್ಕ್​ ಮಾಡಿ ತನ್ನ ನಿವಾಸಕ್ಕೆ ತೆರಳಿದ್ದಾಳೆ. ಆದರೆ ಯುವತಿ ಪಾರ್ಕ್​ ಮಾಡಿದ ಕಾರಿನ ಕೆಳಗೆ ವ್ಯಕ್ತಿ ಸಿಲುಕಿಕೊಂಡಿರುವುದು ಯುವತಿಯ ಅರಿವಿಗೆ ಬಂದಿಲ್ಲ.

ಮುಂಜಾನೆ ಭದ್ರತಾ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ ಎಂದು ನಿವಾಸಿಗಳಿಂದ ಮಾಹಿತಿ ಪಡೆದ ಫೋರ್‌ಶೋರ್ ಎಸ್ಟೇಟ್ ಪೊಲೀಸ್ ಠಾಣೆಯ ಪೊಲೀಸರು ಅಪಾರ್ಟ್‌ಮೆಂಟ್‌ಗೆ ಬಂದಿದ್ದಾರೆ. ನಂತರ ಅಪಾರ್ಟ್‌ಮೆಂಟ್‌ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದ ಪೊಲೀಸರಿಗೆ ಸತ್ಯದ ಅರಿವಾಗಿದೆ.

ಸೆಕ್ಷನ್ 304 (ಎ) (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಯುವತಿಯ ಮೇಲೆ FIR ದಾಖಲಾಗಿದ್ದು, ಆಕೆಯನ್ನು ತಕ್ಷಣ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಯುವತಿ DL ಹೊಂದಿದ್ದು, ಘಟನೆಯ ವೇಳೆ ಯುವತಿಗೆ ಯಾವುದೇ ಕೂಗು ಕೇಳಿಲ್ಲ ಮತ್ತು ಆ ಸಮಯದಲ್ಲಿ ಆತ ಬೆಡ್ ಶೀಟ್ ಹೊದ್ದುಕೊಂಡು ಮಲಗಿದ್ದರಿಂದ ಶಿವಪ್ರಕಾಸಂ ಮೇಲೆ ಕಾರ್​ ಹರಿದಿರುವುದನ್ನು ಯುವತಿ ಗಮನಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Published On - 4:02 pm, Fri, 4 September 20

Click on your DTH Provider to Add TV9 Kannada