ಹೋಶಂಗಾಬಾದ್: ಇತ್ತೀಚೆಗೆ ಅಪಾಯದ ಸ್ಥಳಗಳಲ್ಲಿ, ಅಂದರೆ ನದಿಗಳ ಅಂಚು, ಪ್ರಪಾತದ ಅಂಚು, ರೈಲ್ವೆ ಹಳಿಗಳ ಮೇಲೆ ನಿಂತು ಸೆಲ್ಫೀ ತೆಗೆಯುವುದು, ಕ್ರೇಜಿ ವಿಡಿಯೋಗಳನ್ನು ಮಾಡಲು ಹೋಗಿ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈಗ ಅಂಥದ್ದೇ ಒಂದು ಘಟನೆ ಮಧ್ಯಪ್ರದೇಶದ ಹೊಶಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ. 22ವರ್ಷದ ಯುವಕನೊಬ್ಬ ರೈಲ್ವೆ ಹಳಿಯ ಮೇಲೆ ನಿಂತು ವಿಡಿಯೋ ಮಾಡಲು ಹೋಗಿ ರೈಲಿಗೆ ಬಲಿಯಾಗಿದ್ದಾನೆ.
ಇಟಾರಸಿ-ನಾಗಪುರ ರೈಲ್ವೆ ಮಾರ್ಗದ ಹಳಿಯ ಮೇಲೆ ಭಾನುವಾರ ಘಟನೆ ನಡೆದದ್ದು, ಇಂದು ಬೆಳಕಿಗೆ ಬಂದಿದೆ. ಮೃತನನ್ನು ಸಂಜು ಚೌರೆ ಎಂದು ಗುರುತಿಸಲಾಗಿದೆ. ಈತ ಪತ್ರೋಟಾ ಠಾಣೆ ವ್ಯಾಪ್ತಿಯ ಪಂಜರ ಕಲಾ ಗ್ರಾಮದ ನಿವಾಸಿ ಎಂದು ಪೊಲೀಸ್ ಅಧಿಕಾರಿ ನಾಗೇಶ್ ವರ್ಮಾ ಪಿಟಿಐಗೆ ಮಾಹಿತಿ ನೀಡಿದ್ದಾರೆ. ಭಾನುವಾರ ಸಂಜೆ 5.30ರ ಹೊತ್ತಿಗೆ ಈ ಯುವಕ ರೈಲ್ವೆ ಹಳಿಯ ಮೇಲೆ ನಿಂತು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ.ಆತನ ಗೆಳೆಯನೂ ಒಬ್ಬ ಜೊತೆಗಿದ್ದ, ಆದರೆ ಅವನು ಅಪಾಯದಿಂದ ಪಾರಾಗಿದ್ದಾನೆ. ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಉದ್ದೇಶ ಅವನದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಚೌರೆ ಹಳಿಯ ಮೇಲೆ ನಿಂತಿದ್ದ..ಆತನ ಗೆಳೆಯ ವಿಡಿಯೋ ಮಾಡಿದ್ದಾನೆ. ಅದೇ ಸಮಯದಲ್ಲಿ ಸರಕು ರೈಲೊಂದು ಡಿಕ್ಕಿಹೊಡೆದಿದೆ. ಅದೂ ಕೂಡ ವಿಡಿಯೋದಲ್ಲಿ ಚಿತ್ರೀಕರಣಗೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಬೆಂಗಳೂರಿಂದ ಹೈದರಾಬಾದ್ಗೆ ಪ್ರಯಾಣ ಇನ್ನಷ್ಟು ಸುಗಮ; 1 ಕಾರಿಡಾರ್, 3 ಅಂಡರ್ಪಾಸ್ ನಿರ್ಮಾಣ ಮುಕ್ತಾಯ ಹಂತದಲ್ಲಿ