ಭಾರತದಲ್ಲಿ ಕೊರೊನಾ ಎರಡನೇ ಅಲೆ ಪ್ರಾರಂಭವಾದಾಗಿನಿಂದ ವೈದ್ಯಕೀಯ ಲೋಕ ಸೋಂಕು ನಿಯಂತ್ರಣದ ಕುರಿತು ತಲೆಕೆಡಿಸಿಕೊಂಡಿದೆ. ಒಂದೂವರೆ ವರ್ಷದ ಹಿಂದೆ ದೇಶದೊಳಕ್ಕೆ ಸೋಂಕು ಕಾಲಿಟ್ಟಾಗ ಇಡೀ ಸಮಾಜಕ್ಕೆ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರದ ಪಾಠ ಮಾಡಲಾಗಿತ್ತಾದರೂ ನಡುವೆ ಸೋಂಕಿತರ ಪ್ರಮಾಣ ಇಳಿಮುಖವಾಗುತ್ತಿದ್ದಂತೆ ಜನ ಪ್ರತಿನಿಧಿಗಳಿಂದ ಶ್ರೀಸಾಮಾನ್ಯರ ತನಕ ಎಲ್ಲರೂ ಅದನ್ನು ಮರೆತುಬಿಟ್ಟಿದ್ದಾರೆ. ಹೀಗಾಗಿ ಈ ಬಾರಿ ಮತ್ತೆ ಮೊದಲಿನಿಂದ ಎಚ್ಚರಿಸುವ ಅನಿವಾರ್ಯತೆ ಎದುರಾಗಿದೆ. ಅದಕ್ಕಿಂತಲೂ ಬೇಸರದ ಸಂಗತಿ ಎಂದರೆ ನಮ್ಮ ದೇಶದ ಅನೇಕ ಮುಗ್ಧ ಜನರು ಕೊರೊನಾ ವಿಷಯದಲ್ಲಿ ವೈದ್ಯರು ಹಾಗೂ ತಜ್ಞರ ಸಲಹೆಗಳಿಗಿಂತ ಊಹಾಪೋಹಗಳನ್ನೇ ಹೆಚ್ಚು ಬಲವಾಗಿ ನಂಬುತ್ತಿದ್ದಾರೆ ಮತ್ತು ಅದೇ ಕಾರಣಕ್ಕಾಗಿ ಜೀವವನ್ನೂ ಕಳೆದುಕೊಳ್ಳುತ್ತಿದ್ದಾರೆ.
ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲೂ ತಪ್ಪು ಮಾಹಿತಿಯಿಂದ ಹಾಗೂ ಕೊರೊನಾ ಭಯದಿಂದ ವ್ಯಕ್ತಿಯೊಬ್ಬ ಜೀವ ಕಳೆದುಕೊಂಡ ದಾರುಣ ಘಟನೆ ನಡೆದಿದೆ. ಕೆಲ ದಿನಗಳಿಂದ ತನ್ನ ಸುತ್ತಮುತ್ತಾಲೂ ಕೊರೊನಾ ವ್ಯಾಪಕವಾಗಿ ಹಬ್ಬುವುದನ್ನು ಹಾಗೂ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದನ್ನು ನೋಡಿ ವ್ಯಕ್ತಿಯೊಬ್ಬರು ಮಾನಸಿಕವಾಗಿ ಭಯಗೊಂಡಿದ್ದರು. ಹೀಗಾಗಿ ತಮಗೆ ಸೋಂಕು ಬಂದಿರಬಹುದೆಂದು ಭಾವಿಸಿ ಅದರಿಂದ ಗುಣಮುಖರಾಗಲು ಸ್ನೇಹಿತನೊಬ್ಬನ ಸಲಹೆಯಂತೆ ಸೀಮೆ ಎಣ್ಣೆ ಕುಡಿದಿದ್ದಾರೆ.
ಸೀಮೆ ಎಣ್ಣೆ ಸೇವಿಸಿದ ವ್ಯಕ್ತಿಯ ಹೆಸರು ಮಹೇಂದ್ರ ಎಂದು ತಿಳಿದುಬಂದಿದ್ದು, ಇವರು ಭೋಪಾಲ್ನ ಅಶೋಕ್ ಗಾರ್ಡನ್ ಏರಿಯಾದಲ್ಲಿ ದರ್ಜಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಸ್ನೇಹಿತನ ಸಲಹೆಯಂತೆ ಸೀಮೆ ಎಣ್ಣೆ ಕುಡಿದ ಪರಿಣಾಮ ಅವರ ಆರೋಗ್ಯ ಬಿಗಡಾಯಿಸಲಾರಂಭಿಸಿದ್ದು ಕುಟುಂಬ ಸದಸ್ಯರು ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅಲ್ಲಿಂದ ಇನ್ನೊಂದು ಆಸ್ಪತ್ರೆಗೆ ವರ್ಗಾಯಿಸುವಂತೆ ವೈದ್ಯರು ತಿಳಿಸಿದ ಕಾರಣ ಬೇರೆಡೆಗೆ ತೆರಳಿದ್ದಾರೆ.
ದುರದೃಷ್ಟವಶಾತ್, ಬೇರೊಂದು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಾಗಲೇ ಮಹೇಂದ್ರ ಕೊನೆಯುಸಿರೆಳೆದಿದ್ದು ಆಸ್ಪತ್ರೆಗೆ ತೆರಳಿದಾಗ ವೈದ್ಯರು ಮರಣ ಹೊಂದಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಈ ವ್ಯಕ್ತಿ ಸಾವಿಗೀಡಾದ ನಂತರ ಅವರ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದ್ದು, ಸ್ನೇಹಿತ ನೀಡಿದ ತಪ್ಪು ಮಾಹಿತಿಗೆ ಅಮಾಯಕರೊಬ್ಬರು ಅನ್ಯಾಯವಾಗಿ ಜೀವ ಕಳೆದುಕೊಂಡಿರುವುದು ಕುಟುಂಬಸ್ಥರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ಇದನ್ನೂ ಓದಿ:
ಹೆದರುವುದು ಬೇಡ, ಆತ್ಮಸ್ಥೈರ್ಯದಿಂದಿರಿ; ಕೊರೊನಾ ಗೆದ್ದು ಬಂದ ಒಂದೇ ಕುಟುಂಬದ 17 ಮಂದಿ