ಬಿಜೆಪಿ ಕಾರ್ಯಕರ್ತರ ಹತ್ಯೆ ಪ್ರಕರಣ: ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೊಟೀಸ್ ಜಾರಿಗೊಳಿಸಿದ ಸುಪ್ರೀಂ ಕೋರ್ಟ್

ಅರ್ಜಿದಾರರು ತನಿಖೆಗೆ ವಿಶೇಷ ತನಿಖಾ ದಳ (ಎಸ್​ಐಟಿ) ರಚಿಸುವಂತೆ ಕೋರಿದ್ದರು. ತನ್ನ ಸಹೋದರ ಹಾಗೂ ಬಿಜೆಪಿ ಬೂತ್ ಕಾರ್ಯಕರ್ತ ಹರನ್ ಅಧಿಕಾರಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಂದ ಹತ್ಯೆಗೀಡಾಗಿದ್ದಾರೆ ಎಂದು ಆರೋಪ ವ್ಯಕ್ತವಾಗಿತ್ತು.

ಬಿಜೆಪಿ ಕಾರ್ಯಕರ್ತರ ಹತ್ಯೆ ಪ್ರಕರಣ: ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೊಟೀಸ್ ಜಾರಿಗೊಳಿಸಿದ ಸುಪ್ರೀಂ ಕೋರ್ಟ್
ಸುಪ್ರೀಂಕೋರ್ಟ್

ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ ಪ್ರಕಟವಾದ ದಿನದಂದು ನಡೆದ ಇಬ್ಬರು ಬಿಜೆಪಿ ಕಾರ್ಯಕರ್ತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಿಟ್ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಸ್ ಸಂಬಂಧಿಸಿ ಇಂದು (ಮೇ 18) ನೊಟೀಸ್ ಜಾರಿಗೊಳಿಸಿದೆ. ಎಸ್​ಐಟಿ ಅಥವಾ ಸಿಬಿಐ ತನಿಖೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಇಂದು ನೊಟೀಸ್ ನೀಡಿದೆ. ಮುಂದಿನ ಮಂಗಳವಾರ ಕೋರ್ಟ್ ಪ್ರಕರಣವನ್ನು ಮತ್ತೆ ಕೈಗೆತ್ತಿಕೊಳ್ಳಲಿದೆ.

ನ್ಯಾಯಮೂರ್ತಿ ವಿನೀತ್ ಸರನ್ ಹಾಗೂ ಬಿ.ಆರ್. ಗವಲ್ ನೇತೃತ್ವದ ನ್ಯಾಯಪೀಠ ಬಿಸ್ವಜಿತ್ ಸರ್ಕಾರ್ ಎಂಬವರು ಸಲ್ಲಿಸಿದ್ದ ರಿಟ್ ಅರ್ಜಿಗೆ ಸಂಬಂಧಿಸಿ ಹೀಗೆ ಸೂಚನೆ ನೀಡಿದೆ. ಬಿಸ್ವಜಿತ್ ಸರ್ಕಾರ್, ಹತ್ಯೆಗೀಡಾಗಿದ್ದ ಬಿಜೆಪಿ ಸದಸ್ಯ ಅವಿಜಿತ್ ಸರ್ಕಾರ್ ಎಂಬವರ ಸಹೋದರನಾಗಿದ್ದಾರೆ.

ಅರ್ಜಿದಾರರು ತನಿಖೆಗೆ ವಿಶೇಷ ತನಿಖಾ ದಳ (ಎಸ್​ಐಟಿ) ರಚಿಸುವಂತೆ ಕೋರಿದ್ದರು. ತನ್ನ ಸಹೋದರ ಹಾಗೂ ಬಿಜೆಪಿ ಬೂತ್ ಕಾರ್ಯಕರ್ತ ಹರನ್ ಅಧಿಕಾರಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಂದ ಹತ್ಯೆಗೀಡಾಗಿದ್ದಾರೆ ಎಂದು ಆರೋಪ ವ್ಯಕ್ತವಾಗಿತ್ತು. ಹರನ್ ಅಧಿಕಾರಿ ಪತ್ನಿ ಎರಡನೇ ಅರ್ಜಿದಾರರಾಗಿದ್ದಾರೆ.

ಅರ್ಜಿಯು ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾತ್ಮಕ ಕೃತ್ಯಗಳ ಬಗ್ಗೆಯೂ ತನಿಖೆ ನಡೆಸುವಂತೆ ಕೋರಿದೆ. ಚುನಾವಣಾ ಫಲಿತಾಂಶದ ದಿನ ಅಂದರೆ ಮೇ 2ರಂದು ಪಶ್ಚಿಮ ಬಂಗಾಳದಲ್ಲಿ ಹಿಂಸಾತ್ಮಕ ಕೃತ್ಯಗಳು ವರದಿಯಾಗಿದ್ದವು.

ಕೇಂದ್ರ ಸಚಿವರ ಪ್ರಚೋದನೆ: ಮಮತಾ ಬ್ಯಾನರ್ಜಿ ಆರೋಪ
ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರಕ್ಕೆ ಕೇಂದ್ರ ಸಚಿವರು ಪ್ರಚೋದನೆ ನೀಡುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಮೇ 2ರಂದು ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ಟಿಎಂಸಿ ಮತ್ತೊಮ್ಮೆ ಅಧಿಕಾರಕ್ಕೇರಿದ ಬೆನ್ನಲ್ಲೇ ಇಲ್ಲಿ ಹಿಂಸಾಚಾರ ನಡೆದಿತ್ತು. ಈ ಹಿಂಸಾಚಾರದಲ್ಲಿ ಈವರೆಗೆ 16 ಮಂದಿ ಮೃತಪಟ್ಟಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು. ಚುನಾವಣೋತ್ತರ ಹಿಂಸಾಚಾರದಲ್ಲಿ ಸಾವಿಗೀಡಾದ ಜನರ ಕುಟುಂಬಗಳಿಗೆ ಮಮತಾ ₹2 ಲಕ್ಷ ಪರಿಹಾರ ಧನ ಘೋಷಿಸಿದ್ದರು. ಕೂಚ್ ಬೆಹಾರ್ ಗುಂಡಿನ ದಾಳಿಗೆ ಬಲಿಯಾದ ನಾಲ್ವರು ವ್ಯಕ್ತಿಗಳ ಕುಟುಂಬದ ಸದಸ್ಯರಿಗೆ ಹೋಮ್ ಗಾರ್ಡ್ ಕೆಲಸ ನೀಡುವುದಾಗಿ ಮಮತಾ ಭರವಸೆ ನೀಡಿದ್ದರು.

ಪಶ್ಚಿಮ ಮಿಡ್ನಾಪೋರ್ ಜಿಲ್ಲೆಯಲ್ಲಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ವಿ ಮುರಳೀಧರನ್ ಅವರ ಬೆಂಗಾವಲು ವಾಹನದ ಮೇಲೆ ದಾಳಿ ನಡೆದ ಕೆಲವೇ ಗಂಟೆಗಳ ನಂತರ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದರು. ಮುರಳೀಧರನ್ ಕಾರಿನ ಮೇಲೆ ಟಿಎಂಸಿ ಗೂಂಡಾಗಳು ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಮೇ 2 ರಂದು ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಭುಗಿಲೆದ್ದ ಚುನಾವಣೋತ್ತರ ಹಿಂಸಾಚಾರದ ಬಗ್ಗೆ ಪರಿಶೀಲಿಸಲು ಮುರಳೀಧರನ್ ಬಂಗಾಳಕ್ಕೆ ಹೋಗಿದ್ದರು.

ಇದನ್ನೂ ಓದಿ: West Bengal Elections 2021: ಸುಸೂತ್ರವಾಗಿ ನಡೆಯದ 5ನೇ ಹಂತದ ಮತದಾನ; ಟಿಎಂಸಿ-ಬಿಜೆಪಿ ಕಾರ್ಯಕರ್ತರ ನಡುವೆ ಕಲ್ಲುತೂರಾಟ

ಟಿಎಂಸಿ ನಾಯಕರ ಬಂಧನದ ಬೆನ್ನಲ್ಲೇ ಸಿಬಿಐ ಕಚೇರಿಯೆದುರು ಕಲ್ಲುತೂರಾಟ ನಡೆಸುತ್ತಿರುವ ಕಾರ್ಯಕರ್ತರು; ದೀದಿ ವಿರುದ್ಧ ದೂರು ದಾಖಲು