
ಇಂಫಾಲ್, ಫೆಬ್ರುವರಿ 9: ಮಣಿಪುರ ರಾಜ್ಯದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಇಂದು ಭಾನುವಾರ ರಾಜೀನಾಮೆ ನೀಡಿದ್ದಾರೆ. ಮಣಿಪುರ ರಾಜಧಾನಿ ಇಂಫಾಲದ ರಾಜಭವನದಲ್ಲಿ ರಾಜ್ಯಪಾಲ ಅಜಯ್ ಕುಮಾರ್ ಭಲ್ಲ ಅವರಿಗೆ ಬಿರೇನ್ ಸಿಂಗ್ ರಾಜೀನಾಮೆ ಪತ್ರ ಸಲ್ಲಿಸಿರುವುದು ತಿಳಿದುಬಂದಿದೆ. ಮಣಿಪುರ ರಾಜ್ಯ ಎರಡು ವರ್ಷದಿಂದ ಜನಾಂಗೀಯ ಕಲಹ ಹಾಗೂ ಹಿಂಸಾಚಾರದಿಂದ ನಲುಗುತ್ತಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ವಿಫಲರಾಗಿದ್ದಕ್ಕೆ ರಾಜೀನಾಮೆ ನೀಡಿದ್ದಾರೋ ಎಂಬುದು ಗೊತ್ತಾಗಿಲ್ಲ. ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟದ ಆಳ್ವಿಕೆ ಇದೆ.
‘ಇಷ್ಟರವರೆಗೆ ಮಣಿಪುರ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನನಗೊಂದು ಗೌರವ ಎನಿಸಿದೆ. ಮಣಿಪುರದ ಪ್ರತಿಯೊಬ್ಬ ವ್ಯಕ್ತಿಯ ಸುರಕ್ಷತೆಗೆ ಮತ್ತು ರಾಜ್ಯದ ಅಭಿವೃದ್ದಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಲು ನೆರವು ನೀಡಿದ ಕೇಂದ್ರ ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ಈ ಬೆಂಬಲವನ್ನು ಹೀಗೇ ಮುಂದುವರಿಸಬೇಕೆಂದು ಕೇಂದ್ರ ಸರ್ಕಾರವನ್ನು ಈ ಮೂಲಕ ಕೇಳಿಕೊಳ್ಳುತ್ತೇನೆ’ ಎಂದು ರಾಜ್ಯಪಾಲರಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ಸಿಎಂ ಬಿರೇನ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಲಿವ್-ಇನ್ ಸಂಗಾತಿಯಿಂದ ಕೊಲೆಯಾಗಿದ್ದ ಶ್ರದ್ಧಾ ವಾಕರ್ ತಂದೆ ಹೃದಯಾಘಾತದಿಂದ ಸಾವು
ಮಣಿಪುರ ರಾಜ್ಯ ಕಳೆದ ಎರಡು ವರ್ಷದಿಂದ ಹೊತ್ತಿ ಉರಿಯುತ್ತಿದೆ. ಬಹುಸಂಖ್ಯಾತ ಮೈತೇ ಸಮುದಾಯ ಹಾಗೂ ಕುಕಿ ಎನ್ನುವ ಬುಡಕಟ್ಟು ಗುಡ್ಡಗಾಡು ಸಮುದಾಯಗಳ ನಡುವೆ ನಿರಂತರ ಹಿಂಸಾಚಾರ ನಡೆಯುತ್ತಿದೆ. ಅಧಿಕೃತ ಲೆಕ್ಕದ ಪ್ರಕಾರವೇ 200ಕ್ಕೂ ಹೆಚ್ಚು ಜನರು ಹಿಂಸಾಚಾರಗಳಿಗೆ ಬಲಿಯಾಗಿದ್ದಾರೆ.
ಮೈತೇ ಸಮುದಾಯಕ್ಕೆ ಪರಿಶಿಷ್ಟ ವರ್ಗದ ಸ್ಥಾನಮಾನ ನೀಡುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸು ಕಳುಹಿಸಿದ್ದು, ಅಲ್ಪಸಂಖ್ಯಾತ ಕುಕಿ ಸಮುದಾಯವನ್ನು ರೊಚ್ಚಿಗೆಬ್ಬಿಸಿತ್ತು. ಇದು ಜನಾಂಗೀಯ ಹಿಂಸಾಚಾರಗಳಿಗೆ ಕಾರಣವಾಯಿತು ಎನ್ನಲಾಗುತ್ತಿದೆ.
ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ 3 ದಿನಗಳ ಕಾಲ ಅಂತಾರಾಷ್ಟ್ರೀಯ ಪಕ್ಷಿ ಉತ್ಸವ
ಮಣಿಪುರ ರಾಜ್ಯದಲ್ಲಿ 60 ಸದಸ್ಯಬಲದ ವಿಧಾನಸಭೆ ಇದ್ದು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ 49 ಸ್ಥಾನ ಹೊಂದಿದೆ. ವಿಪಕ್ಷಗಳ ಬಲ ಇರುವುದು ಬಹಳ ಅತ್ಯಲ್ಪ. ಪ್ರಮುಖ ವಿಪಕ್ಷವಾದ ಕಾಂಗ್ರೆಸ್ ವಿಧಾನಸಭೆಯಲ್ಲಿ ಸಿಎಂ ವಿರುದ್ಧ ಅವಿಶ್ವಾಸ ಗೊತ್ತುವಳಿ ಹೊರಡಿಸಲು ಯೋಜಿಸಿದೆ. ಈ ಹಿನ್ನೆಲೆಯಲ್ಲಿ ಬಿರೇನ್ ಸಿಂಗ್ ಅವರು ರಾಜೀನಾಮೆ ಕೊಟ್ಟಿರುವುದು ಕುತೂಹಲ ಮೂಡಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:44 pm, Sun, 9 February 25