ದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ (Delhi liquor policy case) ಭ್ರಷ್ಟಾಚಾರದ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳದಿಂದ ಬಂಧಿತರಾಗಿರುವ ಮನೀಶ್ ಸಿಸೋಡಿಯಾ (Manish Sisodia)ಅವರು ಮಂಗಳವಾರ ಅರವಿಂದ ಕೇಜ್ರಿವಾಲ್(Arvind Kejriwal) ನೇತೃತ್ವದ ದೆಹಲಿ ಸರ್ಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಚಿವರ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿತ್ತು. ಬಂಧಿತ ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವರಾದ ಸತ್ಯೇಂದ್ರ ಜೈನ್ ಅವರು ಕೂಡಾ ಇಂದು ದೆಹಲಿ ಸಂಪುಟದಿಂದ ಹೊರಬಂದಿದ್ದಾರೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದು ಖಾತೆಗಳನ್ನು ಮರು ನಿಯೋಜಿಸಿದ್ದಾರೆ.
ರಾಜೀನಾಮೆಗಳು ತಪ್ಪಿತಸ್ಥರು ಎಂದು ಅಂಗೀಕರಿಸಿದ್ದಲ್ಲ, ಎಎಪಿ ಇದನ್ನು “ಆಡಳಿತಾತ್ಮಕ ಹೆಜ್ಜೆ” ಎಂದು ವಿವರಿಸಿದೆ. ಯಾವುದೇ ಹೊಸ ಸಚಿವರು ಸಂಪುಟ ಸೇರುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಿಸೋಡಿಯಾ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ, ಎಂಟು ವರ್ಷಗಳ ಕಾಲ ಸಂಪೂರ್ಣ ಸಮರ್ಪಣಾಭಾವದಿಂದ ದೆಹಲಿಗೆ ಸೇವೆ ಸಲ್ಲಿಸಿರುವೆ. ನನ್ನ ವಿರುದ್ಧದ ಆರೋಪಗಳು ಸುಳ್ಳು. ನನ್ನ ವಿರುದ್ಧ ಇನ್ನೂ ಹೆಚ್ಚಿನ ಪ್ರಕರಣಗಳಿರುವ ಸಾಧ್ಯತೆಯಿದೆ… ಈ ಆರೋಪಗಳು ಸುಳ್ಳೆಂದು ದೇವರಿಗೆ ಗೊತ್ತು ಎಂದು ಹೇಳಿದ್ದಾರೆ. ಇನ್ನು ದೆಹಲಿ ಸಂಪುಟದಲ್ಲಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಐವರು ಸಚಿವರಿದ್ದಾರೆ.
ಮನೀಶ್ ಸಿಸೋಡಿಯಾ ಅವರ ಇಲಾಖೆಗಳನ್ನು ಕೈಲಾಶ್ ಗಹ್ಲೋಟ್ ಮತ್ತು ರಾಜ್ ಕುಮಾರ್ ಆನಂದ್ ಅವರಿಗೆ ವಹಿಸಲಾಗುವುದು.
ದೆಹಲಿಯ ಉಪಮುಖ್ಯಮಂತ್ರಿಯಾಗಿದ್ದ ಸಿಸೋಡಿಯಾ 10 ತಿಂಗಳಿನಿಂದ ಜೈಲಿನಲ್ಲಿರುವ ಸತ್ಯೇಂದ್ರ ಜೈನ್ ಅವರ ಆರೋಗ್ಯ ಖಾತೆ ಸೇರಿದಂತೆ 18 ಸಚಿವಾಲಯಗಳ ಉಸ್ತುವಾರಿ ವಹಿಸಿದ್ದರು.
ದೆಹಲಿ ಕ್ಯಾಬಿನೆಟ್‌ನಲ್ಲಿ ಈಗ ಐವರು ಮಂತ್ರಿಗಳಿದ್ದಾರೆ. ಕೇಜ್ರಿವಾಲ್ ಅವರು ಯಾವುದೇ ಸಚಿವಾಲಯವನ್ನು ತೆಗೆದುಕೊಂಡಿಲ್ಲ, ಬದಲಿಗೆ ಎಎಪಿಯ ರಾಷ್ಟ್ರೀಯ ಯೋಜನೆಗಳನ್ನು ಮುಂದುವರಿಸಲು ಆದ್ಯತೆ ನೀಡುತ್ತಾರೆ.
ಶಿಕ್ಷಣ ಸಚಿವರಾಗಿ ದೆಹಲಿಯ ಶಾಲೆಗಳಲ್ಲಿ ಶಿಕ್ಷಣ ಕ್ರಾಂತಿ ಉಂಟು ಮಾಡಿದ ಸಿಸೋಡಿಯಾ ಅವರು ಸರ್ಕಾರದಲ್ಲಿ 18 ಇಲಾಖೆಗಳ ಉಸ್ತುವಾರಿ ವಹಿಸಿದ್ದರು. ಅತೀ ಹೆಚ್ಚು ಖಾತೆಗಳನ್ನು ಹೊಂದಿದ ಸಚಿವರಾಗಿದ್ದರು ಅವರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:34 pm, Tue, 28 February 23