Mann Ki Baat | ಮೇಡ್ ಇನ್ ಇಂಡಿಯಾ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ: ನರೇಂದ್ರ ಮೋದಿ

|

Updated on: Dec 27, 2020 | 12:12 PM

ಮನ್ ಕೀ ಬಾತ್ ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಈಗ ಆತ್ಮನಿರ್ಭರತೆಯೆಂಬ ಹೊಸ ಸಾಮರ್ಥ್ಯ ಹುಟ್ಟಿಕೊಂಡಿದೆ. ದೇಶದಲ್ಲಿ ತಯಾರಿಸಲ್ಪಟ್ಟ ಆಟಿಕೆಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂದಿದ್ದಾರೆ.

Mann Ki Baat | ಮೇಡ್ ಇನ್ ಇಂಡಿಯಾ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ: ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ
Follow us on

ದೆಹಲಿ: ದೇಶೀಯ ವಸ್ತುಗಳ ಮೇಲೆ ಜನರ ಆಕರ್ಷಣೆ ಹೆಚ್ಚುತ್ತಿದೆ. ಝೀರೋ ಇಫೆಕ್ಟ್- ಝೀರೋ ಡಿಫೆಕ್ಟ್‌ ಯೋಚನೆಯಿಂದ ಕೆಲಸ ಮಾಡುವ ಸಮಯ ಇದಾಗಿದ್ದು, ದೇಶದಲ್ಲಿ ಉತ್ಪಾದಿತ ವಸ್ತುಗಳ ಬಳಕೆಯ ಸಂಕಲ್ಪ ಮಾಡಲು ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಕರೆ ನೀಡಿದರು.

2020ರ ಕೊನೆಯ ಮನ್ ಕೀ ಬಾತ್​ನಲ್ಲಿ ಮಾತನಾಡಿದ ಅವರು,ದೇಶದಲ್ಲೇ ಎಲ್ಲಾ ಅಗತ್ಯ ವಸ್ತುಗಳನ್ನು ತಯಾರಿಸುತ್ತಿದ್ದೇವೆ. ದೇಶಿಯ ವಸ್ತುಗಳ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗಬಾರದು. ದೇಶದಲ್ಲಿ ಸ್ಟಾರ್ಟ್‌ ಅಪ್‌ಗಳು ಹೆಚ್ಚು ಹುಟ್ಟಬೇಕು. ಹೊಸ ಯೋಚನೆಗಳು ಅನುಷ್ಠಾನಕ್ಕೆ ಬರಬೇಕು ಎಂದ ಅವರು, ಜಾಗತಿಕ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವಂತೆ ದೇಶದ ಎಲ್ಲಾ ಕೈಗಾರಿಕೋದ್ಯಮಿಗಳಲ್ಲಿ ಮನವಿ ಮಾಡಿದರು.

ಅನುರಣನಗೊಂಡ ಕರ್ನಾಟಕ
ಪ್ರಧಾನಿ ನರೇಂದ್ರ ಮೋದಿಯವರ ಈ ವರ್ಷದ ಕೊನೆಯ ಮನ್ ಕೀ ಬಾತ್​ನಲ್ಲಿ ಕರ್ನಾಟಕದ ಎರಡು ಬಾರಿ ಪ್ರಸ್ತಾಪವಾಯಿತು. ರಾಜ್ಯದ ಸೋಮೇಶ್ವರ ಬೀಚ್‌ನಲ್ಲಿದ್ದ 800 ಕೆಜಿಗೂ ಹೆಚ್ಚು ಕಸವನ್ನು ಸ್ವಸ್ಥಗೊಳಿಸಿದ ಅನುದೀಪ್ ದಂಪತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದರು. ಸ್ವಚ್ಛ ಭಾರತಕ್ಕೆ ನಾವೆಲ್ಲರೂ ಕೈಗೂಡಿಸಬೇಕು, ಒಂದೇ ಒಂದು ಪ್ಲಾಸ್ಟಿಕ್ ಕಸ ಸಹ ಸಾರ್ವಜನಿಕ ಪ್ರದೇಶಗಳಲ್ಲಿರದಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.

ಮೈಸೂರಿನ ಶ್ರೀರಂಗಪಟ್ಟಣದ ವೀರಭದ್ರ ಸ್ವಾಮಿ ದೇವಸ್ಥಾನದ ಪರಿಸರದಲ್ಲಿ ಗಿಡಕಂಟಿ, ಪೊದೆಗಳು ಬೆಳೆದಿದ್ದವು. ದೇಗುಲದ ಆವರಣವನ್ನು ಯುವಾ ಬ್ರಿಗೇಡ್​ ಕಾರ್ಯಕರ್ತರು ಸ್ವಚ್ಛಗೊಳಿಸಿದರು. ಕುರಿತು ಪ್ರಸ್ತಾಪಿಸಿದ ಪ್ರಧಾನಿ, ಯುವ ಸಮೂಹದ ಇಂತಹ ಕಾರ್ಯಗಳು ದೇಶದ ಜನರಿಗೆ ಮಾದರಿಯಾಗಬೇಕು. ಸ್ಥಳೀಯರ ಸಹಕಾರದಿಂದ ನಮ್ಮ ಸ್ಮಾರಕ, ದೇವಸ್ಥಾನಗಳು ಪುನರುಜ್ಜೀವನಗೊಳ್ಳಬೇಕು ಎಂದು ತಿಳಿಸಿದರು.


ಸೇಬು, ಕೇಸರಿಯಿಂದ ಕಾಶ್ಮೀರಿಗರು ಹೆಮ್ಮೆ ಪಡಲಿ
ಕಾಶ್ಮೀರದ ಸೇಬು, ಕೇಸರಿಗೆ ಜಿಐ ಟ್ಯಾಗ್ ದೊರಕಿದ್ದರಿಂದ ವಿಶ್ವದಾದ್ಯಂತ ಪ್ರಚಾರ ಪಡೆಯಲು ಸಹಾಯವಾಯಿತು. ಜಮ್ಮು ಕಾಶ್ಮೀರದ ಸಮೃದ್ಧ ಸಂಸ್ಕೃತಿ ವಿಶ್ವಕ್ಕೇ ಪರಿಚಯವಾಯಿತು. ಜಿಐ ಟ್ಯಾಗ್ ದೊರಕಿದ ನಂತರ ದುಬೈನ ಒಂದು ಸೂಪರ್ ಮಾರ್ಕೆಟ್​ ಕೇಸರಿಯನ್ನು ಆಮದು ಮಾಡಿಕೊಳ್ಳತೊಡಗಿತು. ಕಾಶ್ಮೀರದ ಜನರು ತಾವು ಬೆಳೆಯುವ ಕೇಸರಿಯ ಕುರಿತು ಗರ್ವ ಪಡಬಹುದು ಎಂದು ಅವರು ಬ್ರಾಂಡ್ ಇಂಡಿಯಾ ಕಲ್ಪನೆ ತೆರೆದಿಟ್ಟರು.

ಗೀತಾ ಜಯಂತಿಯನ್ನು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ, ಭಗವದ್ಗೀತೆಯೆಂಬ ಅದ್ಭುತ ಗ್ರಂಥವನ್ನು ಸ್ವಯಂ ಪರಮಾತ್ಮನೇ ಬೋಧಿಸಿದ್ದಾನೆ. ಗೀತೆ ನಮ್ಮಲ್ಲಿ ಹೊಸ ತರ್ಕಗಳನ್ನು ಹುಟ್ಟಿಸುತ್ತದೆ. ಹೊಸ ತರ್ಕಗಳಿಂದಲೇ ಹೊತರ ಕಲಿಕೆ ಸಾಧ್ಯವಾಗುತ್ತದೆ. ಇದಕ್ಕೆ ಸಾದೃಶ್ಯ ಉದಾಹರಣೆ ತಮಿಳುನಾಡಿನ 94 ವರ್ಷದ ಟಿ. ಶ್ರೀನಿವಾಸನ್ ಸ್ವಾಮೀಜಿ ಎಂದರು.

ಟಿ. ಶ್ರೀನಿವಾಸನ್ ಸ್ವಾಮೀಜಿ ಅಧ್ಯಾತ್ಮಿಕ ಬರಹಗಳನ್ನು ಬರೆಯುತ್ತಾರೆ. ಅವರೇ ಕಂಪ್ಯೂಟರ್​ನಲ್ಲಿ ಟೈಪ್ ಮಾಡುತ್ತಾರೆ. ಅವರ ಕಾಲದಲ್ಲಿ ಕಂಪ್ಯೂಟರ್​ ಇರಲಿಲ್ಲ. ಆದರೆ, ಅವರ ಕಲಿಯುವ ಇಚ್ಛೆಯೇ ಕಂಪ್ಯೂಟರ್​ ಕಲಿಕೆಗೆ ಸಹಕಾರಿಯಾಯಿತು. ತರ್ಕಗಳು ಹೊಸ ವಿಷಯಗಳನ್ನು ನಮಗೆ ಕಲಿಸುತ್ತವೆ. ಯಾವಾಗಲೂ ಹೊಸ ವಿಷಯಗಳನ್ನು ಕಲಿಯುವ ಉತ್ಸಾಹ ನಮ್ಮದಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. 2021ರ ಮನ್ ಕೀ ಬಾತ್​ನಲ್ಲಿ ಮರಳಿ ಭೇಟಿಯಾಗುವುದಾಗಿ ಅವರು ತಿಳಿಸಿದರು.

Published On - 11:03 am, Sun, 27 December 20