Delhi Chalo: ಆಕಾಶ ತಲುಪಿದ ಚಳುವಳಿಕಾರ ಬೇಡಿಕೆಗಳು!
ಪಂಜಾಬ್- ಹರಿಯಾಣದ ಯುವಕರು ವಿಭಿನ್ಬ ರೀತಿಯಲ್ಲಿ ದೆಹಲಿ ಚಲೋ ಚಳುವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ಗಾಳಿಪಟಗಳನ್ನು ಹಾರಿಸುವ ಮೂಲಕ ತಮ್ಮ ಸಂದೇಶವನ್ನು ಆಕಾಶದಲ್ಲಿ ಹರಿಬಿಡುತ್ತಿದ್ದಾರೆ.
ದೆಹಲಿ: ಒಂದು ತಿಂಗಳಿಂದ ನಡೆಸುತ್ತಿರುವ ಪಂಜಾಬ್ ರೈತರ ಚಳುವಳಿಯ ಕೂಗು ಈಗ ಆಕಾಶ ತಲುಪಿದೆ ಎಂದರೆ ತಪ್ಪಾಗುವುದಿಲ್ಲ. ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಲು ಚಳುವಳಿ ನಿರತರು ವಿಭಿನ್ನ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಸದ್ದು ಗದ್ದಲವಿಲ್ಲದೇ ತಮ್ಮ ಧ್ವನಿಯನ್ನು ಆಕಾಶದಾದ್ಯಂತ ಪಸರಿಸುತ್ತಿದ್ದಾರೆ.
ಯುವಕರ ಪಡೆಯೊಂದು ನೂತನ ಕೃಷಿ ಕಾಯ್ದೆ ವಿರೋಧಿ ಘೋಷಣೆಗಳನ್ನು ಬರೆದಿರುವ ಗಾಳಿಪಟಗಳನ್ನು ಹಾರಿಸುತ್ತಿದೆ.. ‘ರೈತರಿಲ್ಲದೇ ಆಹಾರವಿಲ್ಲ‘, ‘ನಾವು ರೈತರು ಭಯೋತ್ಪಾದಕರಲ್ಲ’ ಎಂದು ಬರೆದಿರುವ ಬಣ್ಣ ಬಣ್ಣದ ಗಾಳಿಪಟಗಳನ್ನು ಹಾರಿಸುತ್ತಿದ್ದಾರೆ. ಈ ಯೋಜನೆ ರೂಪಿಸಿರುವ ಯುವಕ ಸರ್ದೀಪ್ ಸಿಂಗ್, ‘ಬಹುಶಃ ಈ ಗಾಳಿಪಟಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾರ ಮನೆಯನ್ನೂ ತಲುಪಬಹುದು. ಆಗಾದರೂ, ಅವರಿಗೆ ನಮ್ಮ ಬೇಡಿಕೆ ಅರಿವಾಗಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗಾಳಿಪಟಗಳಲ್ಲಿ ತಮ್ಮ ಸಂದೇಶ ಬರೆದಿರುವ ಚಳುವಳಿಕಾರರು ‘ಈ ಗಾಳಿಪಟಗಳ ದಾರಗಳನ್ನು ತುಂಡರಿಸಿ ಹಾರಿಬಿಡುತ್ತೇವೆ. ಗಾಳಿಯಲ್ಲಿ ಹಾರಿ ಎಲ್ಲೆಲ್ಲೋ ತಲುಪುವ ಗಾಳಿಪಟಗಳು ನಮ್ಮ ಬೇಡಿಕೆಗಳನ್ನು ಇನ್ನಷ್ಟು ಜನರಿಗೆ ತಲುಪಿಸಲಿವೆ’ ಎಂದು ಅಭಿಪ್ರಾಯಪಡುತ್ತಾರೆ.
ಕೆಲವರು ಗಾಳಿಪಟ ಚಳುವಳಿಯನ್ನು ಫೇಸ್ಬುಕ್ ಲೈವ್ನಲ್ಲೂ ಹರಿಬಿಡುತ್ತಿದ್ದಾರೆ. ಯಾರು ಬೇಕಾದರೂ ಈ ಚಳುವಳಿಯ ಗಾಳಿಪಟ ಉತ್ಸವದಲ್ಲಿ ಭಾಗವಹಿಸಬಹುದು ಎಂದು ಹರಿಯಾಣದ ಕರಮ್ವೀರ್ ಸಿಂಗ್ ಹೇಳುತ್ತಾರೆ. ನಮ್ಮನ್ನು ತಪ್ಪಾಗಿ ವ್ಯಾಖ್ಯಾನಿಸುತ್ತಿರುವ ಸರ್ಕಾರಕ್ಕೆ ಗಾಳಿಪಟಗಳು ನಾವು ‘ಶಾಂತಿಯುತ’ ಪ್ರತಿಭಟನೆಯನ್ನಷ್ಟೇ ಮಾಡುತ್ತಿದ್ದೇವೆ ಎಂದು ತಿಳಿಸುತ್ತಿವೆ.
‘ಮೋದಿ ಮಧ್ಯಸ್ಥಿಕೆ ವಹಿಸಿದರೆ ರೈತರ ಪ್ರತಿಭಟನೆಗೆ ನಿಮಿಷದೊಳಗೆ ಅಂತ್ಯ ಹಾಡಬಹುದು’
Published On - 10:09 pm, Sat, 26 December 20