ಗುವಾಹಟಿ: ಸಿಕ್ಕಿಂನ (Sikkim) ನಾಥು ಲಾ ಮೌಂಟೇನ್ ಪಾಸ್‌ನಲ್ಲಿ ಇಂದು ಸಂಭವಿಸಿದ ಭಾರೀ ಹಿಮಕುಸಿತದಿಂದ ಪ್ರವಾಸಿಗರು ಹಿಮದಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಹಿಮಕುಸಿತ ಸಂಭವಿಸಿದಾಗ 150 ಕ್ಕೂ ಹೆಚ್ಚು ಪ್ರವಾಸಿಗರು ಈ ಪ್ರದೇಶದಲ್ಲಿದ್ದರು ಎಂದು ವರದಿ ತಿಳಿಸಿದೆ. ಇದೀಗ ಅಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಮೂಲಗಳ ಪ್ರಕಾರ 6 ಜನ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಗ್ಯಾಂಗ್‌ಟಾಕ್‌ನಿಂದ ನಾಥುಲಾಗೆ ಸಂಪರ್ಕ ಕಲ್ಪಿಸುವ ಜವಾಹರಲಾಲ್ ನೆಹರು ರಸ್ತೆಯ 15ನೇ ಮೈಲಿನಲ್ಲಿ ಮಧ್ಯಾಹ್ನ 12.15ರ ಸುಮಾರಿಗೆ ಹಿಮಕುಸಿತ ಸಂಭವಿಸಿದ್ದು, ಕನಿಷ್ಠ 150 ಪ್ರವಾಸಿಗರು ಈ ಪ್ರದೇಶದಲ್ಲಿದ್ದರು. ನಾಥು ಲಾ ಪಾಸ್, ಸಮುದ್ರ ಮಟ್ಟದಿಂದ 4,310 ಮೀಟರ್ (14,140 ಅಡಿ) ಎತ್ತರದಲ್ಲಿದೆ, ಇದು ಚೀನಾದ ಗಡಿಯಲ್ಲಿದೆ ಮತ್ತು ಇದು ಪ್ರಮುಖ ಪ್ರವಾಸಿ ತಾಣವಾಗಿದೆ.
ಸೈಟ್‌ನಿಂದ ವೀಡಿಯೊಗಳು ದುರಂತದ ಪ್ರಮಾಣವನ್ನು ತೋರಿಸಿದೆ. ಹತ್ತಾರು ಜನರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಹಿಮದಡಿಯಲ್ಲಿ ಸಿಕ್ಕಿಬಿದ್ದವರನ್ನು ಹೊರತೆಗೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಸುಮಾರು 22 ಜನರನ್ನು ರಕ್ಷಿಸಲಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಈ ಪೈಕಿ ಒಂದೂವರೆ ಗಂಟೆಗಳ ಕಾಲ ಹಿಮದಡಿಯಲ್ಲಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಲಾಗಿದೆ. ಬಾರ್ಡರ್ ರೋಡ್ಸ್ ಸಂಸ್ಥೆಯು ತ್ವರಿತ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಮತ್ತು ಈ ಆಳವಾದ ಕಣಿವೆಯಿಂದ 6 ಸೇರಿದಂತೆ 22 ಜನರನ್ನು ರಕ್ಷಿಸಲಾಗಿದೆ ಎಂದು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ತಿಳಿಸಿದೆ.
ಇದನ್ನೂ ಓದಿ: Army Helicopter Crash: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಅರುಣಾಚಲ ಪ್ರದೇಶದ ಮಂಡಲ ಹಿಲ್ಸ್ ಬಳಿ ಪತನ
ಸಿಕ್ಕಿಂ ಪೊಲೀಸರು, ಸಿಕ್ಕಿಂನ ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮತ್ತು ವಾಹನ ಚಾಲಕರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಸ್ತೆಯಿಂದ ಹಿಮವನ್ನು ತೆರವುಗೊಳಿಸಿದ ನಂತರ ಸಿಲುಕಿಕೊಂಡಿದ್ದ ಸುಮಾರು 350 ಪ್ರವಾಸಿಗರನ್ನು ರಕ್ಷಿಸಲಾಗಿದೆ.
Published On - 3:37 pm, Tue, 4 April 23