ಲಖನೌ: ಶ್ರೀಕಷ್ಣ ಜನ್ಮಭೂಮಿ (Krishna Janmabhoomi Case) ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಮಥುರಾ ನ್ಯಾಯಾಲಯವು ಮೇ 31ಕ್ಕೆ ಮುಂದೂಡಿದೆ. ಉತ್ತರ ಪ್ರದೇಶದ ಮಥುರಾದಲ್ಲಿರುವ ಶ್ರೀಕೃಷ್ಣ ಜನ್ಮಭೂಮಿಯನ್ನು ಅತಿಕ್ರಮಿಸಿ ಮಸೀದಿ ನಿರ್ಮಿಸಲಾಗಿದೆ. ಶಾಹಿ ಈದ್ಗಾ ಮಸೀದಿಯಲ್ಲಿ ಶುದ್ಧೀಕರಣ ವಿಧಿಗಳನ್ನು ನೆರವೇರಿಸಲು ಅವಕಾಶ ನೀಡಬೇಕು ಎಂದು ಕೋರಿ ಹಿಂದೂ ಮಹಾಸಭಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಕೃಷ್ಣ ಜನ್ಮಭೂಮಿಯ ಪಕ್ಕದಲ್ಲಿಯೇ ಶಾಹಿ ಈದ್ಗಾ ಮಸೀದಿಯೂ ಇದೆ. ವಾರಣಾಸಿಯ ಜ್ಞಾನವಾಪಿ ಮಸೀದಿಯ ವಿವಾದ ದೇಶದ ಗಮನ ಸೆಳೆದಿರುವ ಬೆನ್ನಲ್ಲೇ ಮಥುರದಲ್ಲಿಯೂ ಬಹುಕಾಲದ ವಿವಾದ ಮತ್ತೆ ಗರಿಗೆದರಿದೆ.
ಪ್ರಕರಣ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಮುಸ್ಲಿಂ ಪರ ವಕೀಲ, ‘ಸ್ಥಳೀಯ ದೇಗುಲ ಸಮಿತಿಗೆ ಮಸೀದಿಯ ಬಗ್ಗೆ ಯಾವುದೇ ಆಕ್ಷೇಪವಿಲ್ಲ. 1968ರ ಒಪ್ಪಂದಕ್ಕೆ ಅವರು ಇಂದಿಗೂ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಹೊರಗಿನವರು ಈ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣವನ್ನು ಜಿಲ್ಲಾ ನ್ಯಾಯಾಧೀಶರು ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದ್ದರು. ಜಿಲ್ಲಾ ನ್ಯಾಯಾಲಯದ ಸೂಚನೆಯಂತೆ ಸಿವಿಲ್ ನ್ಯಾಯಾಧೀಶರು ವಿಚಾರಣೆ ಆರಂಭಿಸಿ, ಮೇ 31ಕ್ಕೆ ವಿಚಾರಣೆಯನ್ನು ಮುಂದೂಡಿದರು’ ಎಂದು ಹೇಳಿದರು.
ದೇಗುಲ ಸಮಿತಿಯನ್ನೂ ಅರ್ಜಿದಾರರು ಪ್ರತಿವಾದಿಗಳೆಂದು ಹೆಸರಿಸಿದ್ದಾರೆ. ಆದರೆ ಈವರೆಗೆ ದೇಗುಲ ಸಮಿತಿಯು ಯಾವುದೇ ಸ್ಪಷ್ಟ ನಿಲುವಿಗೆ ಬಂದಿಲ್ಲ. ಅರ್ಜಿದಾರರು ತಾವೇ ಸ್ವತಃ ದೇಗುಲ ಸಮಿತಿಯ ಪ್ರತಿನಿಧಿಗಳಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು. ಶಾಹಿ ಈದ್ಗಾ ಮಸೀದಿ ಇರುವ ಸ್ಥಳದಲ್ಲಿಯೇ ಶ್ರೀಕೃಷ್ಣನ ಪುರಾತನ ದೇಗುಲವೂ ಇತ್ತು. ಶ್ರೀಕೃಷ್ಣನ ಜನ್ಮಭೂಮಿಯ ಗರ್ಭಗೃಹದ ಮೇಲೆಯೇ ಮಸೀದಿಯನ್ನು ನಿರ್ಮಿಸಲಾಗಿದೆ. ಮಸೀದಿಗೆ ಪ್ರವೇಶಿಸಿ ಅಭಿಷೇಕ ನಡೆಸಲು ಅವಕಾಶ ನೀಡಬೇಕು ಎಂದು ಹಿಂದೂ ಮಹಾಸಭಾಗದ ಖಜಾಂಚಿ ದಿನೇಶ್ ಶರ್ಮಾ ವಿನಂತಿಸಿದ್ದರು. ‘ಅವರು ಮೊದಲು ತಮ್ಮ ಖಡ್ಗದ ಬಲದಿಂದ ದಾಳಿ ನಡೆಸಿದರು. ಆದರೆ ಈಗ ನಾವು ನಮ್ಮ ಪುರಾತನ ಪರಂಪರೆಯನ್ನು ಮರಳಿ ಪಡೆಯಲು ಇಚ್ಛಿಸುತ್ತಿದ್ದೇವೆ. ಈ ಮಸೀದಿಯನ್ನು ತೆರವುಗೊಳಿಸಿ, ಹಿಂದೂಗಳ ಆತ್ಮಗೌರವಕ್ಕೆ ಮನ್ನಣೆ ನೀಡಬೇಕು’ ಎಂದು ಅವರು ಕೋರಿದ್ದರು.
ಶಾಹಿ ಈದ್ಗಾ ಮಸೀದಿಯ ಕಟ್ಟಡವೂ ಸೇರಿದಂತೆ 2.37 ಎಕರೆ ಭೂಮಿಯನ್ನು ಬಿಡುಗಡೆ ಮಾಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು. ಈ ಕುರಿತು ಅಧೀನ ನ್ಯಾಯಾಲಯವು ಮೇ 26ರಂದು ವಾದಗಳನ್ನು ಆಲಿಸಲಿದೆ.
ಶ್ರೀಕೃಷ್ಣ ದೇವಾಲಯಕ್ಕೆ ಸೇರಿದ್ದು ಎನ್ನುವ 13.37 ಎಕರೆ ಭೂಮಿಯನ್ನು ಸಂಪೂರ್ಣವಾಗಿ ಹಿಂದೂಗಳಿಗೆ ನೀಡಬೇಕು ಎನ್ನುವುದು ಹಿಂದೂ ಮಹಾಸಭಾದ ವಿನಂತಿ. ಈ ಭೂಮಿಯಲ್ಲಿಯೇ ಶಾಹಿ ಈದ್ಗಾ ಮಸೀದಿಯೂ ಇದೆ. ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಅರ್ಜಿ ಕುರಿತು ಪ್ರತಿಕ್ರಿಯಿಸಿದ್ದ ಶಾಹಿ ಈದ್ಗಾ ಮಸೀದಿ ಸಮಿತಿಯ ಕಾರ್ಯದರ್ಶಿ ತನ್ವೀರ್ ಅಹ್ಮದ್, 1991ರ ಪೂಜಾ ಸ್ಥಳಗಳ ಕಾಯ್ದೆಯನ್ನು ಎಲ್ಲರೂ ಗೌರವಿಸಬೇಕು. ಮಥುರಾದಲ್ಲಿ ಗೋಡೆಯ ಒಂದು ಬದಿಗೆ ಕೃಷ್ಣನ ಆಲಯವಿದ್ದರೆ, ಮತ್ತೊಂದು ಬದಿಗೆ ಮಸೀದಿಯಿದೆ. ಬಹುಕಾಲದಿಂದ ಇದು ಹೀಗೆಯೇ ನಡೆದುಕೊಂಡು ಬಂದಿದೆ. ಯಾರಿಗೂ ಇದರಿಂದ ಯಾವುದೇ ಸಮಸ್ಯೆ ಆಗಿರಲಿಲ್ಲ’ ಎಂದು ಹೇಳಿದ್ದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:08 pm, Wed, 25 May 22