ಅರಬ್ಬಿ ಸಮುದ್ರದಲ್ಲಿ ಕೋಸ್ಟ್ ಗಾರ್ಡ್-ಗುಜರಾತ್ ಎಟಿಎಸ್ ಮೆಗಾ ಆಪರೇಷನ್:3,000 ಕೋಟಿ ರೂ. ಮೌಲ್ಯದ 526 ಕೆಜಿ ಡ್ರಗ್ಸ್ ಜಪ್ತಿ
ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಗುಜರಾತ್ ಎಟಿಎಸ್ ಅರಬ್ಬಿ ಸಮುದ್ರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿವೆ. ಲಕ್ಷದ್ವೀಪದ ಬಳಿ ಇರಾನ್ ಬೋಟ್ ತಡೆದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 3,000 ಕೋಟಿ ರೂ. ಮೌಲ್ಯದ 526 ಕೆಜಿ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಐವರು ಪಾಕಿಸ್ತಾನಿ ಸ್ಮಗ್ಲರ್‌ಗಳನ್ನು ಬಂಧಿಸಲಾಗಿದೆ. 'ನಶಾ ಮುಕ್ತ ಭಾರತ' ಅಭಿಯಾನಕ್ಕೆ ಇದು ದೊಡ್ಡ ಬಲ ನೀಡಿದ್ದು, ಡ್ರಗ್ಸ್ ಜಾಲಕ್ಕೆ ಪ್ರಬಲ ಹೊಡೆತ ಬಿದ್ದಿದೆ.

ಅಹಮದಾಬಾದ್, ಸೆಪ್ಟೆಂಬರ್ 30: ಭಾರತೀಯ ಕರಾವಳಿ ಕಾವಲು ಪಡೆ (ICG) ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿಯಾಗಿ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 3,000 ಕೋಟಿ ರೂ.ಗೂ ಅಧಿಕ ಮೌಲ್ಯದ 526 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಕ್ಷದ್ವೀಪದ ಪಶ್ಚಿಮ ಭಾಗದ ಅರಬ್ಬಿ ಸಮುದ್ರದಲ್ಲಿ ಇರಾನ್ ಮೂಲದ ಬೃಹತ್ ಮರದ ದೋಣಿಯನ್ನು ತಡೆದು, ಅದನ್ನು ನಿರ್ವಹಿಸುತ್ತಿದ್ದ ಐವರು ಪಾಕಿಸ್ತಾನಿ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ.
ಮಿಂಚಿನ ಕಾರ್ಯಾಚರಣೆ ನಡೆದಿದ್ದು ಹೇಗೆ?
ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕರಾವಳಿ ಕಾವಲು ಪಡೆ ಮತ್ತು ಗುಜರಾತ್ ಎಟಿಎಸ್ ಸಿಬ್ಬಂದಿ ಸೆಪ್ಟೆಂಬರ್ 25 ರಂದು ಹೈ-ಸೀಸ್ ಕಾರ್ಯಾಚರಣೆಯನ್ನು ಆರಂಭಿಸಿದರು. ಭಾರತೀಯ ಕರಾವಳಿ ಕಾವಲು ಪಡೆಯ ಹಡಗುಗಳು ಮತ್ತು ಕಣ್ಗಾವಲು ವಿಮಾನಗಳು ಜಂಟಿಯಾಗಿ ಶಂಕಿತ ಹಡಗನ್ನು ನಿರಂತರವಾಗಿ ಟ್ರ್ಯಾಕ್ ಮಾಡಿದವು. ನಂತರ ಮಧ್ಯ ಸಮುದ್ರದಲ್ಲೇ ಬೋಟ್ ಅನ್ನು ಸುತ್ತುವರೆಯಲಾಯಿತು.
ಭಾರಿ ಪ್ರಮಾಣದ ಮಾದಕ ವಸ್ತು ಜಪ್ತಿ: ದೋಣಿಯನ್ನು ಪರಿಶೀಲಿಸಿದಾಗ ಸರಿಸುಮಾರು 526 ಕೆಜಿ ತೂಕದ ಅತ್ಯಂತ ಮಾರಕವಾದ ಹೆರಾಯಿನ್ ಮತ್ತು ಮೆಥಾಂಫೆಟಮೈನ್ ಪತ್ತೆಯಾಗಿದೆ.
ತನಿಖೆಗೆ ಮುಂಬೈಗೆ ರವಾನೆ: ವಶಪಡಿಸಿಕೊಂಡ ಇರಾನ್ ದೋಣಿ, ಭಾರಿ ಪ್ರಮಾಣದ ಡ್ರಗ್ಸ್ ಮತ್ತು ಬಂಧಿತ ಐವರು ಪಾಕಿಸ್ತಾನಿ ಸಿಬ್ಬಂದಿಯನ್ನು ಸಶಸ್ತ್ರ ಭದ್ರತೆಯೊಂದಿಗೆ ಹೆಚ್ಚಿನ ವಿಚಾರಣೆಗಾಗಿ ಮುಂಬೈ ಬಂದರಿಗೆ ತರಲಾಗಿದೆ.
ಮತ್ತಷ್ಟು ಓದಿ:
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಗೋಲ್ಡನ್ ಕ್ರೆಸೆಂಟ್ ಮತ್ತು ಅರಬ್ಬಿ ಸಮುದ್ರ ಜಾಲ: ಇರಾನ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳನ್ನು ಒಳಗೊಂಡಿರುವ ‘ಗೋಲ್ಡನ್ ಕ್ರೆಸೆಂಟ್’ ಪ್ರದೇಶವು ಜಾಗತಿಕ ಅಫೀಮು ಮತ್ತು ಹೆರಾಯಿನ್ ಉತ್ಪಾದನೆಯ ಪ್ರಮುಖ ಕೇಂದ್ರವಾಗಿದೆ. ಅಫ್ಘಾನಿಸ್ತಾನದಿಂದ ಪಾಕಿಸ್ತಾನದ ಮಕ್ರಾನ್ ಕರಾವಳಿಯ ಮೂಲಕ ಸಣ್ಣ ದೋಣಿಗಳಲ್ಲಿ ಮಾದಕ ದ್ರವ್ಯಗಳನ್ನು ಲೋಡ್ ಮಾಡಿ, ಅರಬ್ಬಿ ಸಮುದ್ರದ ಮಾರ್ಗವಾಗಿ ಭಾರತ, ಶ್ರೀಲಂಕಾ ಮತ್ತು ಮಾಲ್ಡೀವ್ಸ್‌ಗೆ ಕಳ್ಳಸಾಗಣೆ ಮಾಡುವ ಜಾಲ ದೀರ್ಘಕಾಲದಿಂದ ಸಕ್ರಿಯವಾಗಿದೆ.
ವಿಡಿಯೋ
VIDEO | Indian Coast Guard seizes 526 kg of illicit substance worth Rs 3000 crore in the Arabian Sea, 5 held.
(Source: Indian Coast Guard/@IndiaCoastGuard)
(Full video available on PTI Videos – https://t.co/d8jp61yd2p) pic.twitter.com/3elnu866Y2
— Press Trust of India (@PTI_News) September 30, 2026
ಗುಜರಾತ್ ಎಟಿಎಸ್-ಕೋಸ್ಟ್ ಗಾರ್ಡ್ ಸತತ ಕಾರ್ಯಾಚರಣೆಗಳು: ಕಳೆದ ಕೆಲ ವರ್ಷಗಳಿಂದ ಗುಜರಾತ್ ಕರಾವಳಿ ಮತ್ತು ಅರಬ್ಬಿ ಸಮುದ್ರವು ಮಾದಕ ವಸ್ತು ತಡೆ ಕಾರ್ಯಾಚರಣೆಗಳ ಕೇಂದ್ರಬಿಂದುವಾಗಿದೆ. 2025ರ ಏಪ್ರಿಲ್ ತಿಂಗಳಲ್ಲೂ ಇದೇ ರೀತಿಯ ಜಂಟಿ ಕಾರ್ಯಾಚರಣೆಯಲ್ಲಿ ಗುಜರಾತ್ ಕರಾವಳಿಯಲ್ಲಿ ಸುಮಾರು 307.5 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು.
ನಶಾ ಮುಕ್ತ ಭಾರತ ಮತ್ತು ಆರ್ಥಿಕ ನಷ್ಟ: ಈ ಬೃಹತ್ ಜಪ್ತಿಯು ವಿದೇಶಿ ಡ್ರಗ್ ಸಿಂಡಿಕೇಟ್‌ಗಳ ಹಣಕಾಸು ಮೂಲಕ್ಕೆ ಭಾರಿ ಹೊಡೆತ ನೀಡಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ. ದೇಶದ ತೀರಕ್ಕೆ ತಲುಪುವ ಮೊದಲೇ ವಿಷಕಾರಿ ಸಂಶ್ಲೇಷಿತ ಮಾದಕ ವಸ್ತುಗಳನ್ನು ತಡೆಯುವ ಮೂಲಕ ಭಾರತದ ಯುವಜನತೆಯನ್ನು ಮಾದಕ ವ್ಯಸನದಿಂದ ರಕ್ಷಿಸುವ ಕೇಂದ್ರ ಸರ್ಕಾರದ ನಶಾ ಮುಕ್ತ ಭಾರತ ಅಭಿಯಾನಕ್ಕೆ ಇದು ದೊಡ್ಡ ಬಲ ತುಂಬಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:33 am, Wed, 30 September 26




