ಆಕ್ಸಿಜನ್ ಕೊರತೆ ನೀಗಿಸಲು ಸರ್ಕಾರದೊಟ್ಟಿಗೆ ನಿಂತ ಮೇಘಾ ಇಂಜಿನಿಯರಿಂಗ್​ ಕಂಪನಿ; ಥೈಲ್ಯಾಂಡ್​ನಿಂದ 11 ಕ್ರಯೋಜನಿಕ್​ ಆಕ್ಸಿಜನ್​ ಟ್ಯಾಂಕರ್ ಆಮದು

|

Updated on: May 22, 2021 | 5:09 PM

ಎಂಇಐಎಲ್​ ಕಂಪನಿಯು ಮೇ 9ರಿಂದ 21ರವರೆಗೆ ಸುಮಾರು 29,694 ಮೆಟ್ರಿಕ್​ ಟನ್​ ಅಂದರೆ 3 ಕೋಟಿ ಲೀಟರ್​ಗಳಷ್ಟು ದ್ರವರೂಪದ ವೈದ್ಯಕೀಯ ಆಕ್ಸಿಜನ್​ನ್ನು ಪೂರೈಸಿದೆ.

ಆಕ್ಸಿಜನ್ ಕೊರತೆ ನೀಗಿಸಲು ಸರ್ಕಾರದೊಟ್ಟಿಗೆ ನಿಂತ ಮೇಘಾ ಇಂಜಿನಿಯರಿಂಗ್​ ಕಂಪನಿ; ಥೈಲ್ಯಾಂಡ್​ನಿಂದ 11 ಕ್ರಯೋಜನಿಕ್​ ಆಕ್ಸಿಜನ್​ ಟ್ಯಾಂಕರ್ ಆಮದು
ಆರ್ಮಿಯ ವಿಶೇಷ ವಿಮಾನದಲ್ಲಿ ಆಕ್ಸಿಜನ್ ಟ್ಯಾಂಕರ್​​ಗಳ ಆಮದು
Follow us on

ಹೈದರಾಬಾದ್​: ದೇಶದಲ್ಲಿ ಕೊರೊನಾ ಸೋಂಕಿನ ಉಲ್ಬಣತೆಯ ಬೆನ್ನಲ್ಲೇ ಹೆಚ್ಚುತ್ತಿರುವ ಆಕ್ಸಿಜನ್ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ, ದೇಶದ ಸಂಘ-ಸಂಸ್ಥೆಗಳು ತಮ್ಮ ಕೈಲಾದ ಪ್ರಯತ್ನ ಮಾಡುತ್ತಿವೆ. ಈಗಾಗಲೇ ಹಲವು ದೇಶಗಳು ಆಕ್ಸಿಜನ್​ ಸಾಂದ್ರಕಗಳನ್ನು ಭಾರತಕ್ಕೆ ಕಳಿಸುವ ಮೂಲಕ ತಮ್ಮ ಸಹಾಯ ಹಸ್ತ ಚಾಚಿವೆ. ಹಾಗೇ ಇದೀಗ ಹೈದರಾಬಾದ್​​ನ ಮೇಘಾ ಇಂಜಿನಿಯರಿಂಗ್​ ಆ್ಯಂಡ್ ಇನ್​​ಫ್ರಾಸ್ಟ್ರಕ್ಚರ್​ ಲಿಮಿಟೆಡ್​(MEIL) ಕಂಪನಿ ಥೈಲ್ಯಾಂಡ್​ನಿಂದ 11 ಕ್ರಯೋಜನಿಕ್​ ಆಕ್ಸಿಜನ್​ ಟ್ಯಾಂಕರ್​ಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಆಕ್ಸಿಜನ್​ನ್ನು ಕಂಪನಿಯು ಸರ್ಕಾರಕ್ಕೆ ಉಚಿತವಾಗಿ ನೀಡಲಿದ್ದು, ಆಸ್ಪತ್ರೆಗಳಿಗೆ ಕೂಡ ಉಚಿತವಾಗಿಯೇ ವಿತರಣೆ ಆಗಲಿದೆ.

ಮೊದಲ ಹಂತದಲ್ಲಿ ಥೈಲ್ಯಾಂಡ್​ನಿಂದ ಒಟ್ಟು 3 ಆಕ್ಸಿಜನ್​ ಟ್ಯಾಂಕರ್​ಗಳನ್ನು ವಿಶೇಷ ಸೇನಾ ಏರ್​​ಕ್ರಾಫ್ಟ್ ಮೂಲಕ ತರಲಾಗಿದ್ದು, ಇಂದು ಹೈದರಾಬಾದ್​ನ ಬೇಗಂಪೇಟ್​ ಏರ್​ಪೋರ್ಸ್​ ಸ್ಟೇಶನ್​​ನಲ್ಲಿ ಬಂದಿಳಿದಿದೆ. ಉಳಿದ 8 ಆಕ್ಸಿಜನ್ ಟ್ಯಾಂಕರ್​ಗಳು ಕೂಡ ಕೆಲವೇ ದಿನಗಳಲ್ಲಿ ಭಾರತ ತಲುಪಲಿವೆ. ಪ್ರತಿ ಕ್ರಯೋಜನಿಕ್​ ಟ್ಯಾಂಕ್​​ 1.40 ಕೋಟಿ ಲೀಟರ್​ ಸಾಮರ್ಥ್ಯದ್ದಾಗಿದ್ದು, 11 ಟ್ಯಾಂಕ್​​ನಿಂದ 15.40 ಕೋಟಿ ಲೀಟರ್​ ವೈದ್ಯಕೀಯ ಆಮ್ಲಜನಕ ಭಾರತಕ್ಕೆ ಬರಲಿದೆ ಎಂದು ಮೇಘಾ ಇಂಜಿನಿಯರಿಂಗ್​​ ಆ್ಯಂಡ್ ಇನ್​​ಫ್ರಾಸ್ಟ್ರಕ್ಚರ್​ ಲಿಮಿಟೆಡ್ ತಿಳಿಸಿದೆ.

ಇನ್ನು ಎಂಇಐಎಲ್​ (ಮೇಘಾ ಇಂಜಿನಿಯರಿಂಗ್​ ​ಆ್ಯಂಡ್ ಇನ್​​ಫ್ರಾಸ್ಟ್ರಕ್ಚರ್​ ಲಿಮಿಟೆಡ್)ನ ಉನ್ನತ ಆಡಳಿತ ಮಂಡಳಿಯೊಟ್ಟಿಗೆ, ತೆಲಂಗಾಣ ಹಣಕಾಸು ಸಚಿವ ಟಿ. ಹರೀಶ್ ರಾವ್​ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೇಶ್​ ಕುಮಾರ್ ನೇತೃತ್ವದಲ್ಲಿ ರಚಿಸಲಾದ ಹಿರಿಯ ಅಧಿಕಾರಿಗಳ ಸಲಹಾ ಸಮಿತಿಯು ಈ ಆಕ್ಸಿಜನ್​ ಆಮದಿಗೆ ಸಂಬಂಧಪಟ್ಟ ಕಾರ್ಯಾಚರಣೆಯ ಮೇಲುಸ್ತುವಾರಿ ವಹಿಸಿಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂಇಐಎಲ್​ ಉಪಾಧ್ಯಕ್ಷ ಪಿ.ರಾಜೇಶ್​ ರೆಡ್ಡಿ, ದ್ರವರೂಪದ ವೈದ್ಯಕೀಯ ಆಕ್ಸಿಜನ್​ ಸಾಗಣೆಗೆ ಹಲವು ಅಡಚಣೆಗಳಿವೆ. ಆದರೆ ದೇಶದಲ್ಲಿನ ಆಕ್ಸಿಜನ್ ಕೊರತೆ ನೀಗಿಸಲು ನಮ್ಮ ಸಂಸ್ಥೆ ಸದಾ ಸಿದ್ಧವಿದ್ದು, ಇದೀಗ ಆಮದು ಮಾಡಿಕೊಳ್ಳುತ್ತಿರುವ 11 ಕ್ರಯೋಜನಿಕ್​​ ಟ್ಯಾಂಕ್​​ಗಳಿಂದ ಖಂಡಿತ ಸಹಾಯವಾಗಲಿದೆ. ಆಮ್ಲಜನಕ ಅಗತ್ಯ ಇರುವ ಆಸ್ಪತ್ರೆಗಳಿಗೆ ಸರ್ಕಾರ ಇದನ್ನು ವಿತರಿಸಬಹುದು ಎಂದು ಹೇಳಿದ್ದಾರೆ.

ಎಂಇಐಎಲ್​ ಕಂಪನಿಯು ಮೇ 9ರಿಂದ 21ರವರೆಗೆ ಸುಮಾರು 29,694 ಮೆಟ್ರಿಕ್​ ಟನ್​ ಅಂದರೆ 3 ಕೋಟಿ ಲೀಟರ್​ಗಳಷ್ಟು ದ್ರವರೂಪದ ವೈದ್ಯಕೀಯ ಆಕ್ಸಿಜನ್​ನ್ನು ಪೂರೈಸಿದೆ. ಹೈದರಾಬಾದ್​ನ ಬೊಲಾರಮ್​​ನಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಹೊಂದಿರುವ ಈ ಕಂಪನಿ ತೆಲಂಗಾಣ ಮಾತ್ರವಲ್ಲದೆ, ಆಂಧ್ರಪ್ರದೇಶ, ಒಡಿಶಾದ ಆಸ್ಪತ್ರೆಗಳಿಗೂ ವೈದ್ಯಕೀಯ ಆಮ್ಲಜನಕ ಪೂರೈಕೆ ಮಾಡುತ್ತಿದೆ.

ಇದನ್ನೂ ಓದಿ: ಕೊರೊನಾ ಮಾರ್ಗಸೂಚಿ ಗಾಳಿಗೆ ತೂರಿ ವಿಜಯೇಂದ್ರ ಪೂಜೆ: ನಂಜನಗೂಡಿನಲ್ಲಿ ಸಚಿವ ಸೋಮಶೇಖರ್ ಗೌಪ್ಯ ಸಭೆ

CBSE Exams: ಪರೀಕ್ಷೆ ಬೇಕೇ, ಬೇಡವೇ? ವಿದ್ಯಾರ್ಥಿಗಳ ಬಳಿ ಸಲಹೆ ಕೇಳಿದ ಕೇಂದ್ರ ಸರ್ಕಾರ

Published On - 5:04 pm, Sat, 22 May 21