ಕೋಲ್ಕತ್ತಾ: ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಕಾರಿನ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದಲ್ಲಿನ ಕಾನೂನು ವ್ಯವಸ್ಥೆಯ ಬಗ್ಗೆ ಚರ್ಚಿಸಲು ಗೃಹ ವ್ಯವಹಾರಗಳ ಸಚಿವಾಲಯ ಪಶ್ಚಿಮ ಬಂಗಾಳದ ಪ್ರಧಾನ ಕಾರ್ಯದರ್ಶಿ ಮತ್ತು ಪೊಲೀಸ್ ಮುಖ್ಯಸ್ಥರಿಗೆ ಸಮನ್ಸ್ ಕಳಿಸಿದೆ.
ರಾಜ್ಯದಲ್ಲಿನ ಕಾನೂನು ವ್ಯವಸ್ಥೆ ಬಗ್ಗೆ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನ್ಕರ್ ಶುಕ್ರವಾರ ಬೆಳಗ್ಗೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ ವರದಿ ಆಧಾರದ ಮೇಲೆ ಈ ಸಮನ್ಸ್ ಕಳುಹಿಸಲಾಗಿದೆ. ಈ ಬಗ್ಗೆ ಚರ್ಚಿಸಲು ಸೋಮವಾರ ದೆಹಲಿಯ ನಾರ್ತ್ ಬ್ಲಾಕ್ಗೆ ಬರುವಂತೆ ರಾಜ್ಯದ ಪ್ರಧಾನ ಕಾರ್ಯದರ್ಶಿ ಮತ್ತು ಡಿಜಿಪಿಗೆ ಹೇಳಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.
ಜೆ.ಪಿ.ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ನಡೆದ ದಾಳಿಯ ಬಗ್ಗೆ ರಾಜ್ಯಪಾಲ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಿದ್ದರು. ನಡ್ಡಾ ಭೇಟಿ ವೇಳೆ ಯಾವ ರೀತಿ ಭಧ್ರತೆ ಒದಗಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಮತ್ತು ಡಿಜಿಪಿ ಅವರಿಗೆ ಹೇಳಿದ್ದರೂ ನಡ್ಡಾ ಕಾರಿನ ಮೇಲೆ ದಾಳಿ ನಡೆದಿದೆ. ಇದು ರಾಜ್ಯದಲ್ಲಿನ ಕಾನೂನು ವ್ಯವಸ್ಥೆಯ ಕರಾಳ ಮುಖವನ್ನು ತೋರಿಸುತ್ತದೆ. ಈ ವಿಚಾರಗಳನ್ನು ಚರ್ಚಿಸುವುದಕ್ಕಾಗಿ ಡಿಜಿಪಿ ಮತ್ತು ಪ್ರಧಾನ ಕಾರ್ಯದರ್ಶಿಗೆ ಸಮನ್ಸ್ ನೀಡಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ನಡೆದ ದಾಳಿ ಬಗ್ಗೆ ವರದಿ ನೀಡುವಂತೆ ಗುರುವಾರ ಗೃಹಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ ಅವರ ಪತ್ರಕ್ಕೆ ಉತ್ತರಿಸದ ಕಾರಣ ಸಮನ್ಸ್ ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.
ಮಮತಾ ವಿರುದ್ಧ ಕಿಡಿಕಾರಿದ ರಾಜ್ಯಪಾಲ
ನಡ್ಡಾ ಅವರ ಬೆಂಗಾವಲು ವಾಹನದ ಮೇಲೆ ನಡೆದ ದಾಳಿ ಪ್ರಜಾಪ್ರಭುತ್ವದ ಮೇಲಿನ ಕಳಂಕ ಎಂದು ಪಶ್ಚಿಮ ಬಂಗಾಳದ ಗವರ್ನರ್ ಹೇಳಿದ್ದಾರೆ. ರಾಜ್ಯದಲ್ಲಿನ ಕಾನೂನು ವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂವಿಧಾನವನ್ನು ಅನುಸರಿಸಬೇಕು. ಅದರಿಂದ ಆಕೆ ದೂರ ಹೋಗಬಾರದು. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಡುತ್ತಿದೆ. ನಿನ್ನೆ ನಡೆದ ಘಟನೆ ದುರದೃಷ್ಟಕರ ಎಂದಿದ್ದಾರೆ. ನಡ್ಡಾ ಅವರ ಭೇಟಿ ಬಗ್ಗೆ ಮಮತಾ ಮಾತನಾಡಿದ ವಿಡಿಯೊವನ್ನು ಶೇರ್ ಮಾಡಿದ ಗವರ್ನರ್, ಮುಖ್ಯಮಂತ್ರಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
I urge Chief Minister @MamataOfficial to engage in deep reflection and apologetically withdraw this video comment that outrages essence and sublimity of Bengal’s rich culture. pic.twitter.com/HL8dcyBqaa
— Governor West Bengal Jagdeep Dhankhar (@jdhankhar1) December 10, 2020
ವಿಡಿಯೊದಲ್ಲಿ ಏನಿದೆ?
ನಡ್ಡಾ ಅವರನ್ನು ಲೇವಡಿ ಮಾಡಿದ ಮಮತಾ, ಪ್ರತಿದಿನ ಕೆಲವು ಚಡ್ಡಾ, ಗಡ್ಡಾ, ಫಡ್ಡಾ, ಬಡ್ಡಾ, ಭಡ್ಡಾ ಎಲ್ಲರೂ ಜತೆಯಾಗಿ ಬರುತ್ತಿದ್ದಾರೆ. ಅವರಂತೆ ಯಾರಿಗೂ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಿಲ್ಲ. ಎಲ್ಲಿಯಾದರೂ ಅವರ ಕಾರ್ಯಕ್ರಮಕ್ಕೆ ಜನ ಸೇರದೇ ಇದ್ದರೆ ಅಲ್ಲಿ ಒಂದು ನಾಟಕ ಮಾಡಿ ಸುದ್ದಿಯಾಗುತ್ತಾರೆ. ಆಮೇಲೆ ನಮ್ಮ ಮೇಲೆ ಆರೋಪ ಹೊರಿಸುತ್ತಾರೆ ಎಂದು ಹೇಳಿದ್ದರು.
ನಡ್ಡಾ ಕಾರಿನ ಮೇಲೆ ಕಲ್ಲು ತೂರಾಟಕ್ಕೆ ಬಿಜೆಪಿ ಆಕ್ರೋಶ: ಬಂಗಾಳಕ್ಕೆ ಅಮಿತ್ ಶಾ ಭೇಟಿ ಸಾಧ್ಯತೆ
ನಡ್ಡಾ ಕಾರಿನ ಮೇಲೆ ದಾಳಿ; ವರದಿ ನೀಡಲು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೇಂದ್ರದ ಸೂಚನೆ
Published On - 3:08 pm, Fri, 11 December 20