
ಪುರಿ, ಜುಲೈ 19: ಒಡಿಶಾದಲ್ಲಿ (Odisha) ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಕೆಲವು ದಿನಗಳ ಹಿಂದಷ್ಟೇ ಪ್ರಾಧ್ಯಾಪಕರ ಲೈಂಗಿಕ ಕಿರುಕುಳ ತಾಳಲಾರದೆ ಕಾಲೇಜು ವಿದ್ಯಾರ್ಥಿನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೀಗ 15 ವರ್ಷದ ಬಾಲಕಿಯ ಮೇಲೆ ಪೆಟ್ರೋಲ್ ಸುರಿದು ಮೂವರು ಆಕೆಗೆ ಬೆಂಕಿ ಹಚ್ಚಿದ್ದಾರೆ. ಶೇ. 70ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿರುವ ಆ ಅಪ್ರಾಪ್ತ ಬಾಲಕಿ ಭುವನೇಶ್ವರದ ಏಮ್ಸ್‌ಗೆ ದಾಖಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ಆ ಬಾಲಕಿ ತನ್ನ ಸ್ನೇಹಿತನ ಮನೆಗೆ ಹೋಗುತ್ತಿದ್ದಾಗ ಬಯಾಬರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೂವರು ದುಷ್ಕರ್ಮಿಗಳು ಆಕೆಯನ್ನು ಅಡ್ಡಗಟ್ಟಿ, ಭಾರ್ಗವಿ ನದಿಯ ದಡಕ್ಕೆ ಕರೆದೊಯ್ದು ಬೆಂಕಿ ಹಚ್ಚಿದ್ದಾರೆ.
ಬಲಂಗಾ ಪೊಲೀಸ್ ಠಾಣೆಯಿಂದ ಕೇವಲ 1.5 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ನಂತರ ಮೂವರು ಪರಾರಿಯಾಗಿದ್ದಾರೆ. ಪೊಲೀಸರು ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಬಾಲಕಿಯ ಬೆನ್ನು, ಹೊಟ್ಟೆ ಮತ್ತು ಇತರ ಭಾಗಗಳಿಗೆ ಸುಟ್ಟ ಗಾಯಗಳಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಒಡಿಶಾ: ಸಂಬಂಧಿಯಿಂದಲೇ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ
ಆ ಬಾಲಕಿಯನ್ನು ಅಪಹರಿಸಿ, ನದಿಯ ಬಳಿ ಕಟ್ಟಿಹಾಕಿ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆ ಅವರ ಮನೆಯಿಂದ ಕೇವಲ 500 ಮೀಟರ್ ದೂರದಲ್ಲಿ ನಡೆದಿದೆ ಎನ್ನಲಾಗಿದೆ.
“ನನ್ನ ತಂಗಿ ತನ್ನ ಗೆಳತಿಯ ಮನೆಗೆ ಕೆಲವು ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತಿದ್ದಳು. ದಾರಿಯಲ್ಲಿ ಮೂವರು ವ್ಯಕ್ತಿಗಳು ಅವಳನ್ನು ಅಪಹರಿಸಿದರು. ಅವರು ಅವಳನ್ನು ನದಿಯ ಬಳಿ ಕಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ಅವಳ ಮೇಲೆ ಏಕೆ ದಾಳಿ ಮಾಡಲಾಗಿದೆ ಎಂದು ನಮಗೆ ತಿಳಿದಿಲ್ಲ. ನಾವು ಪೊಲೀಸರಿಗೆ ದೂರು ನೀಡಿದ್ದೇವೆ” ಎಂದು ಬಾಲಕಿಯ ಅಣ್ಣ ಹೇಳಿದ್ದಾರೆ.
ಇದನ್ನೂ ಓದಿ: ಒಡಿಶಾ: ಲೈಂಗಿಕ ಕಿರುಕುಳ ತಾಳಲಾರದೆ ಬೆಂಕಿ ಹಚ್ಚಿಕೊಂಡಿದ್ದ ವಿದ್ಯಾರ್ಥಿನಿ ಸಾವು
ಒಡಿಶಾದ ಉಪಮುಖ್ಯಮಂತ್ರಿ ಪ್ರವತಿ ಪರಿದಾ ಅವರು ಪೊಲೀಸರಿಗೆ ಅಪರಾಧಿಗಳನ್ನು ತಕ್ಷಣ ಬಂಧಿಸಲು ಸೂಚಿಸಿದ್ದಾರೆ. “ಬಲಂಗೀರ್ ಪ್ರದೇಶದಲ್ಲಿ ಕೆಲವು ದುಷ್ಕರ್ಮಿಗಳು ರಸ್ತೆಯಲ್ಲಿ ಹದಿನೈದು ವರ್ಷದ ಬಾಲಕಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಸುದ್ದಿ ಕೇಳಿ ನನಗೆ ತುಂಬಾ ನೋವಾಗಿದೆ ಮತ್ತು ಆಘಾತವಾಗಿದೆ. ಅವಳ ಚಿಕಿತ್ಸೆಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಸರ್ಕಾರವು ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಭರಿಸುತ್ತದೆ” ಎಂದು ಡಿಸಿಎಂ ಪ್ರವತಿ ಪರಿದಾ ಹೇಳಿದ್ದಾರೆ.
ಬಿಜೆಪಿ ವಿರುದ್ಧ ನವೀನ್ ಪಟ್ನಾಯಕ್ ವಾಗ್ದಾಳಿ:
ಆಡಳಿತರೂಢ ಬಿಜೆಪಿ ಸರ್ಕಾರವನ್ನು ಟೀಕಿಸಿದ ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್, “ಮಹಿಳೆಯರ ವಿರುದ್ಧದ ಇಂತಹ ಘಟನೆಗಳು ರಾಜ್ಯಾದ್ಯಂತ ದಿನನಿತ್ಯ ನಡೆಯುತ್ತಿವೆ. ಪ್ರಸ್ತುತ ಸರ್ಕಾರದ ಅಡಿಯಲ್ಲಿ ಅಪರಾಧಿಗಳ ಧೈರ್ಯ ಹೆಚ್ಚಾಗಿದೆ. ಅವರು ಶಿಕ್ಷೆಯ ಬಗ್ಗೆ ಚಿಂತಿಸುತ್ತಿಲ್ಲ ಎಂದು ಇದು ತೋರಿಸುತ್ತಿದೆ” ಎಂದು ನವೀನ್ ಪಟ್ನಾಯಕ್ ಟ್ವೀಟ್ ಮಾಡಿದ್ದಾರೆ.
ಇನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ