ನವದೆಹಲಿ, ಆಗಸ್ಟ್ 11: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಅವರು ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗಾಗಿ, ಕ್ಷುಲ್ಲಕ ರಾಜಕಾರಣದ ಮೂಲಕ ಭಾರತದ ಆತ್ಮವನ್ನು ದುರ್ಬಲಗೊಳಿಸುವಂಥ ಹೇಳಿಕೆ ನೀಡಿದ್ದಾರೆ. ದೇಶಕ್ಕೆ ದ್ರೋಹ ಬಗೆದಿದ್ದಾರೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಟೀಕಿಸಿದ್ದಾರೆ. ಲೋಕಸಭೆಯಲ್ಲಿ ಅಪರಾಧ ಕಾನೂನು ತಿದ್ದುಪಡಿ ಮಸೂದೆ ಮಂಡನೆ ವಿಚಾರವಾಗಿ ಟ್ವೀಟ್ ಮಾಡಿದ್ದ ಎಂಕೆ ಸ್ಟಾಲಿನ್ ಹಿಂದಿ ಹೇರಿಕೆ ವಿಚಾರ ಪ್ರಸ್ತಾಪಿಸಿದ್ದಲ್ಲದೆ, ಕೇಂದ್ರದ ನಡೆಯನ್ನು ವಿರೋಧಿಸುವುದಾಗಿ ಟ್ವೀಟ್ ಮಾಡಿದ್ದರು. ಇದಕ್ಕೆ ಧರ್ಮೇಂದ್ರ ಪ್ರಧಾನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಂತಹ ಕ್ಷುಲ್ಲಕ ರಾಜಕೀಯವು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ಸರಿ ಹೊಂದಬಹುದು. ಆದರೆ ಇದು ಭಾರತದ ಆತ್ಮವನ್ನು ದುರ್ಬಲಗೊಳಿಸುತ್ತದೆ. ವಿಪರ್ಯಾಸವೆಂದರೆ, ತಮಿಳುನಾಡಿನ ಹೆಮ್ಮೆಯ ಪಾಲಕರು ಎಂದು ಹೇಳಿಕೊಳ್ಳುವವರೇ ನಮ್ಮ ಹೊಸ ಸಂಸತ್ತಿನ ಉದ್ಘಾಟನಾ ಸಮಾರಂಭದಲ್ಲಿ ತಮಿಳುನಾಡಿನ ಹೆಮ್ಮೆಯನ್ನು ಹಾಗೂ ಪವಿತ್ರವಾದ ‘ಸೆಂಗೊಲ್’ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಬಹಿಷ್ಕರಿಸಿದರು. ಭಾರತವು ನಾಗರಿಕತೆಯ ನಿರಂತರತೆಯಾಗಿದೆ ಮತ್ತು ನಮ್ಮ ಭಾಷಾ ವೈವಿಧ್ಯತೆಯು ಈ ನಿರಂತರತೆಯ ಕೇಂದ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯು ತಮಿಳು ಸೇರಿದಂತೆ ಭಾರತದ ಭಾಷಾ ವೈವಿಧ್ಯತೆಯನ್ನು ಉತ್ತೇಜಿಸುವ ಮತ್ತು ಸಂರಕ್ಷಿಸುವ ಬಗ್ಗೆ ಯಾವಾಗಲೂ ಧ್ವನಿಯೆತ್ತಿದೆ. ‘ಕಾಶಿ ತಮಿಳು ಸಂಗಮಂ’ ಯೋಜನೆ ಅದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಭಾರತದ ಸಾಂಸ್ಕೃತಿಕ ನಿರಂತರತೆ ಮತ್ತು ಸಾಹಿತ್ಯಿಕ ಹೆಮ್ಮೆಯು ಕೆಲವೇ ರಾಜವಂಶಗಳಿಗೆ ಸಂಬಧಪಟ್ಟದ್ದು ಎಂಬ ತಪ್ಪಾದ ಆಲೋಚನೆಯನ್ನು ಬಿತ್ತುವವರ ಬಗ್ಗೆ ನೋವಾಗುತ್ತಿದೆ ಎಂದು ಪ್ರಧಾನ್ ಟ್ವೀಟ್ ಮಾಡಿದ್ದಾರೆ.
Such petty politics may serve Hon. Tamil Nadu CM @mkstalin’s political ambitions well, but it weakens the spirit of India.
Well but, irony is that those who claim to be custodians of Tamil pride are the ones who boycotted Tamil Nadu’s pride—the sacred ‘Sengol’ at the… https://t.co/iIZ8K1goPQ
— Dharmendra Pradhan (@dpradhanbjp) August 11, 2023
ಅವಸಾಹತೀಕರಣದ ಹೆಸರಿನಲ್ಲಿ ಮರುವಸಾಹತೀಕರಣ ಎಂದು ಟ್ವೀಟ್ ಮಾಡಿದ್ದ ಸ್ಟಾಲಿನ್, ಕೇಂದ್ರದ ಕ್ರಮವನ್ನು ವಿರೋಧಿಸಿದ್ದಾರೆ. ಅಪರಾಧ ಕಾನೂನು ತಿದ್ದುಪಡಿ ಮಸೂದೆ ಮೂಲಕ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಮಸೂದೆ ಎಂದು ತಿದ್ದುಪಡಿ ಮಾಡುವ ಮೂಲಕ ಭಾರತದ ವೈವಿಧ್ಯತೆಯ ಸಾರವನ್ನು ಹಾಳುಮಾಡಲು ಕೇಂದ್ರ ಬಿಜೆಪಿ ಸರ್ಕಾರದ ದಿಟ್ಟ ಪ್ರಯತ್ನವು ಭಾಷಾ ಸಾಮ್ರಾಜ್ಯಶಾಹಿಯನ್ನು ಪ್ರಚೋದಿಸುತ್ತದೆ. ಇದು ಭಾರತದ ಏಕತೆಯ ತಳಹದಿಯನ್ನೇ ಅವಮಾನಿಸುವಂತಿದೆ. ಬಿಜೆಪಿ ಮತ್ತು ಪ್ರಧಾನಿ ಮೋದಿಯವರಿಗೆ ಇನ್ಮುಂದೆ ತಮಿಳು ಎಂಬ ಪದವನ್ನು ಉಚ್ಚರಿಸುವ ನೈತಿಕ ಹಕ್ಕಿಲ್ಲ. ಇತಿಹಾಸದ ಮೂಸೆಯಲ್ಲಿ, ತಮಿಳುನಾಡು ಮತ್ತು ಡಿಎಂಕೆ ಇಂತಹ ದಬ್ಬಾಳಿಕೆಯ ಮೇಲ್ಪದರಗಳ ವಿರುದ್ಧದ ಹೋರಾಟಗಳಲ್ಲಿ ಮುಂಚೂಣಿಯಲ್ಲಿವೆ. ಹಿಂದಿ ವಿರೋಧಿ ಆಂದೋಲನದಿಂದ ನಮ್ಮ ಭಾಷಾ ಅಸ್ಮಿತೆಯನ್ನು ಕಾಪಾಡುವವರೆಗೆ, ನಾವು ಹಿಂದಿ ಹೇರಿಕೆಯ ವಿರುದ್ಧ ಮೊದಲು ಹೋರಾಡಿದ್ದೇವೆ. ನಾವು ಅಚಲ ಸಂಕಲ್ಪದಿಂದ ಅದನ್ನು ಮತ್ತೊಮ್ಮೆ ಮಾಡುತ್ತೇವೆ ಎಂದು ಸ್ಟಾಲಿನ್ ಟ್ವೀಟ್ ಮಾಡಿದ್ದರು.
ಹಿಂದಿ ವಸಾಹತುಶಾಹಿ ವಿರುದ್ಧ ಪ್ರತಿರೋಧದ ಬೆಂಕಿ ಮತ್ತೊಮ್ಮೆ ಉರಿಯುತ್ತಿದೆ. ಹಿಂದಿಯೊಂದಿಗೆ ನಮ್ಮ ಗುರುತನ್ನು ಬದಲಿಸುವ ಬಿಜೆಪಿಯ ದಿಟ್ಟ ಪ್ರಯತ್ನವನ್ನು ದೃಢವಾಗಿ ವಿರೋಧಿಸಲಾಗುವುದು ಎಂದು ಅವರು ಉಲ್ಲೇಖಿಸಿದ್ದರು.
ಇದನ್ನೂ ಓದಿ: ಗುಂಪು ಹತ್ಯೆಗೆ ಮರಣದಂಡನೆ: ಲೋಕಸಭೆಯಲ್ಲಿ ಅಪರಾಧ ಕಾನೂನು ತಿದ್ದುಪಡಿ ಮಸೂದೆ ಮಂಡಿಸಿದ ಅಮಿತ್ ಶಾ
ಬ್ರಿಟೀಷ್ ವಸಾಹತುಶಾಹಿ ಕಾಲದಲ್ಲಿದ್ದ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್-ಕಾನೂನುಗಳಿಗೆ ಪರ್ಯಾಯವಾಗಿ ಮೂರು ಮಸೂದೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದ ಬೆನ್ನಲ್ಲೇ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ. ಅಮಿತ್ ಶಾ ಮಂಡಿಸಿದ ಮಸೂದೆಯ ಪ್ರಕಾರ, ಭಾರತೀಯ ದಂಡ ಸಂಹಿತೆಯನ್ನು ಭಾರತೀಯ ನ್ಯಾಯ ಸಂಹಿತಾ ಎಂದು ಬದಲಾಯಿಸಲಾಗುತ್ತದೆ. ಭಾರತೀಯ ಕ್ರಿಮಿನಲ್ ಪ್ರೊಸೀಜರ್ ಕೋಡ್ನ್ನು ನಾಗರೀಕ ಸುರಕ್ಷಾ ಸಂಹಿತಾ ಎಂದು ಬದಲಿಸಲಾಗುತ್ತಿದ್ದು, ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಅನ್ನು ಭಾರತೀಯ ಸಾಕ್ಷ್ಯ ಎಂದು ಬದಲಾಯಿಸಲಾಗುತ್ತದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:00 pm, Fri, 11 August 23