
ಹೈದರಾಬಾದ್: ನಾಲ್ವರು ಟಿಆರ್‌ಎಸ್ (TRS) ಶಾಸಕರನ್ನು ಖರೀದಿಸಲು ಸಂಚು ರೂಪಿಸಿದ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಬಿಜೆಪಿಯ ಹಿರಿಯ ನಾಯಕ ಬಿಎಲ್ ಸಂತೋಷ್ (BL Santhosh) ಅವರಿಗೆ ನೀಡಿದ್ದ ನೋಟಿಸ್‌ಗೆ ತೆಲಂಗಾಣ ಹೈಕೋರ್ಟ್ ಇಂದು ತಡೆಯಾಜ್ಞೆ ನೀಡಿದ್ದು ಪ್ರಕರಣದಲ್ಲಿ ಸದ್ಯ ಸಂತೋಷ್ ಅವರನ್ನು ವಿಚಾರಣೆಗೊಳಪಡಿಸಲಾಗುವುದಿಲ್ಲ. ತೆಲಂಗಾಣ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸಂತೋಷ್‌ಗೆ ಎಸ್‌ಐಟಿ ಎರಡನೇ ನೋಟಿಸ್ ನೀಡಿದ ನಂತರ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಅವರು ಇನ್ನೂ ತನಿಖಾ ತಂಡದ ಮುಂದೆ ಹಾಜರಾಗಬೇಕಿದೆ.ಇತ್ತೀಚಿನ ನೋಟಿಸ್‌ನಲ್ಲಿ ನವೆಂಬರ್ 26 ಅಥವಾ ನವೆಂಬರ್ 28 ರಂದು ವಿಚಾರಣೆಗಾಗಿ ಎಸ್‌ಐಟಿ ಮುಂದೆ ಹಾಜರಾಗುವಂತೆ ಸಂತೋಷ್ ಅವರಿಗೆ ತಿಳಿಸಲಾಗಿದೆ. ಸಂತೋಷ್ ಅವರು ಗುಜರಾತ್ ಚುನಾವಣೆಗೆ ಸಂಬಂಧಿಸಿದ ಕೆಲಸದಲ್ಲಿ ನಿರತರಾಗಿದ್ದರು. ಹಾಗಾಗಿ ಅವರಿಗೆ ನೊಟೀಸ್ ನೀಡಬೇಕಾದಾಗ ದೆಹಲಿಯಲ್ಲಿ ಅವರು ಲಭ್ಯವಾಗದಿರಲು ಅವರು ಉಲ್ಲೇಖಿಸಿದ ಕಾರಣಗಳಲ್ಲಿ ಇದು ಒಂದು. ದೆಹಲಿ ಪೊಲೀಸರ ಮೂಲಕ ಅವರಿಗೆ ಮೊದಲ ನೋಟೀಸ್ ಜಾರಿ ಮಾಡಬೇಕಿತ್ತು. ನವೆಂಬರ್ 16 ರಂದು ಮೊದಲ ನೋಟೀಸ್ ಸ್ವೀಕರಿಸಲಿಲ್ಲ ಎಂದು ನವೆಂಬರ್ 21 ರಂದು ಸಂತೋಷ್ ಹೇಳಿದ್ದು ಅವರಿಗೆ ಇ-ಮೇಲ್ ಮತ್ತು ವಾಟ್ಸಾಪ್ ಮೂಲಕ ನೋಟಿಸ್ ಕಳುಹಿಸಬಹುದು ಎಂದು ನ್ಯಾಯಾಲಯ ಹೇಳಿತ್ತು. ನವೆಂಬರ್ 26 ಅಥವಾ ನವೆಂಬರ್ 28 ರಂದು ವಿಚಾರಣೆಗಾಗಿ ಎಸ್‌ಐಟಿ ಮುಂದೆ ಹಾಜರಾಗುವಂತೆ ತಿಳಿಸಲಾಯಿತು. ಸೆಕ್ಷನ್ 41 ರ ಅಡಿಯಲ್ಲಿ ನೋಟಿಸ್ ನೀಡಲು ನ್ಯಾಯಾಲಯವು ಸಾಕಷ್ಟು ಆಧಾರವನ್ನು ಕಂಡುಕೊಂಡಿಲ್ಲ ಎಂದು ಬಿಜೆಪಿ ವಕೀಲ ಕರುಣಾ ಸಾಗರ್ ಹೇಳಿದ್ದಾರೆ.
ಎಸ್‌ಐಟಿ ಗುರುವಾರ ಹೈದರಾಬಾದ್‌ನ ವಿಶೇಷ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದ್ದು, ಸಂತೋಷ್ ಮತ್ತು ಕೇರಳದ ಇಬ್ಬರು ವ್ಯಕ್ತಿಗಳಾದ ಜಗ್ಗು ಸ್ವಾಮಿ ಮತ್ತು ತುಷಾರ್ ವೆಲ್ಲಪಲ್ಲಿ, ಬಿ ಶ್ರೀನಿವಾಸ್ ಅವರ ಹೆಸರನ್ನು ಆರೋಪಿಗಳಾಗಿ ಸೇರಿಸಿದೆ.
ಅಕ್ಟೋಬರ್ 26 ರಂದು ಟಿಆರ್‌ಎಸ್ ಶಾಸಕ ಪೈಲಟ್ ರೋಹಿತ್ ರೆಡ್ಡಿ ಸೇರಿದಂತೆ ನಾಲ್ವರು ಶಾಸಕರು ದೂರು ನೀಡಿದ ನಂತರ ರಾಮಚಂದ್ರ ಭಾರತಿ ಅಲಿಯಾಸ್ ಸತೀಶ್ ಶರ್ಮಾ, ನಂದ ಕುಮಾರ್ ಮತ್ತು ಸಿಂಹಯಾಜಿ ಸ್ವಾಮಿ ಎಂಬ ಮೂವರನ್ನು ಈಗಾಗಲೇ ಆರೋಪಿಗಳೆಂದು ಹೆಸರಿಸಲಾಗಿತ್ತು.
ಆರೋಪಿಗಳು ತನಗೆ ₹ 100 ಕೋಟಿ ನೀಡುವುದಾಗಿ ಹೇಳಿದ್ದು ಇದಕ್ಕೆ ಪ್ರತಿಯಾಗಿ ಶಾಸಕರು ಟಿಆರ್‌ಎಸ್ ತೊರೆದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎಂದು ಸಂತೋಷ್ ಹೇಳಿರುವುದಾಗಿ ರೋಹಿತ್ ರೆಡ್ಡಿ ಆರೋಪಿಸಿದ್ದಾರೆ.
ಸೈಬರಾಬಾದ್ ಪೊಲೀಸರು ಮೊದಲು ಸೋರಿಕೆಯಾದ ಆಡಿಯೊ ಟೇಪ್‌ಗಳನ್ನು ಆಧರಿಸಿ ಪ್ರಕರಣವನ್ನು ದಾಖಲಿಸಿದ್ದು ನಂತರ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರು ಹಂಚಿಕೊಂಡ ವೀಡಿಯೊ ತುಣುಕುಗಳನ್ನು ಸಹ ದಾಖಲಿಸಿದ್ದಾರೆ.
ತೆಲಂಗಾಣ ಸರ್ಕಾರ ನವೆಂಬರ್ 9 ರಂದು ಶಾಸಕರ ಖರೀದಿ ಪ್ರಯತ್ನ ಆರೋಪದ ಬಗ್ಗೆ ತನಿಖೆ ನಡೆಸಲು ಏಳು ಸದಸ್ಯರ ಎಸ್‌ಐಟಿಯನ್ನು ಸ್ಥಾಪಿಸಲು ಆದೇಶಿಸಿದೆ. ಪ್ರಕರಣದ ಕುರಿತು ಸಿಬಿಐ ತನಿಖೆಗೆ ಬಿಜೆಪಿ ಆಗ್ರಹಿಸಿತ್ತು. ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ನೇತೃತ್ವದ ಎಸ್‌ಐಟಿ ತನಿಖೆಯನ್ನು ಮುಂದುವರಿಸಬಹುದು ಮತ್ತು ಅದನ್ನು ನ್ಯಾಯಾಧೀಶರು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಹೈಕೋರ್ಟ್ ಹೇಳಿತ್ತು. ನವೆಂಬರ್ 21 ರಂದು ಸುಪ್ರೀಂ ತನ್ನ ಆದೇಶದಲ್ಲಿ ಹೈಕೋರ್ಟ್ ನ್ಯಾಯಾಧೀಶರಿಂದ ಮೇಲ್ವಿಚಾರಣೆ ಮಾಡಲಾಗುವುದಿಲ್ಲ ಎಂದಿದ್ದು,ಸಿಬಿಐ ತನಿಖೆಗೆ ಕೇಳುವ ಮನವಿಯನ್ನು ಸ್ವತಂತ್ರವಾಗಿ ಪರಿಶೀಲಿಸುವಂತೆ ಹೈಕೋರ್ಟ್‌ಗೆ ಕೇಳಿಕೊಂಡಿದೆ.
Published On - 5:57 pm, Fri, 25 November 22