ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶ್​​ಮುಖ್ ನಿವಾಸದಲ್ಲಿ ಇಡಿ ಶೋಧ

| Updated By: ರಶ್ಮಿ ಕಲ್ಲಕಟ್ಟ

Updated on: Jun 25, 2021 | 1:31 PM

Anil Deshmukh: ಸಿಬಿಐ ಸಲ್ಲಿಸಿದ ಎಫ್ಐಆರ್ ಆಧರಿಸಿ ಏಪ್ರಿಲ್ ತಿಂಗಳಲ್ಲಿ ಇಡಿ ಅಕ್ರಮ ಹಣ ವ್ಯವಹಾರದ ಆರೋಪದ ಮೇಲೆ ದೇಶ್​​ಮುಖ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶ್​​ಮುಖ್ ನಿವಾಸದಲ್ಲಿ ಇಡಿ ಶೋಧ
ಅನಿಲ್ ದೇಶ್​ಮುಖ್ ಅವರ ನಿವಾಸದ ಹೊರಗಿನ ದೃಶ್ಯ
Follow us on

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮಾಜಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​​ಮುಖ್ ಅವರ ನಾಗ್ಪುರದಲ್ಲಿರುವ ನಿವಾಸದಲ್ಲಿ ಶುಕ್ರವಾರ ಶೋಧ ಕಾರ್ಯಾಚರಣೆ ನಡೆಸಿದೆ. ಇದಕ್ಕೂ ಮುನ್ನ ಏಪ್ರಿಲ್ 25 ರಂದು ತನಿಖಾ ಸಂಸ್ಥೆ ದೇಶ್​​ಮುಖ್ ಅವರ ಆಪ್ತ ಸಾಗರ್ ಭಟೇವರ್ ಅವರ ನಾಗ್ಪುರ ನಿವಾಸದಲ್ಲಿ ಶೋಧ ನಡೆಸಿತ್ತು. ಸಾಗರ್ ಅವರು ಎನ್‌ಸಿಪಿ ನಾಯಕನ ಒಡೆತನದ ಹಲವಾರು ಸಂಸ್ಥೆಗಳ ನಿರ್ದೇಶಕರಾಗಿದ್ದಾರೆ. ದೇಶ್​​ಮುಖ್ ನೇರವಾಗಿ ಮತ್ತು ಪರೋಕ್ಷವಾಗಿ ನಿಯಂತ್ರಿಸುತ್ತಿರುವ 40 ಕ್ಕೂ ಹೆಚ್ಚು ಕಂಪನಿಗಳ ಖಾತೆಗಳನ್ನು ಸಂಸ್ಥೆ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸಿಬಿಐ ಸಲ್ಲಿಸಿದ ಎಫ್ಐಆರ್ ಆಧರಿಸಿ ಏಪ್ರಿಲ್ ತಿಂಗಳಲ್ಲಿ ಇಡಿ ಅಕ್ರಮ ಹಣ ವ್ಯವಹಾರದ ಆರೋಪದ ಮೇಲೆ ದೇಶ್​​ಮುಖ್ ವಿರುದ್ಧ ಪ್ರಕರಣ ದಾಖಲಾಗಿತ್ತು. ದೇಶ್​​ಮುಖ್ ತಮ್ಮ ಅಧಿಕೃತ ಸ್ಥಾನವನ್ನು ಕೆಲವು ಅನಗತ್ಯ ಲಾಭಗಳನ್ನು ಪಡೆಯಲು ಬಳಸಿಕೊಂಡರು. ಮುಂಬೈ ಪೊಲೀಸರ ವರ್ಗಾವಣೆ ಮತ್ತು ಪೋಸ್ಟಿಂಗ್‌ಗಳ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಮಾಜಿ ಪೊಲೀಸ್ ಕಮಿಷನರ್ ಪರಮ್ ಬಿರ್ ಸಿಂಗ್ ಆರೋಪಿಸಿರುವುದಾಗಿ ಸಿಬಿಐ ಹೇಳಿದೆ.

ಮುಂಬೈನ ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ 100 ಕೋಟಿ ರೂ. ಸಂಗ್ರಹಿಸಲು ಈಗ ಅಮಾನತುಗೊಂಡಿರುವ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ (ಎಪಿಐ) ಸಚಿನ್ ವಾಜೆ ಸೇರಿದಂತೆ ಪೊಲೀಸ್ ಅಧಿಕಾರಿಗಳನ್ನು ಕೇಳಿದ್ದಾರೆ ಎಂಬ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದ್ದು ದೇಶ್​​ಮುಖ್ ಅವರ ಹಣಕಾಸಿನ ವಹಿವಾಟುಗಳನ್ನು ಇಡಿ ಪರಿಶೀಲಿಸುತ್ತಿದೆ.


ತನ್ನ ವಿರುದ್ಧ ಕೇಳಿಬಂದಿರುವಎಲ್ಲಾ ಆರೋಪಗಳನ್ನು ದೇಶ್​​ಮುಖ್ ನಿರಾಕರಿಸಿದ್ದಾರೆ.

ಅಂಬಾನಿ ಬಾಂಬ್ ಬೆದರಿಕೆ ಪ್ರಕರಣ ಮತ್ತು ಉದ್ಯಮಿ ಮನ್ಸುಖ್ ಹಿರನ್ ಹತ್ಯೆಯಲ್ಲಿ ವಾಜೆ ಅವರ ಪಾತ್ರದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ.


ದೇಶ್​​ಮುಖ್ ವಿರುದ್ಧದ ಆರೋಪಗಳನ್ನು ಬೆಂಬಲಿಸುವ ವಾಜೆ ಈ ಹಿಂದೆ ಎನ್ಐಎಗೆ ಪತ್ರವನ್ನು ಸಲ್ಲಿಸಿದ್ದು ಸಾರಿಗೆ ಸಚಿವ ಅನಿಲ್ ಪರಬ್ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಸಹ ಮಾಡಿದ್ದರು. ಮುಂಬೈ ಪೊಲೀಸರಲ್ಲಿ ಪುನಃ ಸೇರ್ಪಡೆಗೊಳ್ಳಲು ದೇಶ್​​ಮುಖ್ 2 ಕೋಟಿ ರೂ ಕೇಳಿದ್ದಾರೆ ಎಂದು ವಾಜೆ ಆರೋಪಿಸಿದ್ದಾರೆ. ಆದಾಗ್ಯೂ, ನ್ಯಾಯಾಲಯವು ಈ ಪತ್ರವನ್ನು ದಾಖಲೆಯಲ್ಲಿ ತೆಗೆದುಕೊಂಡಿಲ್ಲ.

ಇದನ್ನೂ ಓದಿ: ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆ ಪ್ರಕರಣ: ಪೊಲೀಸ್ ಸೇವೆಯಿಂದ ಸಚಿನ್ ವಾಜೆ ವಜಾ

(Money laundering case ED conducted a search operation at the residence of former Maharashtra home minister Anil Deshmukh in Nagpur)

Published On - 1:29 pm, Fri, 25 June 21