ತಿರುವನಂತಪುರಂ: ಭಾರತದಲ್ಲಿ ಈ ಬಾರಿ ಅವಧಿಗೂ ಮೊದಲೇ ಮುಂಗಾರು (Monsoon) ಪ್ರವೇಶವಾಗಲಿದೆ. ಸಾಮಾನ್ಯವಾಗಿ ಭಾರತದಲ್ಲಿ ಜೂನ್ 1ರ ಸುಮಾರಿಗೆ ಮುಂಗಾರು ಕೇರಳಕ್ಕೆ ಆಗಮಿಸುತ್ತದೆ. ಜೂನ್ ಮಧ್ಯದ ವೇಳೆಗೆ ಭಾರತದ ಉಳಿದ ರಾಜ್ಯಗಳಲ್ಲಿ ಆವರಿಸುತ್ತದೆ. ಆದರೆ, ಈ ಬಾರಿ ಮೇ 27ರಂದು ಕೇರಳಕ್ಕೆ ಮುಂಗಾರು (Kerala Rain) ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಈಗಾಗಲೇ ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ಮಹಾರಾಷ್ಟ್ರ ಸೇರಿದಂತೆ ಕೆಲವು ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಆದರೆ, ಮೇ 27ರಂದು ಅಧಿಕೃತವಾಗಿ ಮಾನ್ಸೂನ್ ಶುರುವಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಈಶಾನ್ಯ ಮಾನ್ಸೂನ್ ಕೇರಳದಲ್ಲಿ ಸುಮಾರು 49 ಸೆಂ.ಮೀ ಮಳೆಯನ್ನು ನೀಡುತ್ತದೆ. ಇದರ ಮಧ್ಯೆ, ಕೇರಳದಲ್ಲಿ ಈ ಬಾರಿ ಬೇಸಿಗೆ ಕಾಲದಲ್ಲಿ ಶೇ.69 ಹೆಚ್ಚುವರಿ ಮಳೆ ದಾಖಲಾಗಿದೆ. ಭಾರತದ ಕೃಷಿ ಆಧಾರಿತ ಆರ್ಥಿಕತೆಯ ಜೀವನಾಡಿ ಎಂದು ಪರಿಗಣಿಸಲಾದ ನೈಋತ್ಯ ಮಾನ್ಸೂನ್ ಮೇ 27ರ ವೇಳೆಗೆ ಕೇರಳಕ್ಕೆ ಆಗಮಿಸಲಿದೆ. ಸಾಮಾನ್ಯ ಆರಂಭದ ದಿನಾಂಕಕ್ಕಿಂತ ಮುಂಚಿತವಾಗಿ ಈ ಬಾರಿ ಮೊದಲ ಮಳೆ ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ಪ್ರಕಟಿಸಿದೆ. ಕೇರಳದಲ್ಲಿ ಮಾನ್ಸೂನ್‌ನ ಸಾಮಾನ್ಯ ಆರಂಭದ ದಿನಾಂಕ ಜೂನ್ 1 ಆಗಿದೆ.
ಈ ವರ್ಷ, ಕೇರಳದ ಮೇಲೆ ನೈಋತ್ಯ ಮಾನ್ಸೂನ್ ಪ್ರಾರಂಭವಾಗುವ ಸಾಧ್ಯತೆಯು ಸಾಮಾನ್ಯ ಆರಂಭದ ದಿನಾಂಕಕ್ಕಿಂತ ಮುಂಚೆಯೇ ಇರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ನೈಋತ್ಯ ಮಾನ್ಸೂನ್‌ನ ಆರಂಭಿಕ ಆಗಮನವು ವಾಯುವ್ಯ ಭಾರತದ ಭಾಗಗಳು ಅತ್ಯಂತ ಹೆಚ್ಚಿನ ಗರಿಷ್ಠ ತಾಪಮಾನವನ್ನು ಅನುಭವಿಸುತ್ತಿರುವ ಸಮಯದಲ್ಲಿ ಬರುತ್ತದೆ.
ಮೇ 15ರ ವೇಳೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾನ್ಸೂನ್ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮೇ 15ರಂದು ದೇಶದಲ್ಲಿ ಮೊದಲ ಋತುಮಾನದ ಮಳೆಯನ್ನು ಸ್ವೀಕರಿಸುವ ನಿರೀಕ್ಷೆಯಿದೆ.
“ನೈಋತ್ಯ ಮಾನ್ಸೂನ್ 2022ರ ಮೇ 15ರ ಸುಮಾರಿಗೆ ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಗೆ ಪ್ರವೇಶಿಸುವ ಸಾಧ್ಯತೆಯಿದೆ” ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾರತದ ಉತ್ತರ ರಾಜ್ಯಗಳಲ್ಲಿ ಬಿಸಿ ಗಾಳಿ ಹೆಚ್ಚಾಗಿರುವ ಬೆನ್ನಲ್ಲೇ ನೈಋತ್ಯ ಮಾನ್ಸೂನ್‌ನ ಮುನ್ಸೂಚನೆ ನೀಡಲಾಗಿದೆ. ಮೇ 15 ಮತ್ತು ಮೇ 16 ರಂದು ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ 40-50 ಕಿಮೀಯಿಂದ 60 ಕಿಮೀ ವೇಗದಲ್ಲಿ ಗಾಳಿಯ ವೇಗವನ್ನು ತಲುಪುವ ಸಾಧ್ಯತೆಯಿದೆ. ಕೇರಳ, ಮಾಹೆ ಮತ್ತು ಲಕ್ಷದ್ವೀಪಗಳಲ್ಲಿ ಮುಂದಿನ ಐದು ದಿನಗಳಲ್ಲಿ ಸಾಕಷ್ಟು ವ್ಯಾಪಕವಾದ ಮಳೆಯಾಗುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ