ಬೆಂಗಳೂರು: ಆ್ಯಪ್ ಮುಖಾಂತರ ಸಾಲ ನೀಡಿ, ನಂತರ ಅದನ್ನು ಹಿಂದಿರುಗಿಸದೆ ಇದ್ದರೆ ಭಾರೀ ಕಿರಿಕಿರಿ ಉಂಟು ಮಾಡುವ ಸುಮಾರು 426 ಆ್ಯಪ್ಗಳು ಪ್ಲೇ ಸ್ಟೋರ್ನಲ್ಲಿವೆ ಎನ್ನುವ ಮಾಹಿತಿ ಹೊರ ಬಿದ್ದಿದೆ.
ಆ್ಯಪ್ ಮೂಲಕ ತಕ್ಷಣಕ್ಕೆ ಸಾಲ ನೀಡಿ, ನಂತರ ದುಬಾರಿ ಬಡ್ಡಿ ವಿಧಿಸುತ್ತಿದ್ದ ವಿಚಾರ ತೆಲಂಗಾಣದಲ್ಲಿ ಬೆಳಕಿಗೆ ಬಂದಿತ್ತು. ಅಲ್ಲದೆ, ಈ ಪ್ರಕರಣದಲ್ಲಿ ಕೆಲವರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದರು. ಈ ಸುದ್ದಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿರುವಾಗಲೇ ಮತ್ತಷ್ಟು ಲೋನ್ ಆ್ಯಪ್ಗಳ ಮುಖವಾಡ ಬಯಲಾಗಿದೆ.
ಗೂಗಲ್ ಪ್ಲೇಸ್ಟೋರ್ನಲ್ಲಿ ತಕ್ಷಣಕ್ಕೆ ಸಾಲ ನೀಡುವ ಸುಮಾರು 426 ಆ್ಯಪ್ಗಳಿವೆ. ಇವುಗಳಲ್ಲಿ ಬಹುತೇಕ ಆ್ಯಪ್ಗಳು ಸಾಲ ನೀಡಿ ನಂತರ ಕಿರಿಕಿರಿ ಉಂಟು ಮಾಡುವ ಸಾಲಿನಲ್ಲಿವೆ ಎನ್ನಲಾಗಿದೆ.
ಈ ಬಗ್ಗೆ ಶ್ರೀಕಾಂತ್ ಎಲ್ ಎಂಬುವವರು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ ತಕ್ಷಣಕ್ಕೆ ಸಾಲ ನೀಡುವ 426 ಆ್ಯಪ್ಗಳಿವೆ. ಇವಗಳಲ್ಲಿ ಹೆಚ್ಚಿನವು ಚೀನಾ ಹಿನ್ನೆಲೆ ಹೊಂದಿರುವ ಅಪ್ಲಿಕೇಶನ್‌ಗಳಾಗಿವೆ. ಇವುಗಳಲ್ಲಿ ಕೆಲವೊಂದು ಆ್ಯಪ್ಗಳು ದಕ್ಷಿಣ ಹಾಗೂ ಪೂರ್ವ ಏಷ್ಯಾ ಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಗತವಾಗಿವೆ. ಇದರ ಜೊತೆಗೆ ಪ್ಲೇ ಸ್ಟೋರ್ನಲ್ಲಿ ಇಲ್ಲದೆ ಇರುವ 260 ಆ್ಯಪ್ಗಳ ಬಗ್ಗೆಯೂ ನಮ್ಮಲ್ಲಿ ಮಾಹಿತಿ ಇದೆ ಎಂದಿದ್ದಾರೆ ಅವರು.
After deeply being troubled over series of suicides – #CashlessConsumer is committed to bringing in strong regulation / oversight over #DigitalLending to protect consumers. 1/https://t.co/3HG3sM84VM
— Srikanth ஸ்ரீகாந்த் (@logic) December 28, 2020
ಈ ಆ್ಯಪ್ಗಳು ಯಾವುದೇ ಬ್ಯಾಂಕ್ಗಳ ಜೊತೆ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಇವು ನೇರವಾಗಿ ಗ್ರಾಹಕರನ್ನು ಭೇಟಿ ಮಾಡಿ ಅವರಿಗೆ ಸಾಲ ನೀಡುವ ಕೆಲಸ ಮಾಡುತ್ತಿವೆ. ಹೆಚ್ಚಿನ ಬಡ್ಡಿಗೆ ಸಾಲ ನೀಡಿದ ನಂತರ ಅದನ್ನು ಹಿಂದಿರುಗಿಸದಿದ್ದರೆ ಕಿರುಕುಳ ನೀಡುತ್ತಾರೆ.
ಏನಿದು ಈ ಹಿಂದಿನ ಪ್ರಕರಣ?
ತೆಲಂಗಾಣ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಹಾಗೂ ಖಾಸಗಿ ಕಂಪೆನಿಯ ಟೆಕ್ಕಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸರಿಗೆ ಆ ಬಗ್ಗೆ ಅನುಮಾನ ಇತ್ತು. ಅನುಮಾನದ ಬೆನ್ನು ಹತ್ತಿ ಹೋದಾಗ ಆತ್ಮಹತ್ಯೆಯ ನಿಜವಾದ ಕಾರಣ ಬಯಲಾಗಿತ್ತು. ಅವರಿಬ್ಬರೂ ಇನ್ಸ್ಟಂಟ್ ಆ್ಯಪ್ ಮೂಲಕ ಸಾಲ ಪಡೆದಿದ್ದರು.
ಆದರೆ, ಸಾಲ ಪಡೆದ ನಂತರ ಅದನ್ನು ಹಿಂದಿರುಗಿಸಲು ಸಾಧ್ಯವಾಗಿರಲಿಲ್ಲ. ಟಿಲಿ ಕಾಲರ್ಗಳು ಹಾಗೂ ರಿಕವರಿ ಏಜೆಂಟ್ಗಳು ಅವರಿಗೆ ಕಿರುಕುಳ ನೀಡಲು ಆರಂಭಿಸಿದ್ದರು. ಅಷ್ಟೇ ಅಲ್ಲ ಅವರ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಾಲಗಾರರು ಎನ್ನುವ ಹಣೆಪಟ್ಟಿ ಹಚ್ಚಿದ್ದರು. ಇಷ್ಟಕ್ಕೇ ಟಾರ್ಚರ್ ನಿಲ್ಲಿಸದೇ, ಸಾಲಗಾರರು ಹಾಗೂ ಅವರ ಕುಟುಂಬದವರಿಗೆ ಅಶ್ಲೀಲ ಶಬ್ದಗಳಲ್ಲಿ ಬೈದಿದ್ದರು. ಇದರಿಂದಾಗಿ ಸಾಲ ಪಡೆದವರು ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದರು.
Explainer | ಇನ್ಸ್ಟಂಟ್ ಲೋನ್ ಕರ್ಮಕಾಂಡ: ಸ್ವಲ್ಪ ಯಾಮಾರಿದ್ರೂ ಕಿರುಕುಳ ಗ್ಯಾರಂಟಿ!
Published On - 3:36 pm, Tue, 29 December 20