‘ಬಹುಶಃ ಇದು ನನ್ನ ಕೊನೆಯ ಶುಭ ಮುಂಜಾನೆ’; ಮನಕಲಕುವ ಸಂದೇಶ ಪೋಸ್ಟ್​ ಮಾಡಿ ವೈದ್ಯೆ ಡಾ.ಮನೀಷಾ ಜಾಧವ್ ಕೊನೆಯುಸಿರು

| Updated By: Digi Tech Desk

Updated on: Apr 21, 2021 | 7:26 PM

ಸೋಮವಾರ ತಡರಾತ್ರಿ ಕ್ಷಯರೋಗ ತಜ್ಞರಾದ ಡಾ.ಜಾಧವ್​ ಅವರು ನಾವಿನ್ನು ಬದುಕುಳಿಯುವುದಿಲ್ಲ ಎಂದು ಬರೆದುಕೊಂಡು ಫೇಸ್​ಬುಕ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

‘ಬಹುಶಃ ಇದು ನನ್ನ ಕೊನೆಯ ಶುಭ ಮುಂಜಾನೆ’; ಮನಕಲಕುವ ಸಂದೇಶ ಪೋಸ್ಟ್​ ಮಾಡಿ ವೈದ್ಯೆ ಡಾ.ಮನೀಷಾ ಜಾಧವ್ ಕೊನೆಯುಸಿರು
ಡಾ.ಮನೀಷಾ ಜಾಧವ್
Follow us on

ಮುಂಬೈ: ಸಾಂಕ್ರಾಮಿಕ ರೋಗದ ಹಿನ್ನೆಯಲ್ಲಿ ಹಲವಾರು ವೈದ್ಯರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಳ್ಳುತ್ತಿದ್ದಾರೆ. ಅದೇ ರೀತಿ ಇಲ್ಲೋರ್ವ ವೈದ್ಯರು ‘ಬಹುಶಃ ಇದು ನನ್ನ ಕೊನೆಯ ಮುಂಜಾನೆಯ ಶುಭಾಶಯ’ ಎಂದು ಪೋಸ್ಟ್​ ಮಾಡಿದ ನಂತರದಲ್ಲಿಕೊನೆಯುಸಿರೆಳೆದ ಘಟನೆ ಮುಂಬೈನಲ್ಲಿ ನಡೆದಿದೆ. 51 ವರ್ಷದ ಮುಂಬೈ ವೈದ್ಯರಾದ ಡಾ.ಮನೀಷಾ ಜಾಧವ್​ ಅವರು ನಗರದ ಟಿಬಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇವರು ಕೊವಿಡ್​ ಸೋಂಕಿನಿಂದ ಬಳಲುತ್ತಿದ್ದು, ಸೋಮವಾರ ತಡರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ಪೋಸ್ಟ್​ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ಹೇಳಿರುವ ಮಾತು ಎಲ್ಲರ ಮನಕಲಕುವಂತಿದೆ.

ಸೋಮವಾರ ತಡರಾತ್ರಿ ಕ್ಷಯರೋಗ ತಜ್ಞರಾದ ಡಾ.ಜಾಧವ್​ ಅವರು ನಾವಿನ್ನು ಬದುಕುಳಿಯುವುದಿಲ್ಲ ಎಂದು ಬರೆದುಕೊಂಡು ಫೇಸ್​ಬುಕ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಬಹುಶಃ ಇದು ನನ್ನ ಕೊನೆಯ ಶುಭ ಮುಂಜಾವು. ಇನ್ನುಮುಂದೆ ನಾನೆಂದೂ ನಿಮಗೆ ಈ ವೇದಿಕೆಯಲ್ಲಿ ಸಿಗದೇ ಇರಬಹುದು. ಎಲ್ಲರೂ ಚೆನ್ನಾಗಿರಿ. ದೇಹ ಸಾಯಬಹುದು ಆದರೆ ಆತ್ಮ ಸಾಯುವುದಿಲ್ಲ. ಆತ್ಮ ಅಮರ ಎಂದು ಬರೆದುಕೊಂಡಿದ್ದಾರೆ.

ಪೋಸ್ಟ್​ ಮಾಡಿದ ಸುಮಾರು 36 ಗಂಟೆಗಳಲ್ಲಿಯೇ ಡಾ.ಜಾಧವ್​ ಕೊನೆಯುಸಿರೆಳಿದಿದ್ದಾರೆ. ಕೊವಿಡ್​ ಆರ್ಭಟ ಜೋರಾಗುತ್ತಿದ್ದಂತೆಯೇ ಅನೇಕ ವೈದ್ಯರು ಆರೋಗ್ಯದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ಅದೇ ರೀತಿ, ‘ನಾವು ಅಸಹಾಯಕರಾಗಿದ್ದೇವೆ.. ಇಂತಹ ಪರಿಸ್ಥಿತಿ ಈ ಹಿಂದೆ ನೋಡಿರಲಿಲ್ಲ. ಜನರು ಭಯಭೀರತಾಗಿದ್ದಾರೆ’ ಎಂದು ಆಘಾತಕ್ಕೆ ಒಳಗಾದ ಇನ್ನೋರ್ವ ಮುಂಬೈ ವೈದ್ಯರು ರಾ. ಟ್ರುಪಿ ಗಿಲಾಡಿ ಮಾಡಿರುವ ವಿಡಿಯೋ ನಿನ್ನೆ ವೈರಲ್​ ಆಗಿತ್ತು. ವಿಡಿಯೋ ಪೋಸ್ಟ್​ ಹಂಚಿಕೊಂಡ ಅವರು, ಕೊವಿಡ್ ಪಾಸಿಟಿವ್​ ರೋಗಿಗಳ ವಿಪರೀತ ನೋವು ಅವರ ಕಣ್ಣಲ್ಲಿ ನೀರು ತರಿಸುತ್ತಿದೆ. ‘ಪರಿಸ್ಥಿತಿ ನನ್ನ ಹೃದಯ ಕಲಕುವಂತಿದೆ. ನನ್ನ ಚಿಂತೆಯನ್ನು ನಿಮ್ಮಲ್ಲಿ ಹೇಳಿಕೊಂಡರೆ, ನಿಮಗೆ ಅರ್ಥ ಮಾಡಿಸಿದರೆ ನಾನು ಹೆಚ್ಚು ಶಾಂತಿಯಿಂದ ಇರಬಹುದು’ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದರು.

ಐಎಂಎ ಪ್ರಕಾರ ದೇಶದಲ್ಲಿ 18 ಸಾವಿರ ವೈದ್ಯರು ಕೊರೊನಾ ವೈರಸ್​ ಸೋಂಕಿಗೆ ಒಳಗಾಗಿದ್ದಾರೆ. ಕಳೆದ ಮಾರ್ಚ್​ನಲ್ಲಿ ಮಹಾರಾಷ್ಟ್ರ ಒಂದರಲ್ಲೇ 168 ಮಂದಿ ಕೊನೆಯುಸಿರೆಳೆದಿದ್ದಾರೆ. ಈ ಪಟ್ಟಿಗೆ ಮನೀಷಾ ಅವರೂ ಸೇರ್ಪಡೆಯಾಗಿದ್ದಾರೆ. ಮನೀಷಾ ಅವರ ಕಾರ್ಯದಕ್ಷತೆಯ ಬಗ್ಗೆ ಮೆಚ್ಚುಗೆ ಮಾತುಗಳನ್ನು ಮುಂಬೈ ವೈದ್ಯಕೀಯ ಲೋಕ ಹೇಳುತ್ತಿದೆ.

ಇದನ್ನೂ ಓದಿ: ಕೊವಿಡ್ ಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ: ಡಿಸಿಎಂ ಅಶ್ವಥ್ ನಾರಾಯಣ

Published On - 5:25 pm, Wed, 21 April 21