ಸೀರೆ ಧರಿಸಿ ತೃತೀಯಲಿಂಗಿಯಂತೆ ನಟಿಸಿ ಮನೆಗೆ ಎಂಟ್ರಿ: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ನಗದು ದೋಚಿ ವ್ಯಕ್ತಿ ಪರಾರಿ

ಮುಂಬೈನ ಪೊವೈನಲ್ಲಿ ಸೀರೆ ಧರಿಸಿ ತೃತೀಯಲಿಂಗಿ ವೇಷದಲ್ಲಿ ಬಂದ ವ್ಯಕ್ತಿ, ಮಕ್ಕಳ ಭಾಗ್ಯದ ನೆಪದಲ್ಲಿ ಮಹಿಳೆಯ ಮನೆಗೆ ನುಗ್ಗಿ ಲೈಂಗಿಕ ದೌರ್ಜನ್ಯ ಎಸಗಿ ನಗದು ದೋಚಿದ್ದಾನೆ. ಸಿಸಿಟಿವಿ ಆಧರಿಸಿ ಆರೋಪಿಯನ್ನು ಪೊಲೀಸರು ಶೀಘ್ರವೇ ಬಂಧಿಸಿದ್ದಾರೆ. ಅಪರಿಚಿತರಿಗೆ ಮನೆ ಪ್ರವೇಶ ನೀಡದಂತೆ ಮತ್ತು ಭದ್ರತಾ ಸಿಬ್ಬಂದಿ ಗುರುತು ಪತ್ರ ಪರಿಶೀಲಿಸುವಂತೆ ಮುಂಬೈ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಸೀರೆ ಧರಿಸಿ ತೃತೀಯಲಿಂಗಿಯಂತೆ ನಟಿಸಿ ಮನೆಗೆ ಎಂಟ್ರಿ: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ನಗದು ದೋಚಿ ವ್ಯಕ್ತಿ ಪರಾರಿ
ಬಂಧನ

Updated on: Aug 21, 2026 | 10:02 AM

ಮುಂಬೈ,ಆಗಸ್ಟ್ 21: ಮುಂಬೈನ ಪೊವೈ ಪ್ರದೇಶದಲ್ಲಿ ತೃತೀಯಲಿಂಗಿ(Transgender)ಯಂತೆ ನಟಿಸಿ ಸೀರೆ ಧರಿಸಿ ಮನೆಗೆ ನುಗ್ಗಿದ ವ್ಯಕ್ತಿಯೊಬ್ಬ, ಮಹಿಳೆಗೆ ಬೆದರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ನಗದು ದೋಚಿ ಪರಾರಿಯಾಗಿದ್ದ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅನಿಲ್ ಶೇಷರಾವ್ ಶಿಂಧೆ (28) ಎಂದು ಗುರುತಿಸಲಾಗಿದೆ.

ಮಕ್ಕಳಿಲ್ಲದ ಮಹಿಳೆಗೆ ಗಾಳ: ಸಂತ್ರಸ್ತ ಮಹಿಳೆಗೆ ಮದುವೆಯಾಗಿ ನಾಲ್ಕೈದು ವರ್ಷಗಳಾಗಿದ್ದರೂ ಮಕ್ಕಳಿರಲಿಲ್ಲ. ಇದನ್ನು ದುರುಪಯೋಗಪಡಿಸಿಕೊಂಡ ಆರೋಪಿ, ದೃಷ್ಟಿ ತೆಗೆದು ಮಗುವಿನ ಭಾಗ್ಯಕ್ಕಾಗಿ ವಿಶೇಷ ಆಶೀರ್ವಾದ ನೀಡುವುದಾಗಿ ನಂಬಿಸಿ ಫ್ಲಾಟ್‌ಗೆ ಪ್ರವೇಶಿಸಿದ್ದ.

ಬೆದರಿಸಿ ಲೈಂಗಿಕ ದೌರ್ಜನ್ಯ: ಒಳಗೆ ಹೋದ ತಕ್ಷಣ ಮಲಗುವ ಕೋಣೆಗೆ ನುಗ್ಗಿದ ಆತ, ಜೀವ ಬೆದರಿಕೆ ಹಾಕಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಮನೆಯಲ್ಲಿದ್ದ 2 ಸಾವಿರ ರೂ. ನಗದನ್ನು ದೋಚಿಕೊಂಡು ಪರಾರಿಯಾಗಿದ್ದಾನೆ.

ಮತ್ತಷ್ಟು ಓದಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್​ಗೆ ದೃಷ್ಟಿ ತೆಗೆದು ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ ಜೋಗತಿ ಮಂಜಮ್ಮ; ವಿಡಿಯೋ ಫುಲ್ ವೈರಲ್

ಪೊವೈ ಪೊಲೀಸರು ಘಟನಾ ಸ್ಥಳದ ಸುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಸೀರೆ ಧರಿಸಿದ್ದ ಆರೋಪಿ ಆಟೋರಿಕ್ಷಾ ಮೂಲಕ ಥಾಣೆಯತ್ತ ತೆರಳಿರುವುದು ಪತ್ತೆಯಾಯಿತು. ಖರೇಗಾಂವ್ ಕೊಳೆಗೇರಿ ಪ್ರದೇಶಕ್ಕೆ ತೆರಳಿದ್ದ ಆರೋಪಿಯನ್ನು ಪೊಲೀಸರು ಕಲ್ವಾ ಭಾಗದಲ್ಲಿ ಅದೇ ರಾತ್ರಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪೂಜೆ, ದೃಷ್ಟಿ ತೆಗೆಯುವುದು, ಭಿಕ್ಷಾಟನೆ ಅಥವಾ ಆಶೀರ್ವಾದದ ಹೆಸರಿನಲ್ಲಿ ಬರುವ ಯಾವುದೇ ಅಪರಿಚಿತ ವ್ಯಕ್ತಿಗಳಿಗೆ ಮನೆ ಅಥವಾ ಫ್ಲಾಟ್‌ಗಳ ಒಳಗೆ ಪ್ರವೇಶ ನೀಡಬಾರದು ಎಂದು ಮುಂಬೈ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ವಸತಿ ಸಮುಚ್ಛಯಗಳ ಭದ್ರತಾ ಸಿಬ್ಬಂದಿ ಅಪರಿಚಿತರು ಒಳಬರುವಾಗ ಕಡ್ಡಾಯವಾಗಿ ಗುರುತಿನ ಚೀಟಿ ಪರಿಶೀಲಿಸಿ, ನಿವಾಸಿಗಳ ಪೂರ್ವಾನುಮತಿ ಪಡೆದ ನಂತರವಷ್ಟೇ ಒಳಬಿಡುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us