ದೆಹಲಿ: ಭಾರತದಲ್ಲಿ ಸಂಚಲನ ಸೃಷ್ಟಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗೂಢಚಾರಿಕೆ ಪ್ರಕರಣಕ್ಕೀಗ ರೋಚಕ ತಿರುವು ಸಿಕ್ಕಿದೆ. ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ ಕೇರಳ ಪೊಲೀಸರು, ಇಂಟೆಲಿಜೆನ್ಸ್ ಬ್ಯೂರೋದ (ಐಬಿ) ಅಧಿಕಾರಿಗಳಿಗೆ ಸಿಬಿಐ ನಿಂದ ಬಂಧನದ ಭೀತಿ ಶುರುವಾಗಿದೆ. ನಿರೀಕ್ಷಣಾ ಜಾಮೀನು ನೀಡುವಂತೆ ಕೆಲ ಅಧಿಕಾರಿಗಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ತಮ್ಮ ಮೇಲೆ ಸುಳ್ಳು ಕೇಸ್ ದಾಖಲಿಸಿದವರಿಗೆ ಯಾವುದೇ ಕಾರಣಕ್ಕೂ ನಿರೀಕ್ಷಣಾ ಜಾಮೀನು ನೀಡಬಾರದು ಎಂದು ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಕೋರ್ಟ್ ಮೆಟ್ಟಿಲೇರಿದ್ದಾರೆ.
ಇದು ನಮ್ಮ ದೇಶದ ದೊಡ್ಡ ಹಗರಣ. ದೇಶದ ರಹಸ್ಯ ತಂತ್ರಜ್ಞಾನವನ್ನು ವಿದೇಶಕ್ಕೆ ಹಣಕ್ಕಾಗಿ ಮಾರಿದ ಆರೋಪ ಹೊರಿಸಿದವರೇ ಕೊನೆಗೆ ಈಗ ಆರೋಪಿಗಳಾಗಿದ್ದಾರೆ. ಇಂಟೆಲಿಜೆನ್ಸ್ ಬ್ಯೂರೋದ ಅಧಿಕಾರಿಗಳ ವಿರುದ್ಧವೇ ಈಗ ವಿದೇಶಿಗರ ಜತೆಗೆ ಕೈ ಜೋಡಿಸಿದ ಆರೋಪ ಕೇಳಿ ಬಂದಿದೆ. ಪ್ರತಿಭಾವಂತ ವಿಜ್ಞಾನಿಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಯತ್ನದ ಹಿಂದಿನ ಷಡ್ಯಂತ್ರಗಳು ಈಗ ಬಯಲಾಗಿವೆ.
ಇಸ್ರೋ ನಮ್ಮ ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ. ವಿಕ್ರಮ ಸಾರಾಭಾಯಿ, ಸತೀಶ್ ಧವನ್, ಯು.ಆರ್.ರಾವ್ ರಂಥ ಖ್ಯಾತನಾಮ ವಿಜ್ಞಾನಿಗಳು ಕಟ್ಟಿ ಬೆಳೆಸಿದ ಸಂಸ್ಥೆಯೇ ಇಸ್ರೋ. ಇಸ್ರೋ ಬೆಳವಣಿಗೆಯಲ್ಲಿ ನೂರಾರು ವಿಜ್ಞಾನಿಗಳ ಪರಿಶ್ರಮ, ಕೊಡುಗೆ ಇದೆ. ಇಂಥ ವಿಜ್ಞಾನಿಗಳ ಪೈಕಿ ಒಬ್ಬರು ಕೇರಳದ ನಂಬಿ ನಾರಾಯಣನ್. ಇವರ ವಿರುದ್ಧವೇ ಬಾರಿ ಗಂಭೀರ ಆರೋಪ ಕೇಳಿ ಬಂದಿತ್ತು.
ನಂಬಿ ನಾರಾಯಣನ್ ಯಾರು?
ನಂಬಿ ನಾರಾಯಣನ್ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಮಲಯಾಳಿ ಕುಟುಂಬದಲ್ಲಿ ಹುಟ್ಟಿದವರು. ಪದವಿ ವಿದ್ಯಾಭ್ಯಾಸದ ಬಳಿಕ ಆಗಿನ ಇಸ್ರೋ ಮುಖ್ಯಸ್ಥರಾಗಿದ್ದ ವಿಕ್ರಮ್ ಸಾರಾಭಾಯಿ ಅವರನ್ನು 1966 ರಲ್ಲಿ ಭೇಟಿಯಾಗಿ ಇಸ್ರೋಗೆ ನೇಮಕವಾಗಿದ್ದರು. ನಂಬಿ ನಾರಾಯಣನ್ ಅವರು ತಿರುವಂತಪುರದ ಇಸ್ರೋ ಶಾಖೆಯಲ್ಲಿ ರಾಕೆಟ್ ಲಾಂಚಿಂಗ್ ಸ್ಟೇಷನ್ನಲ್ಲಿ ಪೇಲೋಡ್ ಇಂಟಿಗ್ರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಬಳಿಕ ಎಂ.ಟೆಕ್ ಪದವಿ ಪಡೆಯಲು ತಿರುವಂತಪುರದ ಕಾಲೇಜ್ ಆಫ್ ಇಂಜಿನಿಯರಿಂಗ್ಗೆ ಸೇರಿದ್ದರು.
ಇದನ್ನು ತಿಳಿದ ವಿಕ್ರಮ್ ಸಾರಾಭಾಯಿ ಅವರು ನಂಬಿ ನಾರಾಯಣನ್, ವಿದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಸೀಟು ಪಡೆದರೇ, ಇಸ್ರೋದಿಂದ ರಜೆ ನೀಡುವುದಾಗಿ ಹೇಳಿದ್ದರು. ಆಗಲೇ ನಂಬಿ ನಾರಾಯಣನ್ ಅವರಿಗೆ ಆಮೆರಿಕಾದ ಪ್ರತಿಷ್ಠಿತ ನಾಸಾ ಸಂಸ್ಥೆಯ ಫೆಲೋಷಿಪ್ ಸಿಕ್ಕಿತು. ಬಳಿಕ ಉನ್ನತ ವಿದ್ಯಾಭ್ಯಾಸಕ್ಕಾಗಿ 1969ರಲ್ಲಿ ಆಮೆರಿಕಾದ ಪ್ರಿನ್ಸಟನ್ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಯಾಗಿದ್ದರು.
ಅಮೆರಿಕಾದಲ್ಲಿ ನಂಬಿ ನಾರಾಯಣನ್ ಉನ್ನತ ವಿದ್ಯಾಭ್ಯಾಸ
ಅಮೆರಿಕಾದ ಪ್ರಿನ್ಸಟನ್ ವಿಶ್ವವಿದ್ಯಾಲಯದಲ್ಲಿ ನಂಬಿ ನಾರಾಯಣನ್, ಹತ್ತೇ ತಿಂಗಳಲ್ಲೇ ಕೆಮಿಕಲ್ ರಾಕೆಟ್ ಪ್ರೊಪಲಸನ್ ಪ್ರೋಗ್ರಾಂನಲ್ಲಿ ಮಾಸ್ಟರ್ ಡಿಗ್ರಿಯನ್ನು ಪೂರ್ಣಗೊಳಿಸಿದ್ದರು. ಆಗ ಆಮೆರಿಕಾದಲ್ಲೇ ನಂಬಿ ನಾರಾಯಣನ್ಗೆ ಉದ್ಯೋಗ ನೀಡುವ ಆಫರ್ಗಳು ಬಂದಿದ್ದವು. ಆದರೆ, ನಂಬಿ ನಾರಾಯಣನ್ ಆಮೆರಿಕಾದಲ್ಲಿ ಕೆಲಸ ಮಾಡುವ ಆಸೆಗೆ ಬೀಳಲಿಲ್ಲ. ಹೆಚ್ಚಿನ ಸಂಬಳದ ಆಫರ್ ಅನ್ನು ತಿರಸ್ಕರಿಸಿ, ಲಿಕ್ವಿಡ್ ಪ್ರೊಪಲಸನ್ ಎಕ್ಸ್ ಫರ್ಟ್ ಆಗಿ ತಾಯ್ನಾಡು ಭಾರತಕ್ಕೆ ವಾಪಸ್ ಬಂದರು.
ಆಗ ಭಾರತದಲ್ಲಿ ಲಿಕ್ವಿಡ್ ಪ್ಯೂಯಲ್ ರಾಕೆಟ್ ತಂತ್ರಜ್ಞಾನದ ಎಕ್ಸ್ಪರ್ಟ್ಗಳ ಕೊರತೆ ಇತ್ತು. ಭಾರತಕ್ಕೆ ಬಂದ ನಂಬಿ ನಾರಾಯಣನ್, ಭಾರತದಲ್ಲಿ ಇಸ್ರೋದಲ್ಲಿ ತಮ್ಮ ಉದ್ಯೋಗ ಮುಂದುವರೆಸಿದರು. ಭಾರತದಲ್ಲಿ ಲಿಕ್ವಿಡ್ ಪ್ಯೂಯಲ್ ರಾಕೆಟ್ ತಂತ್ರಜ್ಞಾನವನ್ನು ಪರಿಚಯಿಸಿದ ಹಿರಿಮೆ ನಂಬಿ ನಾರಾಯಣನ್ಗೆ ಸಲ್ಲುತ್ತದೆ . ಇಸ್ರೋದಿಂದ ಭವಿಷ್ಯದಲ್ಲಿ ರಾಕೆಟ್ಗಳನ್ನು ಬಾಹ್ಯಾಕಾಶಕ್ಕೆ ಉಡಾಯಿಸಲು ಲಿಕ್ವಿಡ್ ಫ್ಯೂಯಲ್ ರಾಕೆಟ್ ತಂತ್ರಜ್ಞಾನ ಬಳಕೆಗೆ ಲಭ್ಯವಾಗುವಂತೆ ಅದನ್ನು ಅಭಿವೃದ್ದಿಪಡಿಸಲು ದುಡಿದರು. ಇದಕ್ಕೆ ಇಸ್ರೋದ ಆಗಿನ ಅಧ್ಯಕ್ಷ ಸತೀಶ್ ಧವನ್ ಕೂಡ ಪೋತ್ಸಾಹ ನೀಡಿದ್ದರು. ನಂಬಿ ನಾರಾಯಣನ್ ಅವರು ಮೊದಲಿಗೆ 600 ಕೆಜಿ ತೂಕದ ಲಿಕ್ವಿಡ್ ಪ್ರೊಪೊಲೆಂಟ್ ಮೋಟಾರ್ ಅನ್ನು ಅಭಿವೃದ್ದಿಪಡಿಸಿದರು.
1992 ರಲ್ಲಿ ರಷ್ಯಾದಿಂದ ಕ್ರಯೋಜನಿಕ್ ಇಂಜಿನ್ ಖರೀದಿಗೆ ಒಪ್ಪಂದ
ಭಾರತವು 1992 ರಲ್ಲಿ ರಷ್ಯಾದಿಂದ ಕ್ರಯೋಜನಿಕ್ ಫ್ಯೂಯಲ್ ಆಧರಿತ ಇಂಜಿನ್ ಖರೀದಿ ಹಾಗೂ ತಂತ್ರಜ್ಞಾನದ ವರ್ಗಾವಣೆಗೆ ಒಪ್ಪಂದ ಮಾಡಿಕೊಂಡಿತ್ತು. 235 ಕೋಟಿ ರೂಪಾಯಿ ನೀಡಿ ರಷ್ಯಾದಿಂದ ಕ್ರಯೋಜನಿಕ್ ಇಂಜಿನ್ ಖರೀದಿಸಲು ಒಪ್ಪಂದವಾಗಿತ್ತು. ಆದರೆ, ಆಮೆರಿಕಾದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಈ ಒಪ್ಪಂದ ಜಾರಿಗೆ ಬರಲು ಅವಕಾಶ ಕೊಡಲಿಲ್ಲ. ಭಾರತಕ್ಕೆ ಕ್ರಯೋಜನಿಕ್ ಪ್ಯೂಯಲ್ ಆಧರಿತ ಇಂಜಿನ್ ನೀಡಿದರೇ, ರಷ್ಯಾವನ್ನು ಕಪ್ಪು ಪಟ್ಟಿಗೆ ಸೇರಿಸುವುದಾಗಿ ಬೆದರಿಕೆ, ಒತ್ತಡ ಹಾಕಿದ್ದರು. ಇದಕ್ಕೆ ಮಣಿದ ರಷ್ಯಾದ ಆಗಿನ ಅಧ್ಯಕ್ಷ ಬೋರಿಸ್ ಎಲ್ಟಸಿನ್ ಭಾರತಕ್ಕೆ ಕ್ರಯೋಜನಿಕ್ ಫ್ಯೂಯಲ್ ಆಧರಿತ ಇಂಜಿನ್ ನೀಡಲೇ ಇಲ್ಲ.
ಭಾರತದಿಂದಲೇ ಕ್ರಯೋಜನಿಕ್ ಇಂಜಿನ್ ನಿರ್ಮಾಣಕ್ಕೆ ನಿರ್ಧಾರ
ಭಾರತವು ಸ್ವದೇಶಿಯಾಗಿ ಕ್ರಯೋಜನಿಕ್ ಇಂಜಿನ್ ನಿರ್ಮಾಣ ಮಾಡಲು ನಿರ್ಧರಿಸಿತು. ಇದರಲ್ಲಿ ನಂಬಿ ನಾರಾಯಣನ್ ಅವರ ಪಾತ್ರ ಪ್ರಮುಖವಾಗಿತ್ತು. ಪ್ರಾನ್ಸ್ ದೇಶದ ಸಹಕಾರದೊಂದಿಗೆ ನಂಬಿ ನಾರಾಯಣನ್ ಟೀಮ್ ವಿಕಾಸ್ ಇಂಜಿನ್ ಅನ್ನು ಅಭಿವೃದ್ದಿಪಡಿಸಿತು. ಈ ವಿಕಾಸ್ ಇಂಜಿನ್ ಅನ್ನೇ ಇಸ್ರೋದ ಅನೇಕ ರಾಕೆಟ್ಗಳಲ್ಲಿ ಬಳಸಲಾಗುತ್ತಿದೆ. 2008 ರಲ್ಲಿ ಚಂದ್ರಯಾನ-1 ರಲ್ಲಿ ಗಗನಕ್ಕೆ ಚಿಮ್ಮಿದ ಪಿಎಸ್‌ಎಲ್‌ವಿ ಯಲ್ಲಿ ವಿಕಾಸ್ ಇಂಜಿನ್ ಅನ್ನು ಬಳಕೆ ಮಾಡಲಾಗಿತ್ತು. ವಿಕಾಸ್ ಇಂಜಿನ್ ಅನ್ನು ಪಿಎಸ್ಎಲ್‌ವಿಯ ಎರಡನೇ ಹಂತದಲ್ಲಿ ಬಳಕೆ ಮಾಡಲಾಗುತ್ತದೆ. ಜಿಎಸ್‌ಎಲ್‌ವಿಯ 2 ಮತ್ತು ನಾಲ್ಕನೇ ಹಂತದಲ್ಲಿ ಈ ವಿಕಾಸ್ ಇಂಜಿನ್ ಅನ್ನು ಬಳಕೆ ಮಾಡಲಾಗಿತ್ತು. ರಾಕೆಟ್ ಉಡಾವಣೆಗೆ ಬಳಸುವ ಮಹತ್ವದ ವಿಕಾಸ್ ಇಂಜಿನ್ ನಿರ್ಮಾಣದಲ್ಲಿ ಭಾಗಿಯಾಗಿದ್ದವರೇ ನಂಬಿ ನಾರಾಯಣನ್.
ನಂಬಿ ನಾರಾಯಣನ್ ದುರ್ದಿನಗಳು!
ಇಂಥ ವಿಜ್ಞಾನಿಯೇ 1994 ರಿಂದ 1998ರವರೆಗೂ ಜೀವನದಲ್ಲಿ ಇನ್ನಿಲ್ಲದ ಸಂಕಷ್ಟಗಳ ಸರಮಾಲೆಯನ್ನು ಎದುರಿಸಬೇಕಾಯಿತು ಎನ್ನುವುದು ವಿಪರ್ಯಾಸ. ನಂಬಿ ನಾರಾಯಣನ್ ಅವರ ಘನತೆ, ಗೌರವ ಮಣ್ಣು ಪಾಲಾಯಿತು. ವೃತ್ತಿ ಜೀವನ ಹಾಳಾಯಿತು. ಪೊಲೀಸರು, ಗೂಂಡಾಗಳಿಂದ ದೌರ್ಜನ್ಯ, ಹಿಂಸೆ, ಕಿರುಕುಳ ಅನುಭವಿಸಬೇಕಾಯಿತು. ನಂಬಿ ನಾರಾಯಣನ್ ಜೈಲು ವಾಸ ಕೂಡ ಅನುಭವಿಸಿದ್ದರು.
ನಂಬಿ ನಾರಾಯಣನ್ ವಿರುದ್ಧ ಇಸ್ರೋದಲ್ಲಿ ಗೂಢಚಾರಿಕೆ ನಡೆಸಿದ ಆರೋಪ!
ಇಸ್ರೋದಲ್ಲಿ ರಾಕೆಟ್ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದ ನಂಬಿ ನಾರಾಯಣನ್ ವಿರುದ್ಧ ಇಸ್ರೋದಲ್ಲಿ ಗೂಢಚಾರಿಕೆ ನಡೆಸಿದ ಗಂಭೀರ ಆರೋಪ ಹೊರಿಸಲಾಗಿತ್ತು. ಇಸ್ರೋದ ಕ್ರಯೋಜನಿಕ್ ಇಂಜಿನ್ ನಿರ್ಮಾಣದ ತಂತ್ರಜ್ಞಾನವನ್ನು ಪಾಕಿಸ್ತಾನಕ್ಕೆ ಹಣಕ್ಕಾಗಿ ಮಾರಾಟ ಮಾಡಿದ ಆರೋಪ ಹೊರಿಸಲಾಗಿತ್ತು.
1994, ನವಂಬರ್ 30ರಂದು ನಂಬಿ ನಾರಾಯಣನ್ ಬಂಧನ
ಮಾಲ್ಡೀವ್ಸ್ ದೇಶದ ಮಹಿಳೆ ಮರೀಯಂ ರಶೀದ್, ಫೌಜಿಯಾ ಹಸನ್ ರಿಂದ ಹಣ ಪಡೆದು ಕ್ರಯೋಜನಿಕ್ ಇಂಜಿನ್ ತಂತ್ರಜ್ಞಾನವನ್ನು ನೀಡಿದ್ದಾರೆ ಎಂದು ಆರೋಪ ಹೊರಿಸಲಾಗಿತ್ತು. ಈ ಮರೀಯಂ ರಶೀದ್, ಫೌಜಿಯಾ ಹಸನ್ ಮಾಲ್ಡೀವ್ಸ್ ದೇಶದ ಗೂಢಚಾರಿ ಮಹಿಳೆಯರು. ಈ ಇಬ್ಬರು ಮಹಿಳೆಯರು ನಂಬಿ ನಾರಾಯಣನ್ ಅವರನ್ನು ಹನಿಟ್ರ್ಯಾಪ್ ಮಾಡಿ, ಹಣ ನೀಡಿ ಇಸ್ರೋದ ಕ್ರಯೋಜನಿಕ್ ಇಂಜಿನ್ ನಿರ್ಮಾಣದ ರಹಸ್ಯ ಪಡೆದುಕೊಂಡಿದ್ದಾರೆ. ಈ ಇಬ್ಬರು ಮಹಿಳೆಯರು ಪಾಕಿಸ್ತಾನದ ಪರವಾಗಿ ಭಾರತದಲ್ಲಿ ಗೂಢಚಾರಿಕೆ ನಡೆಸುತ್ತಿದ್ದರು ಅಂತ ಕೇರಳ ಪೊಲೀಸರು ಕೋರ್ಟ್ನಲ್ಲಿ ಹೇಳಿದ್ದರು. ಮಾಲ್ಡೀವ್ಸ್ ಮಹಿಳೆಯರನ್ನು ಬಂಧಿಸಿದ ಬಳಿಕ 1994ರ ನವಂಬರ್ 30ರಂದು ನಂಬಿ ನಾರಾಯಣನ್ ಹಾಗೂ ಅವರ ಜತೆ ಕೆಲಸ ಮಾಡುತ್ತಿದ್ದ ಶಶಿಕುಮಾರನ್ ಅವರನ್ನು ಕೇರಳ ಪೊಲೀಸರು ಬಂಧಿಸಿದ್ದರು.
50 ದಿನ ನಂಬಿ ನಾರಾಯಣನ್ಗೆ ಜೈಲುವಾಸ
ಪೊಲೀಸ್ ಕಸ್ಟಡಿಯಲ್ಲಿದ್ದಾಗ ಇಸ್ರೋದ ಉನ್ನತ ಅಧಿಕಾರಿಗಳ ವಿರುದ್ಧ ಸುಳ್ಳು ಆರೋಪ ಮಾಡುವಂತೆ ನಂಬಿ ನಾರಾಯಣನ್ಗೆ ಒತ್ತಡ ಹೇರಿದ್ದಾರೆ. ನಂಬಿ ನಾರಾಯಣನ್ ಅವರಿಂದ ಇಸ್ರೋದಲ್ಲಿ ಆಗ ಲಿಕ್ವಿಡ್ ಪ್ರೊಪೊಲಸನ್ ಸಿಸ್ಟಮ್ಸ್ ಸೆಂಟರ್ನ ಡೈರೆಕ್ಟರ್ ಆಗಿದ್ದ ಮುತ್ತುನಾಯಗಮ್ ವಿರುದ್ಧ ಸುಳ್ಳು ಆರೋಪ ಮಾಡುವಂತೆ ಪೀಡಿಸಿದ್ದಾರೆ. ಆದರೆ, ನಂಬಿ ನಾರಾಯಣನ್ ಇದಕ್ಕೆ ಒಪ್ಪಿಲ್ಲ. ಒಪ್ಪದೇ ಇದ್ದಾಗ ಹೊಡೆದು, ಬಡಿದು ಕಿರುಕುಳ ನೀಡಿದ್ದಾರೆ. ಬಳಿಕ ಚಿತ್ರಹಿಂಸೆ ತಡೆಯಲಾರದೇ ನಂಬಿ ನಾರಾಯಣನ್ ಕುಸಿದುಬಿದ್ದಿದ್ದಾರೆ. ಆಗ ಆಸ್ಪತ್ರೆಗೆ ದಾಖಲಿಸಬೇಕಾಯಿತು. ಬಳಿಕ ನಂಬಿ ನಾರಾಯಣನ್ ಅವರನ್ನು ಕೋರ್ಟ್ಗೆ ಹಾಜರುಪಡಿಸಲಾಯಿತು. ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಇದರಿಂದ ನಂಬಿ ನಾರಾಯಣನ್ 50ದಿನ ಜೈಲಿನಲ್ಲಿ ಇರಬೇಕಾಯಿತು. ಬಳಿಕ ಜಾಮೀನು ಪಡೆದು ಜೈಲಿನಿಂದ ನಂಬಿ ನಾರಾಯಣನ್ ಹೊರ ಬಂದರು.
ಗೂಢಚಾರಿಕೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ
ಬಳಿಕ ಇಸ್ರೋ ಗೂಢಚಾರಿಕೆ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿತ್ತು. ಸಿಬಿಐನ ಆಗಿನ ನಿರ್ದೇಶಕರು ಸಿಬಿಐ ಅಧಿಕಾರಿ ಡಿ.ಆರ್.ಕಾರ್ತಿಕೇಯನ್ ಅವರಿಗೆ ಈ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದರು. ಆಗ ಕಾರ್ತಿಕೇಯನ್ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ತನಿಖೆಯನ್ನು ನಡೆಸಲು ಚೆನ್ನೈನಲ್ಲಿ ಇದ್ದರು. ಹೀಗಾಗಿ ನಂಬಿ ನಾರಾಯಣನ್ ಅವರನ್ನು ಚೆನ್ನೈಗೆ ಕಳಿಸಿದ್ದರು. ಚೆನ್ನೈನಲ್ಲಿ ಎರಡು ದಿನಗಳ ಕಾಲ ಡಿ.ಆರ್. ಕಾರ್ತಿಕೇಯನ್ ಅವರು ನಂಬಿ ನಾರಾಯಣನ್ ಅವರನ್ನು ತನಿಖೆ, ವಿಚಾರಣೆ ನಡೆಸಿದ್ದರು.
ನಂಬಿ ನಾರಾಯಣನ್ ಅವರು 2 ದಿನ ಚೆನ್ನೈನಲ್ಲಿ ನಮ್ಮ ಜತೆಗೆ ಇದ್ದರು. ನಾನು 2 ದಿನ ನಂಬಿ ನಾರಾಯಣನ್ ಅವರನ್ನು ವಿಚಾರಣೆ ನಡೆಸಿದೆ. ವಿಚಾರಣೆ ಮಾಡಿದ ಬಳಿಕ ಅವರು ಅಮಾಯಕರು ಅಂತ ಸಿಬಿಐ ಹೆಡ್ ಕ್ವಾರ್ಟರ್ಗೆ ವರದಿ ಸಲ್ಲಿಸಿದೆ ಎಂದು ಸಿಬಿಐ ನಿವೃತ್ತ ಅಧಿಕಾರಿ ಡಿ.ಆರ್.ಕಾರ್ತಿಕೇಯನ್ ಟಿವಿ9ಡಿಜಿಟಲ್ಗೆ ದೂರವಾಣಿ ಕರೆಯ ಮೂಲಕ ಮಾಹಿತಿ ನೀಡಿದ್ದಾರೆ.
ಸಿಬಿಐ ವರದಿ ಬಳಿಕ ಸುಪ್ರೀಂಕೋರ್ಟ್ನಲ್ಲಿ ಕೇಸ್ ವಜಾ
ಸಿಬಿಐ ವರದಿ ಬಳಿಕ ಸುಪ್ರೀಂಕೋರ್ಟ್ ನಂಬಿ ನಾರಾಯಣನ್ ವಿರುದ್ಧದ ಇಸ್ರೋ ಗೂಢಚಾರಿಕೆ ಪ್ರಕರಣವನ್ನು ವಜಾಗೊಳಿಸಿತ್ತು. ಎರ್ನಾಕುಲಂ ಮ್ಯಾಜಿಸ್ಟ್ರೇಟ್ ಕೋರ್ಟ್ ಸಿಬಿಐ ಸಲ್ಲಿಸಿದ್ದ ವರದಿಯನ್ನು ಒಪ್ಪಿಕೊಂಡು ಕೇಸ್ ವಜಾಗೊಳಿಸಿತ್ತು. ಸುಳ್ಳು ಆರೋಪ ಹೊರಿಸಲಾಗಿದೆ. ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಿಬಿಐ ಕೋರ್ಟ್ಗೆ ವರದಿ ಸಲ್ಲಿಸಿತ್ತು. ಬಳಿಕ 1999 ರಲ್ಲಿ ಮತ್ತೆ ನಂಬಿ ನಾರಾಯಣನ್ ಅವರನ್ನು ಇಸ್ರೋ ಸಂಸ್ಥೆಗೆ ಮರುಸೇರ್ಪಡೆ ಮಾಡಿಕೊಳ್ಳಲಾಯಿತು. ಆದರೆ, ಕಚೇರಿ ಕೆಲಸವನ್ನು ಮಾತ್ರ ಮಾಡಲಾಯಿತು. 2001ರವರೆಗೆ ಬೆಂಗಳೂರಿನ ಇಸ್ರೋ ಕಚೇರಿಯಲ್ಲಿ ಕೆಲಸ ಮಾಡಿ ಬಳಿಕ ನಂಬಿ ನಾರಾಯಣನ್ ಸೇವೆಯಿಂದ ನಿವೃತ್ತರಾದರು.
ಇಸ್ರೋ ಗೂಢಚಾರಿಕೆ ಪ್ರಕರಣ ಮುಖ್ಯಮಂತ್ರಿ ಕುರ್ಚಿಗೆ ಕುತ್ತು!
ಇಸ್ರೋ ಗೂಢಚಾರಿಕೆ ಪ್ರಕರಣ ಸುಳ್ಳು ಎಂದು ಸಾಬೀತಾದ ಬಳಿಕ ಕಾಂಗ್ರೆಸ್ ಹೈಕಮ್ಯಾಂಡ್ ಹಾಗೂ ಆಗಿನ ಪ್ರಧಾನಿ ನರಸಿಂಹರಾವ್, ಕೇರಳ ಸಿಎಂ ಆಗಿದ್ದ ಕೆ.ಕರುಣಾಕರನ್ಗೆ ಸಿಎಂ ಹುದ್ದೆಗೆ ರಾಜೀನಾಮೆ ನೀಡಲು ಸೂಚಿಸಿದ್ದರು. 1995ರ ಮಾರ್ಚ್ ತಿಂಗಳಲ್ಲಿ ಕೆ.ಕರುಣಾಕರನ್ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇಸ್ರೋ ಗೂಢಚಾರಿಕೆ ಪ್ರಕರಣ ಸಿಎಂ ಹುದ್ದೆಗೆ ಆಪತ್ತು ತಂದಿತ್ತು. ಬಳಿಕ ಎ.ಕೆ.ಆಂಟನಿ ಕೇರಳದ ಸಿಎಂ ಹುದ್ದೆಗೇರಿದ್ದರು.
2013ರಲ್ಲಿ ಇಲ್ಲದ ತಂತ್ರಜ್ಞಾನವನ್ನು 1994 ರಲ್ಲೇ ಮಾರಲು ಹೇಗೆ ಸಾಧ್ಯ?
ನಂಬಿ ನಾರಾಯಣನ್, ಕ್ರಯೋಜನಿಕ್ ಇಂಜಿನ್ ತಂತ್ರಜ್ಞಾನವನ್ನು ಪಾಕ್‌ಗೆ ಮಾರಿದ್ದಾರೆ ಎಂದು ಕೇರಳ ಪೊಲೀಸರು ಆರೋಪ ಮಾಡಿದ್ದರು. 1994ರ ಆಕ್ಟೋಬರ್ನಲ್ಲಿ ಇಸ್ರೋ ಕ್ರಯೋಜನಿಕ್ ಇಂಜಿನ್ ಅನ್ನು ನಿರ್ಮಾಣವೇ ಮಾಡಿರಲಿಲ್ಲ. ಆಗ ಆ ತಂತ್ರಜ್ಞಾನವು ಭಾರತದ ಬಳಿ ಇರಲೇ ಇಲ್ಲ. 1994 ರಲ್ಲಿ ಮಾತ್ರವಲ್ಲ, 2013 ರಲ್ಲೂ ಭಾರತದ ಬಳಿ ಕ್ರಯೋಜನಿಕ್ ಇಂಜಿನ್ ತಂತ್ರಜ್ಞಾನ ಇರಲಿಲ್ಲ. 1994 ರಲ್ಲಿ ಭಾರತದ ಬಳಿ ಇಲ್ಲದೇ ಇದ್ದ ಕ್ರಯೋಜನಿಕ್ ಇಂಜಿನ್ ತಂತ್ರಜ್ಞಾನವನ್ನು ವಿದೇಶಕ್ಕೆ ಹೇಗೆ ಮಾರಲು ಸಾಧ್ಯ ಎನ್ನುವುದು ನಂಬಿ ನಾರಾಯಣನ್ ಪ್ರಶ್ನೆ.
ಇನ್ನೂ ಭಾರತದ ಇಸ್ರೋ ಕ್ರಯೋಜನಿಕ್ ಇಂಜಿನ್ ನಿರ್ಮಾಣದ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸುತ್ತಿತ್ತು. ಆಮೆರಿಕಾ, ಇಂಗ್ಲೆಂಡ್ ಸೇರಿದಂತೆ ಬಲಾಢ್ಯ ದೇಶಗಳಿಂದ ಯಾವುದೇ ಆರ್ಥಿಕ ದಿಗ್ಭಂಧನ, ನಿರ್ಬಂಧಗಳನ್ನು ಭಾರತದ ಮೇಲೆ ಹೇರಬಾರದೆಂದು ಮುನ್ನೆಚ್ಚರಿಕೆ ವಹಿಸಿತ್ತು. ಹೀಗಾಗಿ ವಿಕಾಸ್ ಇಂಜಿನ್ ಡಿಸೈನ್ ಅನ್ನು ನಿರ್ಮಾಣದ ಕಂಟ್ರಾಕ್ಟರ್ಗಳಿಗೆ ಇಸ್ರೋ ಸಂಸ್ಥೆಯೇ ನೀಡಿತ್ತು. ಹೀಗಾಗಿ ವಿಕಾಸ್ ಇಂಜಿನ್ ಡಿಸೈನ್ ರಹಸ್ಯವಾಗಿ ಉಳಿದಿರಲಿಲ್ಲ. ವಿಕಾಸ್ ಇಂಜಿನ್ ಡಿಸೈನ್ ಟಾಪ್ ಸೀಕ್ರೆಟ್ ಎನ್ನುವುದೇ ಮೂರ್ಖತನ.
ಇನ್ನೂ ವಿಚಾರಣೆ ವೇಳೆ ಕೇರಳ ಪೊಲೀಸರು ನಂಬಿ ನಾರಾಯಣನ್ಗೆ ಪಾಕಿಸ್ತಾನದ ಖ್ಯಾತ ಅಣ್ವಸ್ತ್ರ ವಿಜ್ಞಾನಿ ಮೊಹಮ್ಮದ್ ಅಬ್ಬೂಸ್ ಸಲಾಂರನ್ನು ಯಾವಾಗ ಭೇಟಿಯಾಗಿದ್ದೀರಿ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ನಂಬಿ ನಾರಾಯಣನ್, ಪಾಕಿಸ್ತಾನ, ಎಲ್ಲರೂ ಗುರುತು ಹಿಡಿಯುವಂಥ ಪ್ರಸಿದ್ಧ ವಿಜ್ಞಾನಿಗಳನ್ನು ಭಾರತಕ್ಕೆ ಗೂಢಚಾರಿಕೆ ನಡೆಸಲು ಕಳಿಸಲು ಸಾಧ್ಯವೇ? ಭಾರತವು ಪಾಕಿಸ್ತಾನದಲ್ಲಿ ಗೂಢಚಾರಿಕೆ ನಡೆಸಲು ಅಬ್ದುಲ್ ಕಲಾಂ, ಯು.ಆರ್.ರಾವ್ ರಂಥ ಪ್ರಸಿದ್ದ ವಿಜ್ಞಾನಿಗಳನ್ನು ಕಳಿಸುತ್ತದೆಯೇ ಎಂದು ತರ್ಕದ ಮರುಪ್ರಶ್ನೆ ಹಾಕಿದ್ದರು.
ಇನ್ನೂ ನಂಬಿ ನಾರಾಯಣನ್ಗೆ ಆಗ 7,300 ರೂಪಾಯಿ ತಿಂಗಳ ಸಂಬಳ ಮಾತ್ರ ಬರುತ್ತಿತ್ತು. ಅವರ ಮನೆಯೂ ಸಾಧಾರಣವಾಗಿಯೇ ಇತ್ತು. ಯಾವುದೇ ಅದ್ದೂರಿ, ಅಡಂಬರ, ಐಷಾರಾಮಿತನ ಇರಲಿಲ್ಲ. ಇನ್ನೂ ಪ್ರಕರಣದಲ್ಲಿ ಭಾಗಿಯಾಗಿದ್ದ ಫೌಜಿಯಾ, ಮರೀಯಮ್ ರಶೀದ್ ಬಾರಿ ಹಣ ಗಳಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು. ಆದರೆ, ಫೌಜಿಯಾ ತನ್ನ ಮಗಳ ಶಿಕ್ಷಣಕ್ಕಾಗಿ 10ಸಾವಿರ ರೂಪಾಯಿ ಹಣ ಸಾಲ ಪಡೆದಿದ್ದರು. ಮರೀಯಮ್ ರಶೀದ್ ಹಣ ಇಲ್ಲದೇ, ಪರದಾಡುತ್ತಾ, ತನ್ನ ಚಿನ್ನದ ಸರ ಮಾರಿದ್ದರು. ಹೀಗಾಗಿ ಈ ಆರೋಪವೂ ಸುಳ್ಳು ಎಂದು ಸಾಬೀತಾಗಿತ್ತು.
ಸುಳ್ಳು ಪ್ರಕರಣದಲ್ಲಿ ನಂಬಿ ನಾರಾಯಣನ್‌ರನ್ನು ಸಿಲುಕಿ ಹಾಕಿಸಿದ್ದೇಕೆ?
ನಂಬಿ ನಾರಾಯಣನ್‌ರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿ ಹಾಕಿಸಿ, ಸುಖ, ಶಾಂತಿ, ಸಂತೋಷ, ಘನತೆ, ಗೌರವ, ವೃತ್ತಿ ಜೀವನವನ್ನು ಹಾಳು ಮಾಡಿದ್ದಾರೆ. ಹೀಗೆ ಮಾಡಿದ್ದೇಕೆ ಎನ್ನುವುದರ ಬಗ್ಗೆ 2 ಥಿಯರಿಗಳಿವೆ. ಮೊದಲನೇಯದಾಗಿ ಕೇರಳದ ಪೊಲೀಸ್ ಇನ್ಸ್ಪೆಕ್ಟರ್ ವಿಜಯನ್ ಅವರನ್ನು ಮಾಲ್ಡೀವ್ಸ್ ಮಹಿಳೆ ಮರೀಯಮ್ ರಶೀದ್ ವೀಸಾ ವಿಚಾರವಾಗಿ ಭೇಟಿಯಾಗಿದ್ದರು. ನನ್ನ ವೀಸಾ ಮುಗಿಯುತ್ತಿದೆ. ಮಾಲ್ಡೀವ್ಸ್ಗೆ ವಾಪಸ್ ಹೋಗಲು ಬಂದ್ ನಡೆಯುತ್ತಿರುವುದರಿಂದ ಅಡ್ಡಿಯಾಗಿದೆ ಎಂದು ಹೇಳಿದ್ದರು. ಆಗ ಇನ್ಸ್ಪೆಕ್ಟರ್ ವಿಜಯನ್ ಮಾಲ್ಡೀವ್ಸ್ ಮಹಿಳೆ ಮರಿಯಮ್ ರಶೀದಾಳಿಂದ ಲೈಂಗಿಕ ಸುಖ ಬಯಸಿದ್ದ.
ಲೈಂಗಿಕ ಸುಖ ನೀಡಲು ನಿರಾಕರಿಸಿದಾಗ, ಆಕೆಯನ್ನು ಬಂಧಿಸಿದ್ದಾರೆ. ಆಗ ಮರೀಯಮ್ ರಶೀದ್ ಡೈರಿಯಲ್ಲಿ ನಂಬಿ ನಾರಾಯಣನ್ ಕೈ ಕೆಳಗೆ ಕೆಲಸ ಮಾಡುತ್ತಿದ್ದ ಶಶಿಕುಮಾರನ್ ಎಂಬ ಇಸ್ರೋ ವಿಜ್ಞಾನಿಯ ಪೋನ್ ನಂಬರ್ ಸಿಕ್ಕಿತ್ತು. ಇದರ ಬಗ್ಗೆ ವಿಚಾರಿಸಿದಾಗ, ಶಶಿಕುಮಾರನ್ ಪತ್ನಿ ವೈದ್ಯೆ. ಅವರನ್ನು ಚಿಕಿತ್ಸೆ ಪಡೆಯಲು ಭೇಟಿಯಾಗಿದ್ದೆ ಎಂದು ಮರೀಯಮ್ ರಶೀದ್ ಹೇಳಿದ್ದರು. ಆದರೆ, ಇದನ್ನೇ ಬಳಸಿಕೊಂಡು ಪೊಲೀಸರು ಹಾಗೂ ರಾಜಕಾರಣಿಗಳು ಆಟವಾಡಿದ್ದರು. ಆಗ ಕೇರಳದಲ್ಲಿ ಕೆ.ಕರುಣಾಕರನ್ ಸರ್ಕಾರ ಆಸ್ತಿತ್ವದಲ್ಲಿತ್ತು. ಕೆ.ಕರುಣಾಕರನ್ ಅವರನ್ನ ಅಧಿಕಾರದಿಂದ ಕೆಳಗಿಳಿಸಿ, ಎ.ಕೆ.ಆ್ಯಂಟನಿ ಅವರನ್ನು ಸಿಎಂ ಮಾಡಲು ಯುಡಿಎಫ್ ನಾಯಕರೇ ಈ ಪ್ರಕರಣ ಬಳಸಿಕೊಂಡರು ಎಂದು ನಂಬಿ ನಾರಾಯಣನ್ ಹೇಳಿದ್ದಾರೆ.
ಎರಡನೇಯದಾಗಿ ಇಂಟಲಿಜೆನ್ಸ್ ಬ್ಯೂರೋ ಡೆಪ್ಯುಟಿ ಡೈರೆಕ್ಟರ್ ಆಗಿದ್ದ ಆರ್.ಬಿ.ಶ್ರೀಕುಮಾರ್ ಆಮೆರಿಕಾದ ಗುಪ್ತಚರ ಸಂಸ್ಥೆಯಾದ ಸಿಐಎ ಸಂಸ್ಥೆಯ ಕೈಗೊಂಬೆಯಾಗಿ ಕೆಲಸ ಮಾಡಿ ನನ್ನನ್ನು ಈ ಸುಳ್ಳು ಪ್ರಕರಣದಲ್ಲಿ ಸಿಲುಕಿ ಹಾಕಿಸಿದ್ದರು ಎನ್ನುವುದು ನಂಬಿ ನಾರಾಯಣನ್ ಅಭಿಪ್ರಾಯ. ಆದರೆ, ತಾವು ನಂಬಿ ನಾರಾಯಣನ್ ರನ್ನು ವಿಚಾರಣೆಯೇ ನಡೆಸಿಲ್ಲ ಎಂದು ಐಬಿ ನಿವೃತ್ತ ಅಧಿಕಾರಿ ಆರ್.ಬಿ.ಶ್ರೀಕುಮಾರ್ ಹೇಳಿದ್ದಾರೆ.
ಆಮೆರಿಕಾಕ್ಕೆ ಭಾರತವು ಕಡಿಮೆ ವೆಚ್ಚದಲ್ಲಿ ಕ್ರಯೋಜನಿಕ್ ರಾಕೆಟ್ ಇಂಜಿನ್ ನಿರ್ಮಾಣ ಮಾಡುವುದು ಇಷ್ಟವಿರಲಿಲ್ಲ. ಹೀಗಾಗಿ ಕ್ರಯೋಜನಿಕ್ ಇಂಜಿನ್ ನಿರ್ಮಾಣ ಮಾಡುತ್ತಿದ್ದ ನನ್ನ ವಿರುದ್ಧ ಸುಳ್ಳು ಕೇಸ್ನ ಸಂಚು ಅನ್ನು ಸಿಐಎ ನಡೆಸಿದೆ. ಕೇರಳ ಪೊಲೀಸರು, ಇಂಟಲಿಜೆನ್ಸ್ ಬ್ಯೂರೋದ ಅಧಿಕಾರಿಗಳು ಗೊತ್ತಿದ್ದೋ ಗೊತ್ತಿಲ್ಲದೆಯೇ ಸಿಐಎ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ನಂಬಿ ನಾರಾಯಣನ್ ತಿಳಿಸಿದ್ದಾರೆ.
ನಂಬಿ ನಾರಾಯಣನ್ ಗೆ 1.8 ಕೋಟಿ ರೂ ಪರಿಹಾರ
ಸುಪ್ರೀಂಕೋರ್ಟ್‌ನ ಸಿಜೆಐ ಆಗಿದ್ದ ದೀಪಕ್ ಮಿಶ್ರಾ ನೇತೃತ್ವದ ನ್ಯಾಯ ಪೀಠವು ನಂಬಿ ನಾರಾಯಣನ್ ಅವರಿಗೆ 50 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿತು. ಕೇರಳದ ಸಿಪಿಐ ಸರ್ಕಾರವು 50 ಲಕ್ಷದ ಜೊತೆಗೆ 1.3 ಕೋಟಿ ಸೇರಿಸಿ 1.8 ಕೋಟಿ ರೂಪಾಯಿ ಪರಿಹಾರ ನೀಡಿತ್ತು.
1998 ರ ಸೆಪ್ಟಂಬರ್ ತಿಂಗಳಲ್ಲಿ ಎನ್ಎಚ್ಆರ್‌ಸಿ ಕೇರಳ ಸರ್ಕಾರಕ್ಕೆ ಒಂದು ಆದೇಶ ನೀಡಿತ್ತು. ಏನೆಂದರೇ, ನೀವು ಒಬ್ಬ ಮುಗ್ಧ ವ್ಯಕ್ತಿಯನ್ನು ಸಿಲುಕಿಸಿ ಅವರ ವೃತ್ತಿ ಜೀವನ ಹಾಳು ಮಾಡಿದ್ದೀರಿ. ಅವರ ಹೆಸರು ಕೆಡಿಸಿದ್ದೀರಿ, ಆದ್ದರಿಂದ ಅವರಿಗೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ತಿಳಿಸಿತು. ಇದನ್ನು ಪ್ರಶ್ನಿಸಿ ಕೇರಳ ಸರ್ಕಾರ, ಕೇರಳ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಆ ಮೇಲ್ಮನವಿಯನ್ನು ಭಾಗಶಃ ಒಪ್ಪಿ, 1 ಕೋಟಿಯಿಂದ 10 ಲಕ್ಷ ರೂಪಾಯಿಗೆ ಪರಿಹಾರ ಇಳಿಸಲಾಗಿತ್ತು. ಅದು ಸುಪ್ರೀಂಕೋರ್ಟ್ ಬಂದಿತ್ತು. ಇದರ ಮಧ್ಯೆ ಕೇರಳ ಸರ್ಕಾರ ಯಾಱರು ಭಾಗಿಯಾಗಿದ್ದಾರೋ, ಅವರಿಗೆಲ್ಲಾ ಕ್ಲೀನ್ ಚಿಟ್ ಕೊಟ್ಟಿತ್ತು. ಅದನ್ನೆಲ್ಲಾ ಪ್ರಶ್ನಿಸಿ ನಂಬಿ ನಾರಾಯಣನ್ ಸುಪ್ರೀಂಕೋರ್ಟ್ ಗೆ ಬಂದಿದ್ದರು ಎಂದು ಸುಪ್ರೀಂಕೋರ್ಟ್ ವಕೀಲ ಚಿನ್ಮಯ್ ದೇಶಪಾಂಡೆ ಹೇಳಿದ್ದಾರೆ.
ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವ
ಕೇಂದ್ರ ಸರ್ಕಾರವು ಇಸ್ರೋದಲ್ಲಿ ವಿಕಾಸ್ ಇಂಜಿನ್ ನಿರ್ಮಾಣದಲ್ಲಿ ನಂಬಿ ನಾರಾಯಣನ್ ಕೊಡುಗೆ ಪರಿಗಣಿಸಿ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ಭಾರತದ ಮೂರನೇ ಅತಿ ದೊಡ್ಡ ನಾಗರಿಕ ಗೌರವ. ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರಿಂದ ನಂಬಿ ನಾರಾಯಣನ್ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಪೊಲೀಸರು, ಐ.ಬಿ.ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ
ಸುಪ್ರೀಂಕೋರ್ಟ್ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಜಸ್ಟೀಸ್ ಡಿ.ಕೆ.ಜೈನ್ ಅವರನ್ನು ನೇಮಿಸಿತ್ತು. ಇವರ ವರದಿ ಆಧಾರದ ಮೇಲೆ ನಂಬಿ ನಾರಾಯಣನ್ ವಿರುದ್ಧ ಸುಳ್ಳು ಕೇಸ್ ದಾಖಲಿಸಿ, ಕಿರುಕುಳ ನೀಡಿದ ಕೇರಳ ಪೊಲೀಸರು, ಐ.ಬಿ. ಅಧಿಕಾರಿಗಳು ಸೇರಿದಂತೆ 18 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲು ಸಿಬಿಐಗೆ ಸುಪ್ರೀಂಕೋರ್ಟ್ ಆದೇಶಿಸಿದೆ.
2018ರಲ್ಲಿ ಸರ್ವೋಚ್ಚ ನ್ಯಾಯಾಲಯ ಒಂದು ಸಮಿತಿ ರಚಿಸಿತು. ನಿವೃತ್ತ ನ್ಯಾಯಾಧೀಶರಾದ ಡಿ.ಕೆ.ಜೈನ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಆ ಸಮಿತಿ ಈ ಪೂರ್ತಿ ಷಡ್ಯಂತ್ರದಲ್ಲಿ ಯಾಱರು ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ತನಿಖೆ ಆಗಬೇಕೆಂದು ಹೇಳಿತ್ತು. ಆ ವರದಿಯನ್ನು ಸುಪ್ರೀಂಕೋರ್ಟ್ ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಒಪ್ಪಿಕೊಂಡು ಸಿಬಿಐಗೆ ತನಿಖೆ ಮಾಡಲು ನಿರ್ದೇಶನ ನೀಡಿದೆ. ಈಗ ಬಂದಿರುವ ಮಾಹಿತಿ ಪ್ರಕಾರ, ಆಗಿನ ಪೊಲೀಸ್ ಮುಖ್ಯಸ್ಥ ಸಿ.ಬಿ. ಮ್ಯಾಥ್ಯೂ ಸೇರಿದಂತೆ, 18 ಜನ ಪೊಲೀಸ್ ಆಫೀಸರ್ ಮೇಲೆ ಎಫ್ಐಆರ್ ದಾಖಲಾಗಿದೆ ಎಂದು ಸುಪ್ರೀಂಕೋರ್ಟ್ ವಕೀಲ ಚಿನ್ಮಯ್ ದೇಶಪಾಂಡೆ ಟಿವಿ9ಡಿಜಿಟಲ್ಗೆ ತಿಳಿಸಿದ್ದಾರೆ.
ಇನ್ಸ್ಪೆಕ್ಟರ್ ವಿಜಯನ್, ಥಂಪಿ ದುರ್ಗದತ್, ಪೊಲೀಸ್ ಕಮೀಷನರ್ ರಾಜೀವನ್, ಕ್ರೈಂ ಡಿಐಜಿ ಸೆಬಿ ಮ್ಯಾಥ್ಯೂ, ಐಬಿ ಜಂಟಿ ನಿರ್ದೇಶಕ ಮ್ಯಾಥ್ಯೂ ಜಾನ್, ಕ್ರೈಂ ಡಿವೈಎಸ್ಪಿ ಕೆ.ಕೆ.ಜೋಸವಾ, ಐಬಿ ರವೀಂದ್ರ ನಾಯರ್, ಐ.ಬಿ, ಡೆಪ್ಯುಟಿ ಡೈರೆಕ್ಟರ್ ಆರ್.ಬಿ.ಶ್ರೀಕುಮಾರ್ ಸೇರಿದಂತೆ 18 ಮಂದಿ ಈಗ ಸಿಬಿಐ ಕೇಸ್ನಲ್ಲಿ ಆರೋಪಿಗಳಾಗಿದ್ದಾರೆ.
ಅಂದು ಸುಳ್ಳು ಕೇಸ್ ದಾಖಲಿಸಿದವರೇ ಈಗ ಆರೋಪಿಗಳಾಗಿ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಒಂದಿಬ್ಬರು ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.
ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ, ಕೇರಳಕ್ಕೆ ಭೇಟಿ ನೀಡಿರುವ ಸಿಬಿಐ ಅಧಿಕಾರಿಗಳು, ನಂಬಿ ನಾರಾಯಣನ್ ಅವರನ್ನು ಜೂನ್ 30ರಂದು ಭೇಟಿಯಾಗಿ ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇನ್ನೂ ನಂಬಿ ನಾರಾಯಣನ್ ಇನ್ನೂಳಿದ ಪೊಲೀಸ್, ಐಬಿ ಅಧಿಕಾರಿಗಳಿಗೆ ನಿರೀಕ್ಷಣಾ ಜಾಮೀನು ನೀಡಬಾರದೆಂದು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮನ್ನು ಹಿಂಸಿಸಿ, ದೌರ್ಜನ್ಯ ನಡೆಸಿದವರಿಗೆ ಈಗ ತಕ್ಕ ಶಿಕ್ಷೆ ಆಗಬೇಕೆಂದು ನಂಬಿ ನಾರಾಯಣನ್ ಕಾನೂನು ಹೋರಾಟಕ್ಕೆ ಇಳಿದಿದ್ದಾರೆ. ಇನ್ನು ನಂಬಿ ನಾರಾಯಣನ್ ನಿಜ ಜೀವನದ ಕಥೆ ಆಧರಿಸಿದ ‘ರಾಕೆಟ್ರಿ, ದಿ ನಂಬಿ ಎಫೆಕ್ಟ್’ ಸಿನಿಮಾ ಕೂಡ ಈಗ ನಿರ್ಮಾಣವಾಗಿದೆ.
ಇದನ್ನೂ ಓದಿ:
ನಂಬಿ ನಾರಾಯಣನ್ ಮೇಲೆ ಗೂಢಚರ್ಯೆಯ ತಪ್ಪು ಆರೋಪ: ಸಿಬಿಐಗೆ ತನಿಖೆ ಮುಂದುವರಿಸಲು ಸುಪ್ರೀಂಕೋರ್ಟ್ ಸೂಚನೆ
Rocketry: ರಾಕೆಟ್ರಿ ಸಿನಿಮಾ, ನಂಬಿ ನಾರಾಯಣನ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ
Published On - 1:35 pm, Sun, 4 July 21