ಸೌತ್ ಆಫ್ರಿಕಾಗೆ ಕಾಲಿಟ್ಟ ನರೇಂದ್ರ ಮೋದಿ; ಈ 3 ದಿನಗಳ ಭೇಟಿಯ ಅಜೆಂಡಾ ಏನು?

Narendra Modi gets great welcome at Johannesburg airport: ಪ್ರಧಾನಿ ನರೇಂದ್ರ ಮೋದಿ ಸೌತ್ ಆಫ್ರಿಕಾಗೆ 3 ದಿನಗಳ ಭೇಟಿ ನೀಡಿದ್ದಾರೆ. ನ. 21ರಂದು ಜೋಹಾನ್ಸ್​ಬರ್ಗ್ ಏರ್​ಪೋರ್ಟ್​ಗೆ ಬಂದಿಳಿದಿದ್ದಾರೆ. ಇದೇ ನಗರದಲ್ಲಿ ನ. 22 ಮತ್ತು 23ರಂದು ಜಿ20 ಶೃಂಗಸಭೆ ನಡೆಯಲಿದೆ. ಈ ಸಮಿಟ್​ನಲ್ಲಿ ಪಾಲ್ಗೊಳ್ಳುವ ಮೋದಿ, ಹಲವು ದ್ವಿಪಕ್ಷೀಯ ಸಭೆಗಳಲ್ಲೂ ಭಾಗಿಯಾಗಲಿದ್ದಾರೆ.

ಸೌತ್ ಆಫ್ರಿಕಾಗೆ ಕಾಲಿಟ್ಟ ನರೇಂದ್ರ ಮೋದಿ; ಈ 3 ದಿನಗಳ ಭೇಟಿಯ ಅಜೆಂಡಾ ಏನು?
ನರೇಂದ್ರ ಮೋದಿ

Updated on: Nov 21, 2025 | 7:57 PM

ಜೋಹಾನ್ಸ್​ಬರ್ಗ್, ನವೆಂಬರ್ 21: ದಕ್ಷಿಣ ಆಫ್ರಿಕಾ ದೇಶಕ್ಕೆ 3 ದಿನಗಳ ಭೇಟಿ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಶುಕ್ರವಾರ ಜೋಹಾನ್ಸ್​ಬರ್ಗ್ ನಗರಕ್ಕೆ ಕಾಲಿಟ್ಟರು. ಏರ್​ಪೋರ್ಟ್​ನಲ್ಲಿ ಪ್ರಧಾನಿವರಿಗೆ ಆತ್ಮೀಯ ಸ್ವಾಗತ ಸಿಕ್ಕಿತು. ಸಾಂಸ್ಕೃತಿಕ ನೃತ್ಯದ ಮೂಲಕ ಮೋದಿ ಆಗಮನವನ್ನು ಸೌತ್ ಆಫ್ರಿಕನ್ನರು ಸಂಭ್ರಮಿಸಿದರು. ಸೌತ್ ಆಫ್ರಿಕಾದ ಅತಿದೊಡ್ಡ ನಗರವೆನಿಸಿದ ಇಲ್ಲಿಯೇ ಜಿ20 ಶೃಂಗಸಭೆ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿ ಅವರು ಜೋಹಾನ್ಸ್​ಬರ್ಗ್ ನಗರಕ್ಕೆ ಆಗಮಿಸಿದ್ದಾರೆ.

ಜೋಹಾನ್ಸ್​ಬರ್ಗ್​ನಲ್ಲಿ ನವೆಂಬರ್ 22 ಮತ್ತು 23ರಂದು ಜಿ20 ಸಮಿಟ್ ನಡೆಯುತ್ತದೆ. ಇದು 20ನೇ ಜಿ20 ಶೃಂಗಸಭೆ. ಗ್ಲೋಬಲ್ ಸೌತ್ ಎಂದು ಬಣ್ಣಿಸಲಾಗುವ ಅಭಿವೃದ್ಧಿಶೀಲ ದೇಶಗಳಲ್ಲಿ ನಡೆಯುವ ಸತತ ನಾಲ್ಕನೇ ಜಿ20 ಶೃಂಗಸಭೆಯೂ ಇದು ಹೌದು. ಆಫ್ರಿಕನ್ ನೆಲದಲ್ಲಿ ನಡೆಯುವ ಮೊದಲ ಜಿ20 ಸಮಿಟ್ ಇದು. ಆಫ್ರಿಕನ್ ದೇಶಗಳನ್ನು ಜಿ20 ಗುಂಪಿಗೆ ಸೇರಿಸಲು ಭಾರತದ ಪಾತ್ರ ಪ್ರಮುಖವಾಗಿತ್ತು ಎಂಬುದು ವಿಶೇಷ. ಈ ವರ್ಷದ ಜಿ20 ಶೃಂಗಸಭೆಯ ಥೀಮ್ ‘ಐಕ್ಯತೆ, ಸಮಾನತೆ ಮತ್ತು ಸುಸ್ಥಿರತೆ’ ಎಂದು ನಿಗದಿ ಮಾಡಲಾಗಿದೆ.

ಇದನ್ನೂ ಓದಿ: ಬಿಹಾರದ ನೂತನ ಮಂತ್ರಿಗಳಿಗೆ ಖಾತೆ ಹಂಚಿಕೆ; ನಿತೀಶ್ ಕುಮಾರ್ ಸಂಪುಟದ ಸಚಿವರ ಪಟ್ಟಿ ಇಲ್ಲಿದೆ

16ನೇ ಶೃಂಗಸಭೆ ಇಟಲಿಯಲ್ಲಿ ನಡೆದಿತ್ತು. ಅದಾದ ಬಳಿಕ ನಾಲ್ಕು ಶೃಂಗಸಭೆಗಳು ಭಾರತವೂ ಸೇರಿ ನಾಲ್ಕು ಅಭಿವೃದ್ಧಿಶೀಲ ದೇಶಗಳಲ್ಲಿ ನಡೆದಿವೆ. 17ನೇ ಸಭೆ ಇಂಡೋನೇಷ್ಯಾದಲ್ಲಿ ನಡೆದರೆ, 18ನೇ ಜಿ20 ಸಮಿಟ್ 2023ರಲ್ಲಿ ಭಾರತದಲ್ಲಿ ನಡೆದಿತ್ತು. ಅದಾದ ಬಳಿಕ 2024ರ ಜಿ20 ಸಭೆ ಬ್ರಿಜಿಲ್​ನಲ್ಲಿ ನಡೆಯಿತು. ಈಗ ಈ ವರ್ಷ ಸೌತ್ ಆಫ್ರಿಕಾದಲ್ಲಿ ನಡೆಯುತ್ತಿದೆ. ಮುಂದಿನ ವರ್ಷ ಅಮೆರಿಕದಲ್ಲಿ ಈ ಸಮಿಟ್ ನಡೆಯುತ್ತದೆ.

ನರೇಂದ್ರ ಮೋದಿ ಜೋಹಾನ್ಸ್​ಬರ್ಗ್ ಏರ್ಪೋರ್ಟ್​ನಲ್ಲಿ ಸ್ವಾಗತ ಪಡೆದಿರುವುದು

ಟ್ರಂಪ್, ಜಿನ್​ಪಿಂಗ್ ಗೈರು?

ಜಿ20 ಗುಂಪಿನಲ್ಲಿರುವ ಎರಡು ಅತಿ ಬಲಿಷ್ಠ ದೇಶಗಳ ನಾಯಕರು ಈ ಬಾರಿಯ ಶೃಂಗಸಭೆಗೆ ಗೈರಾಗಲಿರುವುದು ಗಮನಾರ್ಹ ಸಂಗತಿ. ಸೌತ್ ಆಫ್ರಿಕಾದಲ್ಲಿ ಬಿಳಿಯ ಸಮುದಾಯದವರನ್ನು ತುಚ್ಛವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಹೇಳುತ್ತಿರುವ ಡೊನಾಲ್ಡ್ ಟ್ರಂಪ್ ಅವರು ಜಿ20 ಸಮಿಟ್ ಅನ್ನು ಬಾಯ್ಕಾಟ್ ಮಾಡಿದ್ದಾರೆ. ಇನ್ನೊಂದೆಡೆ, ಚೀನಾ ಅಧ್ಯಕ್ಷ ಶಿ ಜಿನ್​ಪಿಂಗ್ ಅವರೂ ಕೂಡ ಪ್ರವಾಸ ವೇಳಾಪಟ್ಟಿ ಕಡಿಮೆಗೊಳಿಸುವ ಉದ್ದೇಶದಿಂದ ಶೃಂಗಸಭೆ ಪ್ರವಾಸಕ್ಕೆ ಕತ್ತರಿ ಹಾಕಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸದ್ಯ ಷೇರುಪೇಟೆ ಸುರಕ್ಷಿತ ಇಲ್ಲ; ಕಾದಿದೆ ವಿಪತ್ತು: ವ್ಯಾಲ್ಯುಯೇಶನ್ ಎಕ್ಸ್​ಪರ್ಟ್ ದಾಮೋದರನ್ ಆತಂಕ

ನರೇಂದ್ರ ಮೋದಿ ಅಜೆಂಡಾಗಳೇನು?

ಜಿ20 ಶೃಂಗಸಭೆಯಲ್ಲಿ ನಡೆಯುವ ಮೂರು ಪ್ರಮುಖ ಅಧಿವೇಶಗಳಲ್ಲಿ, ಎಲ್ಲದರಲ್ಲೂ ನರೇಂದ್ರ ಮೋದಿ ಪಾಲ್ಗೊಂಡು ಮಾತನಾಡುವ ನಿರೀಕ್ಷೆ ಇದೆ. ಸಮಗ್ರ ಆರ್ಥಿಕ ಬೆಳವಣಿಗೆ, ಹವಾಮಾನ ಸವಾಲುಗಳು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ನ ಅಪಾಯ ಮತ್ತು ಅವಕಾಶಗಳು ಈ ವಿಚಾರಗಳ ಬಗ್ಗೆ ಗಮನ ಇಟ್ಟು ಮೋದಿ ಮಾತನಾಡಬಹುದು.

ಹಾಗೆಯೇ, ನರೇಂದ್ರ ಮೋದಿ ಅವರು ಹಲವು ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಬಹುದು. ಭಾರತ, ಬ್ರೆಜಿಲ್ ಮತ್ತು ಸೌತ್ ಆಫ್ರಿಕಾ ನಾಯಕರ ಸಭೆ ಕೂಡ ಈ ವೇಳೆ ನಡೆಯಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:52 pm, Fri, 21 November 25