ದೆಹಲಿ: ಶ್ರೀಲಂಕಾದ (Sri Lanka) ನೂತನ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ (Ranil Wickremesinghe) ಅವರನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ಸ್ಥಾಪಿತ ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ದ್ವೀಪ ರಾಷ್ಟ್ರದ ಜನರ ಸ್ಥಿರತೆ ಮತ್ತು ಆರ್ಥಿಕ ಚೇತರಿಕೆಯ ಅನ್ವೇಷಣೆಗೆ ಭಾರತ ಬೆಂಬಲ ನೀಡುವುದನ್ನು ಮುಂದುವರಿಸಲಿದೆ ಎಂದು ಹೇಳಿರುವುದಾಗಿ ಭಾರತದ ಹೈಮಿಷನ್ ತಿಳಿಸಿದೆ. 73ರ ಹರೆಯದ ವಿಕ್ರಮಸಿಂಘೆ ಅವರು ಶಾಸಕರಿಂದ ಆಯ್ಕೆಯಾದ ನಂತರ ಶ್ರೀಲಂಕಾದ ಎಂಟನೇ ಅಧ್ಯಕ್ಷರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಚುನಾಯಿತ ಅಧ್ಯಕ್ಷರಿಗೆ ಅಭಿನಂದನಾ ಪತ್ರವನ್ನು ಕಳುಹಿಸಿದ್ದಾರೆ” ಎಂದು ಕೊಲಂಬೊದಲ್ಲಿರುವ ಭಾರತದ ಹೈಕಮಿಷನ್ ಟ್ವೀಟ್‌ನಲ್ಲಿ ತಿಳಿಸಿದೆ. ಸ್ಥಾಪಿತ ಪ್ರಜಾಸತ್ತಾತ್ಮಕ ವಿಧಾನಗಳು, ಸಂಸ್ಥೆಗಳು ಮತ್ತು ಸಾಂವಿಧಾನಿಕ ಚೌಕಟ್ಟಿನ ಮೂಲಕ ಸ್ಥಿರತೆ ಮತ್ತು ಆರ್ಥಿಕ ಚೇತರಿಕೆಗಾಗಿ ಶ್ರೀಲಂಕಾದ ಜನರಿಗೆ ಭಾರತವು ಬೆಂಬಲವನ್ನು ಮುಂದುವರಿಸುತ್ತದೆ ಎಂದು ಪ್ರಧಾನಿ ಪುನರುಚ್ಚರಿಸಿದ್ದಾರೆ ಎಂದು ಭಾರತದ ಹೈಕಮಿಷನ್ ಹೇಳಿದೆ.
ಜನರ ಪರಸ್ಪರ ಪ್ರಯೋಜನಕ್ಕಾಗಿ ಮತ್ತು ಭಾರತ ಮತ್ತು ಶ್ರೀಲಂಕಾ ನಡುವಿನ ಹಳೆಯ, ನಿಕಟ ಮತ್ತು ಸೌಹಾರ್ದ ಸಂಬಂಧಗಳನ್ನು ಬಲಪಡಿಸಲು ಶ್ರೀಲಂಕಾ ಅಧ್ಯಕ್ಷರೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕೊಲಂಬೊದಲ್ಲಿ ಭಾರತೀಯ ಹೈಕಮಿಷನರ್ ಗೋಪಾಲ್ ಬಾಗ್ಲೇ ಅವರು ಮಂಗಳವಾರ ಹೊಸದಾಗಿ ನೇಮಕಗೊಂಡ ಪ್ರಧಾನಿ ದಿನೇಶ್ ಗುಣವರ್ಧನ ಅವರನ್ನು ಭೇಟಿ ಮಾಡಿ ನಾಯಕತ್ವ, ಸರ್ಕಾರ ಮತ್ತು ಭಾರತದ ಜನರ ಶುಭಾಶಯಗಳನ್ನು ತಿಳಿಸಿದ್ದಾರೆ.
ದೀರ್ಘಾವಧಿಯ ಮತ್ತು ನಿಕಟವಾದ ಭಾರತ-ಶ್ರೀಲಂಕಾ ಸಂಬಂಧಗಳನ್ನು ಎಲ್ಲಾ ಕ್ಷೇತ್ರಗಳಲ್ಲಿ ಬಲಪಡಿಸಲು ವಿವಿಧ ಸಾಮರ್ಥ್ಯಗಳಲ್ಲಿನ ಮಾರ್ಗದರ್ಶನಕ್ಕಾಗಿ ಪ್ರಧಾನ ಮಂತ್ರಿಗೆ ಹೈಕಮಿಷನರ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ ಎಂದು ಭಾರತೀಯ ಹೈಕಮಿಷನ್ ಟ್ವೀಟ್ ಮಾಡಿದೆ. ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ ಶ್ರೀಲಂಕಾಕ್ಕೆ ಭಾರತ ಸರ್ಕಾರದ ಸುಮಾರು 4 ಶತಕೋಟಿ ಅಮೆರಿಕನ್ ಡಾಲರ್ ನೆರವು ನೀಡಿದೆ