ಟಿಸಿಎಸ್ ಮತಾಂತರ ಪ್ರಕರಣ: ಪ್ರಮುಖ ಆರೋಪಿ ನಿದಾ ಖಾನ್ ಕೊನೆಗೂ ಅರೆಸ್ಟ್

ಮಹಾರಾಷ್ಟ್ರದ ನಾಸಿಕ್ ಟಿಸಿಎಸ್ ಘಟಕದಲ್ಲಿ ಮತಾಂತರ ಮತ್ತು ಕಿರುಕುಳ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್​ಳನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಸಹೋದರನ ಪರವಾಗಿ ಮಹಿಳೆಯನ್ನು ಮತಾಂತರಕ್ಕೆ ಒತ್ತಾಯಿಸಿದ ಆರೋಪ ಆಕೆಯ ಮೇಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಸ್ಥೆಯ ಎಚ್‌ಆರ್ ಮುಖ್ಯಸ್ಥೆ ಸೇರಿದಂತೆ ಏಳು ಜನರನ್ನು ಬಂಧಿಸಲಾಗಿದ್ದು, ನಿದಾ ಖಾನ್​ ತಲೆಮರೆಸಿಕೊಂಡಿದ್ದಳು.

ಟಿಸಿಎಸ್ ಮತಾಂತರ ಪ್ರಕರಣ: ಪ್ರಮುಖ ಆರೋಪಿ ನಿದಾ ಖಾನ್ ಕೊನೆಗೂ ಅರೆಸ್ಟ್
ನಿದಾ ಖಾನ್
Image Credit source: TV9 Network

Updated on: May 08, 2026 | 9:28 AM

ಮುಂಬೈ, ಮೇ 7: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್​ನ (TCS) ಮಹಾರಾಷ್ಟ್ರದ ನಾಸಿಕ್‌ ಘಟಕದಲ್ಲಿ ನಡೆದಿದೆ ಎನ್ನಲಾದ ಮತಾಂತರ ಮತ್ತು ಕಿರುಕುಳ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್ ಅನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ನಿದಾ ಖಾನ್ ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದಳು. ಇದೀಗ ಆಕೆಯನ್ನು ಛತ್ರಪತಿ ಸಂಭಾಜಿನಗರದಲ್ಲಿ ಜಂಟಿ ಕಾರ್ಯಾಚರಣೆಯ ಮೂಲಕ ಬಂಧಿಸಲಾಗಿದೆ.

ಮುಖ್ಯಾಂಶಗಳು

  • ನಾಸಿಕ್ ಟಿಸಿಎಸ್ ಘಟಕದಲ್ಲಿ ಬಲವಂತದ ಧಾರ್ಮಿಕ ಮತಾಂತರಕ್ಕೆ ಯತ್ನಿಸಿದ ಆರೋಪ.
  • ತಲೆಮರೆಸಿಕೊಂಡಿದ್ದ ನಿದಾ ಖಾನ್ ಛತ್ರಪತಿ ಸಂಭಾಜಿನಗರದ ಫ್ಲಾಟ್‌ನಲ್ಲಿ ಪತ್ತೆ.
  • ಗರ್ಭಿಣಿ ಎಂಬ ಕಾರಣ ನೀಡಿ ನಿರೀಕ್ಷಣಾ ಜಾಮೀನು ಕೋರಿದ್ದರೂ ನ್ಯಾಯಾಲಯದಿಂದ ನಿರಾಕರಣೆ.

ನಾಸಿಕ್ ಎಸ್‌ಐಟಿ (SIT), ಛತ್ರಪತಿ ಸಂಭಾಜಿನಗರ ಪೊಲೀಸ್ ಕಮಿಷನರೇಟ್ ಮತ್ತು ಅಪರಾಧ ವಿಭಾಗದ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ. ನಿದಾ ಖಾನ್ ಕಳೆದ ನಾಲ್ಕು ದಿನಗಳಿಂದ ಛತ್ರಪತಿ ಸಂಭಾಜಿನಗರದ ನಾರೇಗಾಂವ್ ಪ್ರದೇಶದ ಕೈಸರ್ ಕಾಲೋನಿಯಲ್ಲಿರುವ ಫ್ಲಾಟ್‌ನಲ್ಲಿ ತನ್ನ ಪೋಷಕರು, ಸಹೋದರ ಮತ್ತು ಚಿಕ್ಕಮ್ಮನೊಂದಿಗೆ ತಂಗಿದ್ದಳು. ಪೊಲೀಸರು ಈ ಫ್ಲಾಟ್ ಮೇಲೆ ಎರಡು ದಿನಗಳಿಂದ ನಿಗಾ ಇಟ್ಟಿದ್ದರು. ಬಂಧನದ ನಂತರ ಆಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ನಾಸಿಕ್‌ಗೆ ಕರೆದೊಯ್ಯಲಾಗಿದೆ.

ತಾನು ಎರಡು ತಿಂಗಳ ಗರ್ಭಿಣಿ ಎಂದು ಹೇಳಿಕೊಂಡಿದ್ದ ನಿದಾ ಖಾನ್, ಬಂಧನದಿಂದ ರಕ್ಷಣೆ ಕೋರಿ ನಾಸಿಕ್ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಳು. ಆದರೆ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ನ್ಯಾಯಾಲಯವು ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು.

ಟಿಸಿಎಸ್ ಕಂಪನಿಯಿಂದ ಅಮಾನತು

ನಿದಾ ಖಾನ್ 2021 ರ ಡಿಸೆಂಬರ್​ನಲ್ಲಿ ‘ಪ್ರೊಸೆಸ್ ಅಸೋಸಿಯೇಟ್’ ಆಗಿ ಕಂಪನಿಗೆ ಸೇರಿದ್ದರು. ಪ್ರಕರಣ ದಾಖಲಾದ ಬೆನ್ನಲ್ಲೇ ಏಪ್ರಿಲ್ 9 ರಂದು ಕಂಪನಿಯು ಆಕೆಯನ್ನು ಅಮಾನತುಗೊಳಿಸಿದೆ. ಆಂತರಿಕ ವ್ಯವಸ್ಥೆ ಮತ್ತು ನೆಟ್‌ವರ್ಕ್‌ಗೆ ಆಕೆಯ ಪ್ರವೇಶವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ವಿಶೇಷವೆಂದರೆ, ವಿವಾದ ಸಾರ್ವಜನಿಕವಾಗುವ ಮೂರು ತಿಂಗಳ ಮೊದಲು ಆಕೆಯನ್ನು ನಾಸಿಕ್‌ನಿಂದ ಮುಂಬೈನ ಮಲಾಡ್ ಮತ್ತು ಹಿರಾನಂದಾನಿ ಕಚೇರಿಗಳಿಗೆ ವರ್ಗಾಯಿಸಲಾಗಿತ್ತು ಎಂದು ವರದಿಯಾಗಿದೆ.

ಟಿಸಿಎಸ್ ಮತಾಂತರ ಮತ್ತು ಕಿರುಕುಳ ಪ್ರಕರಣ ಹಿನ್ನೆಲೆ

ಈ ಇಡೀ ವಿವಾದವು ನಾಸಿಕ್ ಟಿಸಿಎಸ್ ಶಾಖೆಯ ಮಹಿಳಾ ಉದ್ಯೋಗಿಯೊಬ್ಬರು ನೀಡಿದ ದೂರಿನಿಂದ ಬೆಳಕಿಗೆ ಬಂದಿತು. ಸಹೋದ್ಯೋಗಿ ದಾನಿಶ್ ಶೇಖ್ ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದ ಎಂದು ಮಹಿಳೆ ಆರೋಪಿಸಿದ್ದರು. ಆದರೆ ದಾನಿಶ್ ಈಗಾಗಲೇ ವಿವಾಹಿತನಾಗಿದ್ದ ಎಂಬ ಅಂಶವನ್ನು ಮುಚ್ಚಿಡಲಾಗಿತ್ತು. ಆರೋಪಿ ನಿದಾ ಖಾನ್ ಈ ದಾನಿಶ್ ಶೇಖ್‌ನ ಸಹೋದರಿಯಾಗಿದ್ದು, ದೂರುದಾರ ಮಹಿಳೆಯ ಧರ್ಮದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿ, ಮತಾಂತರವಾಗುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ.

ಪೊಲೀಸ್ ತನಿಖೆ ತೀವ್ರಗೊಂಡಂತೆ, ಇನ್ನೂ ಏಳು ಮಹಿಳಾ ಉದ್ಯೋಗಿಗಳು ಮುಂದೆ ಬಂದು ಹಿರಿಯ ಸಹೋದ್ಯೋಗಿಗಳು ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಕಿರುಕುಳದ ಬಗ್ಗೆ ಮಾನವ ಸಂಪನ್ಮೂಲ ಇಲಾಖೆಗೆ (HR) ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂತ್ರಸ್ತೆಯರು ತಿಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್‌ಆರ್ ಮುಖ್ಯಸ್ಥೆ ಸೇರಿದಂತೆ ಒಟ್ಟು ಏಳು ಜನರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಟಿಸಿಎಸ್ ಮತಾಂತರ ಪ್ರಕರಣ: ತಾನು ಗರ್ಭಿಣಿ ಎಂದು ನ್ಯಾಯಾಲಯದ ಮೊರೆ ಹೋದ ಆರೋಪಿ ನಿದಾ ಖಾನ್

ಈ ನಡುವೆ ಟಿಸಿಎಸ್ ಸಂಸ್ಥೆಯು ಎಕ್ಸ್ (X) ಮೂಲಕ ಸ್ಪಷ್ಟನೆ ನೀಡಿ, ನಿದಾ ಖಾನ್ ಎಚ್‌ಆರ್ ಮ್ಯಾನೇಜರ್ ಆಗಿರಲಿಲ್ಲ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿ ಆಕೆಯ ಪಾತ್ರವಿರಲಿಲ್ಲ ಎಂದು ತಿಳಿಸಿತ್ತು. ಅಲ್ಲದೆ, ಈ ವಿಷಯದ ಬಗ್ಗೆ ಕಂಪನಿಯ ಆಂತರಿಕ ವಿಭಾಗಕ್ಕೆ ಯಾವುದೇ ದೂರುಗಳು ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us