ಭಾರತದಲ್ಲಿ ಪ್ರತಿ ವರ್ಷ ಮೇ 11ನೇ ತಾರೀಕು ರಾಷ್ಟ್ರೀಯ ತಂತ್ರಜ್ಞಾನ ದಿನ ಆಚರಿಸಲಾಗುತ್ತದೆ. ಎಂಜಿನಿಯರ್ಗಳು, ವಿಜ್ಞಾನಿಗಳು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳನ್ನು ಗೌರವಿಸುವ ಸಲುವಾಗಿ ಈ ದಿನ ಮೀಸಲಾಗಿದೆ. 2021ರ ಮೇ 11ನೇ ತಾರೀಕಿನಂದು 30ನೇ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ. ಭಾರತದ ತಾಂತ್ರಿಕ ಸಾಧನೆಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವಂಥ ದಿನ ಇದಾಗಿದೆ. 1998ನೇ ಇಸವಿಯ ಇದೇ ಮೇ 11ನೇ ತಾರೀಕು ಭಾರತದ ಪಾಲಿಗೆ ಮಹತ್ತರವಾದ ದಿನ. ರಾಜಸ್ಥಾನದ ಪೋಖ್ರಾನ್ನಲ್ಲಿ ಶಕ್ತಿ-1 ಅಣ್ವಸ್ತ್ರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಆ ಕಾರ್ಯಾಚರಣೆಯನ್ನು ಮುನ್ನಡೆಸಿದವರು ಮಾಜಿ ರಾಷ್ಟ್ರಪತಿ, ದಿವಂಗತರಾದ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ. ಆ ನಂತರ ದೇಶದಲ್ಲಿ ಇನ್ನಷ್ಟು ಅಣ್ವಸ್ತ್ರ ಪರೀಕ್ಷೆಗಳು ಯಶಸ್ವಿಯಾಗಿ ನಡೆದವು. ಇವೆಲ್ಲ ಆದ ನಂತರ ಆಗಿನ ಪ್ರಧಾನಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತವನ್ನು ಅಣ್ವಸ್ತ್ರ ರಾಷ್ಟ್ರ ಎಂದು ಘೋಷಣೆ ಮಾಡಿದರು. ಆ ಮೂಲಕ ಅಣ್ವಸ್ತ್ರ ಹೊಂದಿದ ದೇಶಗಳ ಸಾಲಿನಲ್ಲಿ ಆರನೆಯದಾಗಿ ಭಾರತ ಕೂಡ ಸೇರ್ಪಡೆಯಾಯಿತು.
ಅಣ್ವಸ್ತ್ರ ಪರೀಕ್ಷೆಯನ್ನು ಹೊರತುಪಡಿಸಿ, ಭಾರತವು ಅದೇ ದಿನ (ಮೇ 11) ಮೊದಲ ದೇಶೀಯ ವಿಮಾನವಾದ ಹಂಸ- 3 ಕೂಡ ಪರೀಕ್ಷಿಸಿತು. ಇದನ್ನು ರೂಪಿಸಿದ್ದು ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ. ಕರ್ನಾಟಕದ ಬೆಂಗಳೂರಿನಲ್ಲಿ ಈ ವಿಮಾನ ಸಿದ್ಧವಾಯಿತು. ಹಗುರವಾದ ಎರಡು ಆಸನದ ಈ ವಿಮಾನವನ್ನು ಸಿದ್ಧಪಡಿಸಿದ್ದು ಪೈಲಟ್ ತರಬೇತಿ, ಸರ್ವೇಲನ್ಸ್ ಮತ್ತು ಇತರ ಉದ್ದೇಶಗಳಿಗಾಗಿ.
ಇಂಥ ಪರೀಕ್ಷೆಗಳ ಸಾಲಿಗೆ ಡಿಫೆನ್ಸ್ ರೀಸರ್ಷ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಷನ್ (ಡಿಆರ್ಡಿಒ) ಕೂಡ ಕೊಡುಗೆ ನೀಡಿದೆ. ಇದೇ ದಿನದಂದು ನೆಲದಿಂದ ಆಕಾಶಕ್ಕೆ ಚಿಮ್ಮುವಂಥ ತ್ರಿಶೂಲ್ ಕ್ಷಿಪಣಿಯ ಯಶಸ್ವಿ ಪ್ರಯೋಗ ಮಾಡಿತು. ಇದರ ಯಶಸ್ವಿ ಪ್ರಯೋಗದ ನಂತರ ಭಾರತೀಯ ಸೇನೆ ಮತ್ತು ವಾಯು ಸೇನೆಗೆ ಸೇರ್ಪಡೆ ಮಾಡಲಾಯಿತು. ಈ ಎಲ್ಲ ತಂತ್ರಜ್ಞಾನ ಸಾಧನೆಗಳೂ ಮೇ 11ನೇ ತಾರೀಕಿನಂದೇ ಆಗಿವೆ. ಭಾರತ ಸರ್ಕಾರ ಮೇ 11ನೇ ತಾರೀಕಿನ ದಿನವನ್ನು ಅಧಿಕೃತವಾಗಿ ತಂತ್ರಜ್ಞಾನ ದಿನ ಎಂದು ಘೋಷಣೆ ಮಾಡಿದೆ.
1999ರಿಂದ ಈಚೆಗೆ ಪ್ರತಿ ವರ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ (ಟಿಡಿಬಿ)ಯಿಂದ ಈ ದಿನವನ್ನು ಆಚರಿಸಲಾಗುತ್ತದೆ. ವಿವಿಧ ಕಾರ್ಯಾಗಾರ, ಸೆಮಿನಾರ್ಗಳನ್ನು ಆಯೋಜಿಸಲಾಗುತ್ತದೆ. ಜತೆಗೆ ಮಂಡಳಿಯಿಂದ ಬೆಂಬಲಿಸಿದ ಕಂಪೆನಿಗಳ ತಂತ್ರಜ್ಞಾನದ ಪ್ರದರ್ಶನ ಆಗುತ್ತದೆ. ಈ ವರ್ಷದ ರಾಷ್ಟ್ರೀಯ ತಂತ್ರಜ್ಞಾನ ದಿನದ ಘೋಷ ವಾಕ್ಯ: ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ.
ಇದನ್ನೂ ಓದಿ: Balakot Air Strike | ಬಾಲಾಕೋಟ್ ದಾಳಿಗೆ 2 ವರ್ಷ; ಕೆಚ್ಚೆದೆಯ ಯೋಧರಿಗೆ ಸಲಾಂ ಹೇಳಿದ ನೆಟ್ಟಿಗರು
(Every year May 11 celebrates as National Technology Day in India. History, significance and this year theme explained here)