ಕೇರಳ ರಾಜಕೀಯದ ಕ್ರಾಂತಿಕಾರಿ ನಾಯಕಿ ಕೆ. ಆರ್.ಗೌರಿಯಮ್ಮ ನಿಧನ

KR Gouri Amma Passes Away: ಗೌರಿಯಮ್ಮ ಅವರ ಬದುಕು ಕೇರಳದ ರಾಜಕೀಯ ಇತಿಹಾಸವೂ ಆಗಿತ್ತು. ಕಾನೂನು ಅಧ್ಯಯನ ಮಾಡಿ ವಕೀಲರಾದ ನಂತರ ಗೌರಿಯಮ್ಮ ರಾಜಕೀಯ ಪ್ರವೇಶಿಸಿ ಆಧುನಿಕ ಕೇರಳದ ಇತಿಹಾಸದಲ್ಲಿ ಅನುಭವಿ ರಾಜಕಾರಣಿ ಎಂದೆನಿಸಿಕೊಂಡವರು.

ಕೇರಳ ರಾಜಕೀಯದ ಕ್ರಾಂತಿಕಾರಿ ನಾಯಕಿ ಕೆ. ಆರ್.ಗೌರಿಯಮ್ಮ ನಿಧನ
ಕೆ.ಆರ್.ಗೌರಿಯಮ್ಮ ( ಕೃಪೆ: ವಿಕಿಪೀಡಿಯ)
Follow us
ರಶ್ಮಿ ಕಲ್ಲಕಟ್ಟ
|

Updated on:May 11, 2021 | 12:04 PM

ತಿರುವನಂತಪುರಂ: ಕೇರಳದ ಕ್ರಾಂತಿಕಾರಿ ನಾಯಕಿ ಕೆ.ಆರ್ ಗೌರಿಯಮ್ಮ (102) ಮಂಗಳವಾರ ಬೆಳಗ್ಗೆ ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಗೌರಿಯಮ್ಮ ಅವರ ಮೃತದೇಹವನ್ನು ಬೆಳಿಗ್ಗೆ 10.45 ಕ್ಕೆ ಅಯ್ಯಂಕಾಳಿ ಹಾಲ್‌ನಲ್ಲಿ (ಹಳೆಯ ವಿಜೆಟಿ ಹಾಲ್) ಸಾರ್ವಜನಿಕ ದರ್ಶನಕ್ಕಿಡಲಾಗಿದೆ. ಕೊವಿಡ್ ಮಾರ್ಗಸೂಚಿಗಳನ್ನು ಪಾಲಿಸಿ ಅಂತ್ಯ ಸಂಸ್ಕಾರ ನಡೆಯಲಿದೆ. ಸಿಪಿಎಂ ಮುಖಂಡರಾದ ಎ.ವಿಜಯರಾಘವನ್, ಎಂ. ಎ. ಬೇಬಿ, ವಿ.ಶಿವಂಕುಟ್ಟಿ ಮತ್ತು ಜಿಲ್ಲಾ ಕಾರ್ಯದರ್ಶಿ ಅನವೂರ್ ನಾಗಪ್ಪನ್ ಅಂತಿಮ ನಮನ ಸಲ್ಲಿಸಿ ಅಂತ್ಯ ಸಂಸ್ಕಾರದ ಸಿದ್ಧತೆ ನಡೆಸಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಸಾರ್ವಜನಿಕ ದರ್ಶನಕ್ಕಿರಿಸಿ ನಂತರ ಮೃತದೇಹವನ್ನು ಆಲಪ್ಪುಳಕ್ಕೆ ಕೊಂಡೊಯ್ಯಲಾಗುವುದು. ಸಂಜೆ 6 ಗಂಟೆಗೆ ಅಂತ್ಯ ಸಂಸ್ಕಾರ ನಡೆಯಲಿದೆ.

ಗೌರಿಯಮ್ಮನ ರಾಜಕೀಯ ಪಯಣ ಗೌರಿಯಮ್ಮ ಅವರ ಬದುಕು ಕೇರಳದ ರಾಜಕೀಯ ಇತಿಹಾಸವೂ ಆಗಿತ್ತು. ಕಾನೂನು ಅಧ್ಯಯನ ಮಾಡಿ ವಕೀಲರಾದ ನಂತರ ಗೌರಿಯಮ್ಮ ರಾಜಕೀಯ ಪ್ರವೇಶಿಸಿ ಆಧುನಿಕ ಕೇರಳದ ಇತಿಹಾಸದಲ್ಲಿ ಅನುಭವಿ ರಾಜಕಾರಣಿ ಎಂದೆನಿಸಿಕೊಂಡವರು . ಇಪ್ಪತ್ತೆಂಟನೇ ವಯಸ್ಸಿನಲ್ಲಿ ಕಮ್ಯುನಿಸ್ಟ್ ಪಕ್ಷದ ಸದಸ್ಯತ್ವ ಪಡೆದ ಗೌರಿಯಮ್ಮ ಕೇರಳದ ಇತಿಹಾಸದಲ್ಲಿ ಅತ್ಯಂತ ಅಸಾಧಾರಣ ವ್ಯಕ್ತಿಗಳಲ್ಲಿ ಒಬ್ಬರಾಗಿ ಮಿಂಚಿದರು. ಅವರು ವಿಧಾನಸಭೆಯ ಸದಸ್ಯರಾಗಿ 13 ಬಾರಿ ಆಯ್ಕೆಯಾಗಿದ್ದು ಆರು ಬಾರಿ ಸಚಿವರಾಗಿದ್ದಾರೆ. ಗೌರಿಯಮ್ಮ ಅವರ ಸಾಧನೆಗಳಲ್ಲಿ ಭೂ ಸುಧಾರಣಾ ಕಾಯ್ದೆ ಸೇರಿದಂತೆ ಹಲವಾರು ನಿರ್ಣಾಯಕ ಸಾಧನೆಗಳಿವೆ.

ಚೆರ್ತಲಾದ ಪಟ್ಟನಕ್ಕಾಡ್ ಅಂಧಕಾರನಾಳಿ ಗ್ರಾಮದಲ್ಲಿ ಕಳತ್ತಿಪ್ಪರಂಬಿಲ್ ನಲ್ಲಿ 1919 ಜುಲೈ 14 ರಂದು ಕೆ. ಎ. ರಾಮನ್ ಮತ್ತು ಪಾರ್ವತಿಯಮ್ಮ ದಂಪತಿಯ ಪುತ್ರಿಯಾಗಿ ಗೌರಿಯಮ್ಮ ಜನಿಸಿದರು. ತರಾವೂರ್ ತಿರುಮಲ ದೇವಸ್ವಂ ಶಾಲೆ ಮತ್ತು ಚೆರ್ತಲಾ ಇಂಗ್ಲಿಷ್ ಶಾಲೆಯಲ್ಲಿ ಪ್ರಾಥಮಿಕಶಿಕ್ಷಣ ಪಡೆದರು. ಎರ್ನಾಕುಲಂನ ಮಹಾರಾಜ ಕಾಲೇಜಿನಿಂದ ಇಂಟರ್ ಮಿಡಿಯೇಟ್, ಸೇಂಟ್ ತೆರೇಸಾ ಕಾಲೇಜಿನಿಂದ ಪದವಿ ಮತ್ತು ತಿರುವನಂತಪುರಂ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದರು. ಅವರು ತಮ್ಮ ಹಿರಿಯ ಸಹೋದರ ಸುಕುಮಾರನ್ ಅವರ ಪ್ರಭಾವದಿಂದ ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಗೌರಿಯಮ್ಮ ಈಳವ ಸಮುದಾಯದ ಮೊದಲ ಮಹಿಳಾ ವಕೀಲರಾದರು. ಚೆರ್ತಲಾ ನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಆರಂಭಿಸಿದ್ದರು.

ತಿರುವಾಂಕೂರು ದಿವಾನ್ ಸಿ.ಪಿ ರಾಮಸ್ವಾಮಿ ಅಯ್ಯರ್ ಆಳ್ವಿಕೆಯ ವಿರುದ್ಧದ ಪ್ರತಿಭಟನೆಗಳು ಮತ್ತು ಪುನ್ನಪ್ರ-ವಯಲಾರ್ ಆಂದೋಲನವು ಗೌರಿಯಮ್ಮ ಅವರನ್ನು ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಲು ಪ್ರೇರೇಪಿಸಿತು. ಪಿ. ಕೃಷ್ಣಪಿಳ್ಳೈ ಅವರು ಗೌರಿಯಮ್ಮನಿಗೆ ಕಮ್ಯುನಿಸ್ಟ್ ಪಕ್ಷದ ಸದಸ್ಯತ್ವ ನೀಡಿದ್ದು. 1948 ರಲ್ಲಿ ಅವರು ಚೆರ್ತಲಾ ತಾಲೂಕಿನ ತುರಾವೂರ್ ಕ್ಷೇತ್ರದಿಂದ ತಿರು-ಕೊಚ್ಚಿ ವಿಧಾನಸಭೆಗೆ ಸ್ಪರ್ಧಿಸಿರೆ ಸೋತರು. 1952 ಮತ್ತು 1954 ರಲ್ಲಿ ಅವರು ತಿರು-ಕೊಚ್ಚಿ ವಿಧಾನಸಭೆಗೆ ಹೆಚ್ಚಿನ ಬಹುಮತದೊಂದಿಗೆ ಆಯ್ಕೆಯಾದರು. ಸಂಯುಕ್ತ ಕೇರಳ ರಚನೆಯ ನಂತರ 1957 ರಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಗೌರಿಯಮ್ಮ ಕೇರಳದ ಮೊದಲ ಕಂದಾಯ ಸಚಿವರಾದರು. ಆ ಸಮಯದಲ್ಲಿಯೇ ಟಿ.ವಿ. ಥಾಮಸ್‌ ಜತೆ ಮದುವೆಯಾದರು. ಟಿ.ವಿ ಥಾಮಸ್ ಕೂಡ ಅದೇ ಸಚಿವ ಸಂಪುಟದಲ್ಲಿ ಸದಸ್ಯರಾಗಿದ್ದರು. 1964 ರಲ್ಲಿ ಪಕ್ಷ ವಿಭಜನೆಯಾದಾಗ ಟಿ.ವಿ ಥಾಮಸ್ ಮತ್ತು ಗೌರಿಯಮ್ಮ ಎರಡು ಬಣಗಳಲ್ಲಿ ವಿಭಜಿಸಲ್ಪಟ್ಟರು. ಗೌರಿಯಮ್ಮ ಸಿಪಿಎಂ ಮತ್ತು ಟಿ.ವಿ.ಥಾಮಸ್ ಗೆ ಸಿಪಿಐ ಜೊತೆಗಿದ್ದರು. ಇದಾದ ನಂತರ ಟಿ.ವಿ.ಥಾಮಸ್ ಜತೆಗಿನ ದಾಂಪತ್ಯ ಮುರಿದು ಬಿತ್ತು.

ಗೌರಿಯಮ್ಮ 17 ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ 13 ಬಾರಿ ಗೆದ್ದಿದ್ದಾರೆ. 2016 ರ ವಿಧಾನಸಭಾ ಚುನಾವಣೆಗಳನ್ನು ಹೊರತುಪಡಿಸಿ ಪ್ರತಿ ಬಾರಿಯೂ ಸ್ವಾತಂತ್ರ್ಯೋತ್ತರ ಚುನಾವಣೆಯಲ್ಲಿ ಸ್ಪರ್ಧಿಸಿದ ಗೌರಿಯಮ್ಮ, 1948, 1977, 2006 ಮತ್ತು 2011 ರಲ್ಲಿ ಮಾತ್ರ ಪರಾಭವಗೊಂಡಿದ್ದಾರೆ. ಗೌರಿಯಮ್ಮ ಅವರು ಆರು ಬಾರಿ ಸಚಿವರಾಗಿದ್ದಾರೆ. ಅವರು ಸಚಿವರಾಗಿದ್ದ ಅವಧಿಯಲ್ಲಿ, ಕೃಷಿ ಕಾನೂನು, ರೈತರ ಮಸೂದೆ, ಭೂರಹಿತರನ್ನು ಹೊರದಬ್ಬುವ ಮಸೂದೆ, ಗುತ್ತಿಗೆ ನಿಷೇಧ, ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿದ ಭೂಹೀನ ಜನರನ್ನು ಹೊರಹಾಕದಂತೆ ಆದೇಶ, ಮತ್ತು ಸರ್ಕಾರಿ ಭೂ ನಿಯಮಗಳ ಬಗ್ಗೆ ಕೆಲಸ ಮಾಡಿದರು. ಸರ್ಕಾರಿ ಜಮೀನಿನಲ್ಲಿ ಭೂರಹಿತರಿಗೆ ಜಮೀನು ಸಿಗುವಂತೆ ಮಾಡುವ ನಿಯಮಗಳ ಪರವಾಗಿ ಗೌರಿಯಮ್ಮ ಗಟ್ಟಿ ದನಿಯಾಗಿದ್ದರು.

ಸಿಪಿಎಂನೊಳಗಿನ ಭಿನ್ನಾಭಿಪ್ರಾಯಗಳು ಮತ್ತು ನಾಯಕತ್ವದೊಂದಿಗಿನ ಬಿರುಕಿನಿಂದಾಗಿ ಗೌರಿಯಮ್ಮ ಜನವರಿ 1, 1994 ರಂದು ಸಿಪಿಎಂ ತೊರೆದರು. ನಂತರ ಜೆಎಸ್ಎಸ್ ರಚನೆಯಾಯಿತು. ಅವರು ಯುಡಿಎಫ್ ನಲ್ಲಿದ್ದರು . 2016 ರಲ್ಲಿ ಅವರು ಯುಡಿಎಫ್ ನೊಂದಿಗೆ ಮುನಿಸಿಕೊಂಡು ಆ ಮೈತ್ರಿಕೂಟವನ್ನೂ ತೊರೆದರು. ಅವರು ಇತ್ತೀಚಿನ ದಿನಗಳಲ್ಲಿ ಸಿಪಿಎಂಗೆ ಹತ್ತಿರವಾಗಿದ್ದರು. ಪಿಣರಾಯಿ ವಿಜಯನ್ ಸೇರಿದಂತೆ ನಾಯಕರು ಗೌರಿಯಮ್ಮನನ್ನು ಭೇಟಿ ಮಾಡಿದ್ದರು. ಸಿಪಿಎಂ ವನಿತಾ ಮದಿಲ್ ಕಾರ್ಯಕ್ರಮ ಆಯೋಜಿಸಿದಾಗ ಗೌರಿಯಮ್ಮ ಅದರಲ್ಲಿ ಭಾಗಿಯಾಗಿದ್ದರು . ಅವರನ್ನು ಮತ್ತೆ ಪಕ್ಷಕ್ಕೆ ಕರೆಯಬೇಕು ಎಂದು ಸಿಪಿಎಂನಲ್ಲಿ ಚರ್ಚೆಗಳು ನಡೆದವು. ಆದರೆ ಕಾರ್ಯರೂಪಕ್ಕೆ ಬರಲಿಲ್ಲ. ನೇರವಂತಿಕೆ ಮತ್ತು ಗಟ್ಟಿಗಿತ್ತಿ ಗೌರಿಯಮ್ಮ ಕೇರಳ ಮತ್ತು ಕಮ್ಯುನಿಸ್ಟ್ ಪಕ್ಷದ ಇತಿಹಾಸದಲ್ಲಿ ಉಕ್ಕಿನ ಮಹಿಳೆ ಎಂದೇ ಗೌರವಿಸಲ್ಪಡುತ್ತಾರೆ.

(Kerala legendary politician Advocate KR Gouri Amma passes away)

ಇದನ್ನೂ ಓದಿ: ಫಲಿತಾಂಶ ವಿಶ್ಲೇಷಣೆ: 40 ವರ್ಷಗಳ ನಂತರ ಕೇರಳದಲ್ಲಿ ಕಮ್ಯೂನಿಸ್ಟ್ ಪಕ್ಷಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟ ಪಿಣರಾಯಿ ವಿಜಯನ್

Published On - 11:57 am, Tue, 11 May 21