ಬಡ, ಮಧ್ಯಮ ಆದಾಯದ ರಾಷ್ಟ್ರಗಳಿಗೆ ಲಸಿಕೆ ಪೂರೈಸುತ್ತಿರುವ ಗವಿ ಮೈತ್ರಿಕೂಟದಿಂದ ಭಾರತಕ್ಕೆ ಕೊರೊನಾ ಲಸಿಕೆಯ ನೆರವು

Skanda

|

Updated on: May 11, 2021 | 11:24 AM

GAVI: ಭಾರತದ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿರುವ ಗವಿ‌ ಮೈತ್ರಿಕೂಟ ಭಾರತಕ್ಕೆ 2.5 ಕೋಟಿ ಡೋಸ್ ಲಸಿಕೆಯನ್ನು ಸಬ್ಸಿಡಿ ದರದಲ್ಲಿ ಪೂರೈಸುವುದಾಗಿ ತಿಳಿಸಿದೆ. ಭಾರತಕ್ಕೆ ಲಸಿಕೆ ವಿತರಿಸುವುದಕ್ಕೆ ಕೋವ್ಯಾಕ್ಸ್ ಮಂಡಳಿಯ ಒಪ್ಪಿಗೆ ಸಿಕ್ಕಿದ್ದು, ತಕ್ಷಣವೇ ಸಬ್ಸಿಡಿ ದರದಲ್ಲಿ 2.5 ಕೋಟಿ ಡೋಸ್ ಲಸಿಕೆ ಬರಲಿದೆ.

ಬಡ, ಮಧ್ಯಮ ಆದಾಯದ ರಾಷ್ಟ್ರಗಳಿಗೆ ಲಸಿಕೆ ಪೂರೈಸುತ್ತಿರುವ ಗವಿ ಮೈತ್ರಿಕೂಟದಿಂದ ಭಾರತಕ್ಕೆ ಕೊರೊನಾ ಲಸಿಕೆಯ ನೆರವು
ಪ್ರಾತಿನಿಧಿಕ ಚಿತ್ರ

ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಪರಿಸ್ಥಿತಿ ಕೈ ಮೀರಿಹೋಗಿದ್ದು, ವೈದ್ಯಕೀಯ ವ್ಯವಸ್ಥೆಯಲ್ಲಿ ಅವ್ಯವಸ್ಥೆ ಉಂಟಾಗಿರುವುದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಮೇಲಾಗಿ ದೇಶದಲ್ಲಿ ಕೊರೊನಾ ಲಸಿಕೆಗೂ ಅಭಾವ ಸೃಷ್ಟಿಯಾಗಿದ್ದು ಹಲವೆಡೆ ಎರಡನೇ ಡೋಸ್ ಲಸಿಕೆಯೂ ಸಿಗುತ್ತಿಲ್ಲ. ಇತ್ತ ಮೇ 1ರಿಂದ 18ರಿಂದ 44ವರ್ಷ ವಯೋಮಾನದವರಿಗೂ ಲಸಿಕೆ ವಿತರಣೆ ಮಾಡುವುದಾಗಿ ಭಾರತ ಸರ್ಕಾರ ಹೇಳಿತ್ತಾದರೂ ಕೆಲ ರಾಜ್ಯಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ಕಡೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ. ಏತನ್ಮಧ್ಯೆ, ಬಡ, ಮಧ್ಯಮ ಆದಾಯದ ರಾಷ್ಟ್ರಗಳಿಗೆ ಲಸಿಕೆ ಪೂರೈಸುತ್ತಿರುವ ಅಂತಾರಾಷ್ಟ್ರೀಯ ಲಸಿಕೆ ಮೈತ್ರಿಕೂಟ ಗವಿ ಮೂಲಕ ಭಾರತಕ್ಕೆ ಲಸಿಕೆಯ ನೆರವು ನೀಡಲು ನಿರ್ಧರಿಸಲಾಗಿದೆ.

ಗವಿ ಎಂಬುದು ಒಂದು ಅಂತಾರಾಷ್ಟ್ರೀಯ ಲಸಿಕೆ ಮೈತ್ರಿಕೂಟವಾಗಿದೆ. ಮಾರಣಾಂತಿಕ ರೋಗಗಳಿಂದ, ಬಡರಾಷ್ಟ್ರಗಳ ಮಕ್ಕಳನ್ನು ರಕ್ಷಿಸಲು ಲಸಿಕೆ ನೀಡುವ ಕಾರ್ಯಕ್ರಮವೇ ಗವಿ. ಇದು ಮೂಲತಃ ಒಂದು ಸ್ವಯಂಸೇವಾ ಸಂಸ್ಥೆ. ಆದರೆ, ಇದು ವಿಶ್ವ ಆರೋಗ್ಯ ಸಂಸ್ಥೆಯ ಜತೆಗೆ ಕಾರ್ಯನಿರ್ವಹಿಸುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ಬ್ಯಾಂಕ್, ಯುನಿಸೆಫ್, ಲಸಿಕೆ ತಯಾರಿಕಾ ಕಂಪನಿಗಳು, ಲಸಿಕೆ ಅಭಿವೃದ್ಧಿ ಸಂಸ್ಥೆಗಳು, ಲಸಿಕೆ ದಾನ ನೀಡುವ ದೇಶಗಳು, ಬಿಲ್‌ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನ ಹಾಗೂ ಹಲವು ಎನ್‌ಜಿಒಗಳ ಸಹಯೋಗದಲ್ಲಿ ಕೆಲಸ ಮಾಡುತ್ತದೆ.

ಭಾರತದ ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿರುವ ಗವಿ‌ ಮೈತ್ರಿಕೂಟ ಭಾರತಕ್ಕೆ 2.5 ಕೋಟಿ ಡೋಸ್ ಲಸಿಕೆಯನ್ನು ಸಬ್ಸಿಡಿ ದರದಲ್ಲಿ ಪೂರೈಸುವುದಾಗಿ ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಗವಿ ಮೈತ್ರಿಕೂಟದ ವಕ್ತಾರರು ಭಾರತಕ್ಕೆ ಲಸಿಕೆ ವಿತರಿಸುವುದಕ್ಕೆ ಕೋವ್ಯಾಕ್ಸ್ ಮಂಡಳಿಯ ಒಪ್ಪಿಗೆ ಸಿಕ್ಕಿದ್ದು, ತಕ್ಷಣವೇ ಸಬ್ಸಿಡಿ ದರದಲ್ಲಿ 2.5 ಕೋಟಿ ಡೋಸ್ ಲಸಿಕೆ ಹಾಗೂ ಆರ್ಥಿಕ ಸಹಾಯವನ್ನೂ ನೀಡುವುದಾಗಿ ಹೇಳಿದ್ದಾರೆ.

12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ವಿತರಿಸಲು ಅನುಮತಿ ಸಿಕ್ಕಿಲ್ಲ ದೇಶದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡಲಾರಂಭಿಸಿದ್ದು 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊವ್ಯಾಕ್ಸಿನ್ ನೀಡುವುದಕ್ಕೆ ಒಪ್ಪಿಗೆ ಸಿಕ್ಕಿದೆ ಎನ್ನಲಾಗಿದೆ.

ಟ್ವಿಟರ್​ನಲ್ಲಿ ಭಾರೀ ಸದ್ದು ಮಾಡಿ ಹರಿದಾಡಲಾರಂಭಿಸಿದ ಈ ಸುದ್ದಿಯನ್ನು ಭಾರತ ಸರ್ಕಾರ ಅಲ್ಲಗಳೆದಿದೆ. ಸದರಿ ವಿಷಯದ ಕುರಿತಾಗಿ ಟ್ವಿಟರ್ ಮೂಲಕವೇ ಸ್ಪಷ್ಟನೆ ನೀಡಿದ ಸರ್ಕಾರ 12 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲು ಅನುಮತಿ ಸಿಕ್ಕಿದೆ ಎನ್ನುವುದು ವಾಸ್ತವಕ್ಕೆ ದೂರವಾದ ಸಂಗತಿ ಎಂದು ತಿಳಿಸಿದೆ. ಅಲ್ಲದೇ, ಸದ್ಯದ ಮಟ್ಟಿಗೆ ಕೇವಲ 18 ವರ್ಷ ಮೇಲ್ಪಟ್ಟವರು ಮಾತ್ರ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸ್ಪಷ್ಟವಾಗಿ ಹೇಳಿದೆ.

ಕೊರೊನಾ ಎರಡನೇ ಅಲೆಯ ಬೆನ್ನಲ್ಲೇ ಮೂರನೇ ಅಲೆ ಬರಲಿದೆ. ಅದು ಇದಕ್ಕಿಂತಲೂ ಪರಿಣಾಮಕಾರಿಯಾಗಿರಲಿದ್ದು ಮಕ್ಕಳಿಗೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳನ್ನು ಜೋಪಾನ ಮಾಡಿ ಎಂಬ ಸಂಗತಿ ಹೊರಬಿದ್ದ ಬೆನ್ನಲ್ಲೇ ಇಂಥದ್ದೊಂದು ಟ್ವೀಟ್ ಹರಿದಾಡಿದೆ. 12 ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳಿಗೂ ಈಗಿಂದಲೇ ಲಸಿಕೆ ಸಿಗಲಿದೆ ಎಂಬ ಸುದ್ದಿಯಿಂದ ಪೋಷಕರು ಸಹಜವಾಗಿ ಖುಷಿಗೊಂಡಿದ್ದು ವಿಷಯವನ್ನು ಎಲ್ಲೆಡೆ ಹಂಚಿಕೊಂಡಿದ್ದಾರೆ. ಆದರೆ, ಈಗ ಸರ್ಕಾರ ನಿಡಿರುವ ಸ್ಪಷ್ಟನೆ ಪ್ರಕಾರ ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಯಾವುದೇ ಅಧಿಕೃತ ಒಪ್ಪಿಗೆ ಸಿಕ್ಕಿಲ್ಲ.

A tweet has claimed that Bharat Biotech’s vaccine, Covaxin, has been approved for children above 12 years.#PIBFactCheck: This claim is #Fake. No such approval has been given by the Government of India. Currently, citizens above the age of 18 are eligible for #COVID19Vaccination pic.twitter.com/qdzBSfwllq

— PIB Fact Check (@PIBFactCheck) May 9, 2021

ಇದನ್ನೂ ಓದಿ: ಕೊರೊನಾ ಲಸಿಕೆ ಪೂರೈಕೆಗೆ ಪೇಟೆಂಟ್ ಸಡಿಲಿಕೆ ಜೊತೆಗೆ ಸಹಭಾಗಿತ್ವ ಕೂಡ ಮುಖ್ಯ; ಭಾರತ್ ಬಯೋಟೆಕ್ ಜಂಟಿ ನಿರ್ದೇಶಕಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada