ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ಸೋಲುಕಂಡಿದೆ. ಕಾಂಗ್ರೆಸ್ ಪಾಳಯದಲ್ಲೀಗ ಏನೂ ಸರಿ ಇಲ್ಲ. ಅಲ್ಲಿ ನಾಯಕತ್ವ ಬದಲಾವಣೆಯಾಗಬೇಕು ಎಂಬ ಕೂಗು ಕೇಳಿಬರುತ್ತಿದೆ. ಈ ಸಂಬಂಧ ಮೊನ್ನೆ ಮೂರ್ನಾಲ್ಕು ತಾಸಿನ ಸಭೆಯೂ ನಡೆದಿತ್ತು. ಅಷ್ಟಾದರೂ ಯಾವುದೇ ಹೊಸ ಕ್ರಮ ಇಲ್ಲ. ಬದಲಿಗೆ ಸೋನಿಯಾ ಗಾಂಧಿಯವರೇ ಮಧ್ಯಂತರ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಒಂದು ಹೊಸ ಬೆಳವಣಿಗೆಯಲ್ಲಿ ಸೋನಿಯಾ ಗಾಂಧಿಯವರು ಐದೂ ರಾಜ್ಯಗಳ ಅಂದರೆ, ಪಂಜಾಬ್, ಗೋವಾ, ಉತ್ತರಪ್ರದೇಶ, ಉತ್ತರಾಖಂಡ್, ಮಣಿಪುರಗಳ ಕಾಂಗ್ರೆಸ್ ಅಧ್ಯಕ್ಷರಿಗೆ ರಾಜೀನಾಮೆ ನೀಡಲು ಮಾರ್ಚ್ 15ರಂದು ಆದೇಶ ನೀಡಿದ್ದರು. ಅದರಂತೆ ಸದ್ಯ ನವಜೋತ್ ಸಿಂಗ್ ಸಿಧು ತಮ್ಮ ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿಯವರಿಗೆ ಸಲ್ಲಿಸಿದ್ದಾರೆ.
ತಮ್ಮ ರಾಜೀನಾಮೆ ಪತ್ರವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿರುವ ಸಿಧು, ಕಾಂಗ್ರೆಸ್ ಅಧ್ಯಕ್ಷರ ಅಪೇಕ್ಷೆಯ ಮೇರೆಗೆ ನಾನು ನನ್ನ ರಾಜೀನಾಮೆಯನ್ನು ಸಲ್ಲಿಸಿದ್ದೇನೆ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಐದೂ ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರ ಬಳಿ ಸೋನಿಯಾ ಗಾಂಧಿಯವರು ರಾಜೀನಾಮೆ ಕೇಳಿದ್ದನ್ನು ನಿನ್ನೆ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ದೃಢಪಡಿಸಿದ್ದರು. ಉತ್ತರಪ್ರದೇಶ, ಉತ್ತರಾಖಂಡ್, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರು ರಾಜೀನಾಮೆ ನೀಡುವಂತೆ ಸೋನಿಯಾ ಗಾಂಧಿ ಸೂಚಿಸಿದ್ದಾರೆ. ಈ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ ಮರುಸಂಘಟನೆ ಮಾಡುವ ನಿಟ್ಟಿನಲ್ಲಿ ಹೊಸ ಅಧ್ಯಕ್ಷರ ನೇಮಕ ಮಾಡಬೇಕಾಗಿದೆ ಎಂದು ಹೇಳಿದ್ದರು.
ಸಿಧು ಪ್ರತಿಕ್ರಿಯೆ ಏನಿತ್ತು?
ಪಂಜಾಬ್ ರಾಜ್ಯ ಕಾಂಗ್ರೆಸ್ ಕೈತಪ್ಪಲು ನವಜೋತ್ ಸಿಂಗ್ ಸಿಧು ಅವರೇ ಕಾರಣ ಎಂದು ಹೇಳಲಾಗುತ್ತಿದೆ. ಪಕ್ಷದಲ್ಲಿ ಇವರು ಸೃಷ್ಟಿಸಿದ ಆಂತರಿಕ ಅಸ್ಥಿರತೆಯಿಂದಾಗಿ ಚುನಾವಣೆಯಲ್ಲಿ ಬಲವಾದ ಪೆಟ್ಟು ತಿನ್ನುವಂತಾಗಿದೆ ಎನ್ನಲಾಗುತ್ತಿದೆ. ಪಂಜಾಬ್ ಸೋಲಿನ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ನವಜೋತ್ ಸಿಂಗ್ ಸಿಧು, ರಾಜ್ಯದಲ್ಲಿ ಆಮ್ ಆದ್ಮಿ ಪಾರ್ಟಿಯನ್ನು ಆಯ್ಕೆ ಮಾಡಿದ್ದ ಅಲ್ಲಿನ ಜನರನ್ನು ಶ್ಲಾಘಿಸಿದ್ದರು. ಅತ್ಯುತ್ತಮ ನಿರ್ಧಾರ ಮಾಡಿದ್ದಾರೆ ಎಂದೂ ಹೇಳಿದ್ದರು. ನೀವು ಕಾಂಗ್ರೆಸ್ನ ರಾಜ್ಯ ಅಧ್ಯಕ್ಷರಾಗಿ ಹೀಗೆ ಮಾತನಾಡುವುದು ಸರಿಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತ, ಜನರು ಬದಲಾವಣೆ ಬಯಸಿದ್ದಾರೆ. ಅವರನ್ನು ತಪ್ಪು ಎಂದು ಹೇಳಲಾಗುವುದಿಲ್ಲ. ಜನರ ಇಚ್ಛೆಯೇ ದೇವರ ಇಚ್ಛೆ. ಜನರ ಆದೇಶವನ್ನು ವಿನಮ್ರವಾಗಿ ಒಪ್ಪಿಕೊಂಡು, ಅದಕ್ಕೆ ತಲೆಬಾಗಬೇಕು ಎಂದು ಹೇಳಿದ್ದರು.
ಇದನ್ನೂ ಓದಿ: Punjab Election Results: ಪಂಜಾಬ್ನಲ್ಲಿ ಕಾಂಗ್ರೆಸ್ಗೆ ಹೀನಾಯ ಸೋಲು; ನವಜೋತ್ ಸಿಂಗ್ ಸಿಧು ರಾಜೀನಾಮೆ ಸಾಧ್ಯತೆ