ನವದೆಹಲಿ, ಫೆಬ್ರುವರಿ 18: ಬಿಜೆಪಿ ಸೇರಬಹುದು ಎಂಬ ವದಂತಿಗಳ ಮಧ್ಯೆ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು (Navjot Singh Sidhu) ರೈತರ ವಿಚಾರವಾಗಿ ಕೇಂದ್ರ ಸರ್ಕಾರವನ್ನು ತಿವಿದಿದ್ದಾರೆ. ರೈತರ ಪ್ರತಿಭಟನೆ (Farmers Protest) ನಡುವೆ ಇಂದು ಭಾನುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಧು, ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎನ್ನುವುದು ಹಸಿ ಸುಳ್ಳು ಎಂದು ಟೀಕಿಸಿದ್ದಾರೆ. ‘ರೈತರಿಗೆ ಎಂಎಸ್ಪಿ ಮತ್ತು ಆದಾಯವನ್ನು ಎರಡು ಪಟ್ಟು ಹೆಚ್ಚಿಸುತ್ತೇವೆ ಎನ್ನುತ್ತಾರೆ. ಈ ಪ್ರಪಂಚದಲ್ಲಿ ಇದಕ್ಕಿಂತ ದೊಡ್ಡ ಸುಳ್ಳು ಇದೆಯೇ?’ ಎಂದು ಕಾಂಗ್ರೆಸ್ನ ಪಂಜಾಬ್ ಘಟಕದ ಮಾಜಿ ಅಧ್ಯಕ್ಷರೂ ಆಗಿರುವ ಸಿಧು ಲೇವಡಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಎನ್ಡಿಎ ಸರ್ಕಾರದ ವಿರುದ್ಧ ಸಿಧು ಈ ಮೂಲಕ ಟೀಕಾ ಪ್ರಹಾರ ಮಾಡಿದ್ದಾರೆ. ನರೇಂದ್ರ ಮೋದಿ ಈ ಹಿಂದೆ ರೈತರ ಆದಾಯ ದ್ವಿಗುಣಗೊಳಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದರು. ಹಾಗೆಯೇ, ಕೆಲ ಬೆಳೆಗಳಿಗೆ ಯುಪಿಎ ಅವಧಿಯಲ್ಲಿ ಇದ್ದುದಕ್ಕಿಂತಲೂ ಎಂಎಸ್ಪಿ ಈಗ ಎರಡು ಪಟ್ಟು ಹೆಚ್ಚಾಗಿದೆ ಎಂದು ಕೆಲ ಬಿಜೆಪಿ ನಾಯಕರು ಹೇಳಿದ್ದುಂಟು. ಈ ಹಿನ್ನೆಲೆಯಲ್ಲಿ ನವಜ್ಯೋತ್ ಸಿಂಗ್ ಸಿಧು ಈ ಅಭಿಪ್ರಾಯಗಳನ್ನು ಹಸಿ ಸುಳ್ಳು ಎಂದು ಬಣ್ಣಿಸಿದ್ದು, ‘ಸರ್ಕಾರ ಎಂಎಸ್ಪಿಯನ್ನು 40 ರೂ ಹೆಚ್ಚಿಸಿ, ರೈತರಿಂದ 400 ರೂ ಕಸಿದುಕೊಳ್ಳುತ್ತಿದೆ,’ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: 2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಇದೇ ಮೋದಿ ಗ್ಯಾರಂಟಿ ಎಂದ ಪ್ರಧಾನಿ
‘ಈ ಸರ್ಕಾರ ರಚನೆ ಆದಾಗಿನಿಂದ ಸಾಸಿವೆ ಎಣ್ಣೆ ಬೆಲೆ ಎರಡು ಪಟ್ಟು ಹೆಚ್ಚಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆಗಳೂ ಹೆಚ್ಚಾಗಿವೆ. ಬಡವರಿಗೆ ಪ್ರತಿಯೊಂದು ವಸ್ತುವೂ ದುಬಾರಿಯಾಗಿ ಹೋಗಿದೆ. ಅಗತ್ಯ ವಸ್ತುಗಳನ್ನು ಖರೀದಿಸುವುದೂ ಈಗ ಕಷ್ಟಕರವಾಗಿದೆ.
ನವಜೋತ್ ಸಿಧು ನೀಡಿದ ಹೇಳಿಕೆ
#WATCH | Punjab: Congress leader Navjot Singh Sidhu says “…Farmer’s MSP and income will be doubled, is there a bigger lie than this in the world?…” pic.twitter.com/526QWBBQPX
— ANI (@ANI) February 18, 2024
‘ಡೀಸೆಲ್ ಬೆಲೆ 2013ರಲ್ಲಿ ಲೀಟರ್ಗೆ 38 ರೂ ಇದ್ದದ್ದು ಈಗ ಎರಡಕ್ಕೂ ಹೆಚ್ಚು ಪಟ್ಟು ಹೆಚ್ಚಾಗಿದೆ. ಇದೆಲ್ಲದರಿಂದ ಕೃಷಿ ಉತ್ಪಾದನೆಗೆ ಆಗುವ ವೆಚ್ಚ ಬಹಳ ಹೆಚ್ಚಾಗಿದೆ. ರೈತರಿಗೆ ಎಂಎಸ್ಪಿ ಹೆಚ್ಚಾಗಿರುವುದು ಮಾತ್ರ 40 ರೂ ಅಷ್ಟೇ. ಸರ್ಕಾರ ರೈತರಿಗೆ 40 ರೂ ಕೊಟ್ಟು, 400 ರೂ ಕಸಿದುಕೊಳ್ಳುತ್ತೆ,’ ಎಂದು ಸಿಧು ವಿವರಣೆ ನೀಡಿದ್ದಾರೆ.
ಇದನ್ನೂ ಓದಿ: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗ್ತಾರೆ, ದೇಶದಿಂದ ಭಯೋತ್ಪಾದನೆ, ನಕ್ಸಲಿಸಂ ಸಂಪೂರ್ಣವಾಗಿ ನಿರ್ಮೂಲನೆ ಮಾಡ್ತಾರೆ: ಅಮಿತ್ ಶಾ
ರೈತರು ನಡೆಸುತ್ತಿರುವ ದಿಲ್ಲಿ ಚಲೋ ಪ್ರತಿಭಟನೆಗೆ ಇಂದು ಆರನೇ ದಿನ. ರೈತರ ಮುಖಂಡರೊಂದಿಗೆ ಸರ್ಕಾರ ಈವರೆಗೆ ಮೂರು ಬಾರಿ ನಡೆಸಿರುವ ಮಾತುಕತೆ ಫಲಪ್ರದವಾಗಿಲ್ಲ. ಇಂದು ಭಾನುವಾರ ಸಂಜೆ 6 ಗಂಟೆಯ ನಂತರ ನಾಲ್ಕನೇ ಸುತ್ತಿನ ಮಾತುಕತೆ ಆಗಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:56 pm, Sun, 18 February 24