ಕಮಲ್ ನಾಥ್ ಜತೆಗೆ ಬಿಜೆಪಿ ಸೇರುವ ಹಾದಿಯಲ್ಲಿ ಇನ್ನೋರ್ವ ಕಾಂಗ್ರೆಸ್ ಹಿರಿಯ ಮುಖಂಡ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಾಗಿ ಕಟ್ಟಿದ್ದ ಇಂಡಿಯಾ ಒಕ್ಕೂಟದಿಂದ ಒಬ್ಬೊಬ್ಬರಾಗಿಯೇ ಹಿಂದೆ ಸರಿದು ಬಿಜೆಪಿ ಕಡೆ ಒಲವು ತೋರುತ್ತಿದ್ದಾರೆ. ಕಮಲ್ ನಾಥ್ ಬಿಜೆಪಿ ಕಡೆಗೆ ಮುಖ ಮಾಡಿದ್ದಾರೆ ಎನ್ನಲಾಗುತ್ತಿದ್ದು ಅವರ ಹಿಂದೆಯೇ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಕೂಡ ಅದೇ ಹಾದಿ ತುಳಿಯಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ನಾಥ್(Kamal Nath) ಬಿಜೆಪಿ ಸೇರುವ ಸುದ್ದಿ ಬೆನ್ನಲ್ಲೇ ಇನ್ನೋರ್ವ ಕಾಂಗ್ರೆಸ್ ಹಿರಿಯ ಮುಖಂಡ ಮನೀಶ್ ತಿವಾರಿ(Manish Tewari) ಕೂಡ ಬಿಜೆಪಿ ಸೇರಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕಮಲ್ ನಾಥ್ ಹಾಗೂ ಪುತ್ರ ನಕುಲ್ ನಾಥ್ ನವದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೀಗ ಮನೀಶ್ ತಿವಾರಿ ಕೂಡ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದ್ದು, ಅವರ ಕಚೇರಿ ಮಾತ್ರ ಇದೊಂದು ವದಂತಿಯಷ್ಟೇ ತಿವಾರಿಯವರು ಇಂತಹ ಯಾವುದೇ ನಿರ್ಧಾರ ಮಾಡಿಲ್ಲ ಈ ಸುದ್ದಿಯಲ್ಲಿ ಹುರುಳಿಲ್ಲ ಎಂದು ಹೇಳಿದೆ.
ಕಾಂಗ್ರೆಸ್ ಸಂಸದರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಪಂಜಾಬ್‌ನ ಲೂಧಿಯಾನ ಲೋಕಸಭಾ ಕ್ಷೇತ್ರದಿಂದ ಕಮಲ ಚಿಹ್ನೆಯಲ್ಲಿ ಸ್ಪರ್ಧಿಸಲು ಯೋಜಿಸುತ್ತಿದ್ದಾರೆ ಎಂದು ಮೂಲಗಳು ಈ ಹಿಂದೆ ಹೇಳಿಕೆ ನೀಡಿದ ನಂತರ ಸ್ಪಷ್ಟನೆ ಬಂದಿದೆ.
ಮತ್ತಷ್ಟು ಓದಿ: ಬಿಜೆಪಿಗೆ ಸೇರುತ್ತೀರಾ ಎಂದು ಕೇಳಿದಾಗ ಕಾಂಗ್ರೆಸ್ ನಾಯಕ ಕಮಲ್ ನಾಥ್ ಹೇಳಿದ್ದೇನು?
ಮನೀಶ್ ತಿವಾರಿ ಅವರು ತಮ್ಮ ಕ್ಷೇತ್ರದಲ್ಲಿದ್ದಾರೆ ಮತ್ತು ಅಲ್ಲಿ ಅಭಿವೃದ್ಧಿ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ. ನಿನ್ನೆ ರಾತ್ರಿ ಅವರು ಕಾಂಗ್ರೆಸ್ ಕಾರ್ಯಕರ್ತರ ಮನೆಯಲ್ಲಿ ತಂಗಿದ್ದರು ಎಂದು ಕಾಂಗ್ರೆಸ್ ಸಂಸದರ ಕಚೇರಿ ತಿಳಿಸಿದೆ. ಇದಕ್ಕೂ ಮುನ್ನ ಕಮಲ್ ನಾಥ್ ಅವರಿಗೆ ರಾಜ್ಯಸಭಾ ಸ್ಥಾನ ಸಿಗದಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು ಎಂದು ಮೂಲಗಳು ತಿಳಿಸಿವೆ.
230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ 163 ಸ್ಥಾನಗಳೊಂದಿಗೆ ಪ್ರಮುಖ ವಿಜಯವನ್ನು ಸಾಧಿಸಿದೆ, ಆದರೆ ಕಾಂಗ್ರೆಸ್ ಕೇವಲ 66 ಸ್ಥಾನಗಳನ್ನು ಗೆದ್ದಿದೆ, ಇದು 2018 ರಲ್ಲಿ ಗೆದ್ದ 114 ಸ್ಥಾನಗಳಿಗಿಂತ ಕಡಿಮೆಯಾಗಿದೆ. ಮನೀಶ್ ತಿವಾರಿ 17ನೇ ಲೋಕಸಭೆಯಲ್ಲಿ ಅವರು ಪಂಜಾಬ್‌ನ ಆನಂದಪುರ ಸಾಹಿಬ್ನಿಂದ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾದರು. ಯುಪಿಎ ಸರ್ಕಾರದ ಅವಧಿಯಲ್ಲಿ ಅವರು 2012 ರಿಂದ 2014ರವರೆಗೆ ಮಾಹಿತಿ ಮತ್ತು ಪ್ರಸಾರ ಸಚಿವರಾಗಿದ್ದರು.
2009ರಿಂದ 2014ರವರೆಗೆ ಲೂಧಿಯಾನದಿಂದ ಸಂಸದರಾಗಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ವಕ್ತಾರರೂ ಆಗಿದ್ದರು. ತಿವಾರಿ ಅವರು 1988ರಿಂದ 1993ರವರೆಗೆ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿದ್ದರು. 1998 ರಿಂದ 2000ರವರೆಗೆ ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
2004ರ ಲೋಕಸಭಾ ಚುನಾವಣೆಯಲ್ಲಿ ಸೋತರು ಆದರೆ 2009ರ ಲೋಕಸಭಾ ಚುನಾವಣೆಯಲ್ಲಿ ಶಿರೋಮಣಿ ಅಕಾಲಿದಳ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಗೆದ್ದರು. 2014ರ ಮಾರ್ಚ್ನಲ್ಲಿ ಅನಾರೋಗ್ಯದ ಕಾರಣ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರಲಿಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ