ದೆಹಲಿ: ಸೋನಿಯಾ ಗಾಂಧಿ ಯುಪಿಎ ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಯಲು ಬಯಸುತ್ತಿದ್ದರೂ, ಅದಕ್ಕೆ ನೂತನ ಸಾರಥಿ ಸಿಗುತ್ತಿಲ್ಲ. ಸೋನಿಯಾ ಪುತ್ರ ರಾಹುಲ್ ಗಾಂಧಿ ಯಾವ ಜವಾಬ್ದಾರಿ ವಹಿಸಿಕೊಳ್ಳಲೂ ಸುತಾರಾಂ ಒಪ್ಪುತ್ತಿಲ್ಲ. ಹೀಗಿರುವಾಗ ಇತ್ತೀಚೆಗೆ ಒಂದು ಸುದ್ದಿ ಹರಡಿತ್ತು.. ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಯುಪಿಎ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿದ್ದಾರೆ ಎಂಬುದೊಂದು ಮಾಹಿತಿ ಬಲ್ಲ ಮೂಲಗಳಿಂದಲೇ ಹೊರಬಿದ್ದು, ಚರ್ಚೆಗೆ ಕಾರಣವಾಗಿತ್ತು.. ರಾಜಕೀಯ ತಜ್ಞರು ಈ ಬಗ್ಗೆ ವಿಶ್ಲೇಷಣೆಯನ್ನೂ ಶುರು ಮಾಡಿದ್ದರು.
ಇಷ್ಟು ದಿನ ಶರದ್ ಪವಾರ್ ಕೂಡ ಈ ಬಗ್ಗೆ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇದೀಗ ಖಾಸಗಿ ಚಾನಲ್ವೊಂದಕ್ಕೆ ಸಂದರ್ಶನ ನೀಡಿದ ಅವರು, ನಾನು ಯುಪಿಎ ಅಧ್ಯಕ್ಷನಾಗುತ್ತೇನೆ ಎನ್ನುವ ಊಹಾಪೋಹಗಳಲ್ಲಿ ಹುರುಳಿಲ್ಲ. ನನಗೆ ಅದರಲ್ಲಿ ಯಾವುದೇ ಆಸಕ್ತಿಯೂ ಇಲ್ಲ. ನನಗೆ ಆ ಹುದ್ದೆ ಬೇಡ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಅಷ್ಟೇ ಅಲ್ಲ, ಈಗ ದೇಶದಲ್ಲಿ ರೈತರ ಪ್ರತಿಭಟನೆಯೇ ಸುದ್ದಿಯಾಗುತ್ತಿದೆ.. ಜನರ ಗಮನವನ್ನು ಇಲ್ಲಿಂದ ಬೇರೆಡೆಗೆ ಸೆಳೆಯುವ ಕಾರಣಕ್ಕೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನನ್ನ ಹೆಸರನ್ನು ಬಳಸಿಕೊಂಡು, ಹೀಗೆಲ್ಲ ಊಹಾಪೋಹಗಳನ್ನು ಹರಿಯಬಿಡುತ್ತಿದ್ದಾರೆ ಎಂದು ಪವಾರ್ ತಿಳಿಸಿದರು.
ನಾವು ಪ್ರಧಾನಿಯನ್ನು ಆಯ್ಕೆ ಮಾಡುತ್ತಿಲ್ಲ
ಶರದ್ ಪವಾರ್ ಯುಪಿಎ ನಾಯಕತ್ವ ವಹಿಸಿಕೊಳ್ಳುವ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರೂ ಪ್ರತಿಕ್ರಿಯೆ ನೀಡಿದ್ದರು. ನನಗನ್ನಿಸುವ ಪ್ರಕಾರ ಶರದ್ ಪವಾರ್ ಈ ಅಧ್ಯಕ್ಷ ಸ್ಥಾನಕ್ಕೇರಲು ಒಪ್ಪುವುದಿಲ್ಲ. ಯುಪಿಎ ಒಕ್ಕೂಟದಲ್ಲಿರುವ ಪಕ್ಷಗಳ ಸಭೆ ಕರೆಯವುದು, ಅಧ್ಯಕ್ಷತೆ ವಹಿಸುವುದು, ಒಕ್ಕೂಟದ ಅತಿದೊಡ್ಡ ಪಕ್ಷದ ನಾಯಕನ ಜವಾಬ್ದಾರಿಯಾಗಿರುತ್ತದೆ. ಅಂದರೆ ಸಹಜವಾಗಿಯೇ ಕಾಂಗ್ರೆಸ್ನವರೇ ಯುಪಿಎ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಏರಬೇಕು. ನಿಯಮದ ಪ್ರಕಾರ ಉಳಿದ ಪಕ್ಷಗಳಿಗೆ ಅವಕಾಶ ಇರುವುದಿಲ್ಲ. ಇದು ಶರದ್ ಪವಾರ್ಗೂ ಗೊತ್ತು. ಅಷ್ಟಕ್ಕೂ ಯುಪಿಎ ಅಧ್ಯಕ್ಷನ ಹುದ್ದೆಯೆಂದರೆ ಪ್ರಧಾನಿ ಹುದ್ದೆಯಲ್ಲ.. ನಾವು ಪ್ರಧಾನ ಮಂತ್ರಿಯನ್ನೇನೂ ಆಯ್ಕೆ ಮಾಡುತ್ತಿಲ್ಲ ಎಂದು ನಿನ್ನೆ ಟ್ವೀಟ್ ಮಾಡಿದ್ದರು.
ಯುಪಿಎ ಅಧ್ಯಕ್ಷ ಸ್ಥಾನಕ್ಕೆ ಸೋನಿಯಾ ನಂತರ ಶರದ್ ಪವಾರ್ ಆಯ್ಕೆ ಸಾಧ್ಯತೆ
NCP ಅಧ್ಯಕ್ಷ ಶರದ್ ಪವಾರ್ಗೆ 80ರ ಸಂಭ್ರಮ; ಹಿರಿಯ ನಾಯಕನಿಗೆ ಅದೃಷ್ಟ ತರಲಿದೆಯಾ ಈ ಬರ್ತ್ ಡೇ?
Published On - 3:00 pm, Mon, 28 December 20