ಎನ್‌ಸಿಪಿ ಶರದ್ ಪವಾರ್ ಬಣದ ಶಾಸಕ ಮತ್ತು ಮಾಜಿ ಸಚಿವ ಜಿತೇಂದ್ರ ಆವ್ಹಾದ್(Jitendra Awhad) ಶ್ರೀರಾಮನನ್ನು ಮಾಂಸಾಹಾರಿ ಎಂದು ಕರೆಯುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಇದಕ್ಕೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಜಿತೇಂದ್ರ ಅವರ ಈ ಹೇಳಿಕೆಗೆ ಸಂಬಂಧಿಸಿದಂತೆ ಅಜಿತ್ ಪವಾರ್ ಬಣದ ಎನ್‌ಸಿಪಿ ಕೂಡ ಮುಂಬೈನಲ್ಲಿ ಪ್ರತಿಭಟನೆ ನಡೆಸಿದೆ.
ಜಿತೇಂದ್ರ ಆವ್ಹಾದ್ ರಾಮ ನಮ್ಮವನು, ಬಹುಜನರಿಗೆ ಸೇರಿದವನು ಎಂದು ಹೇಳಿದ್ದಾರೆ. ರಾಮ ಭೇಟೆಯಾಡಿ ಪ್ರಾಣಿಗಳನ್ನು ತಿನ್ನುತ್ತಿದ್ದ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಾವು ರಾಮನನ್ನು ಆದರ್ಶ ಎಂದು ಪರಿಗಣಿಸಿ ಕುರಿ ಮಾಂಸ ತಿನ್ನುತ್ತೇವೆ. ಇದು ರಾಮನ ಆದರ್ಶ. 14 ವರ್ಷಗಳ ಕಾಲ ಕಾಡಿನಲ್ಲಿ ವಾಸಿಸುವ ವ್ಯಕ್ತಿಯು ಸಸ್ಯಾಹಾರವನ್ನು ಹುಡುಕಲು ಎಲ್ಲಿಗೆ ಹೋಗುತ್ತಾನೆ ಎಂದು ಅವರು ಹೇಳಿದರು. ರಾಮ ಕ್ಷತ್ರಿಯ, ಕ್ಷತ್ರಿಯರು ಎಂದೂ ಮಾಂಸಹಾರಿಗಳು, ರಾಮ ಕೂಡ ಮಾಂಸಾಹಾರಿ ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ರಾಮ್ ಕದಂ, ಇದು ಜಿತೇಂದ್ರ ಆವ್ಹಾದ್ ಅವರ ಹಾಸ್ಯಾಸ್ಪದ ಹೇಳಿಕೆಯಾಗಿದೆ, ಅವರು ಶ್ರೀರಾಮ ಕಾಡಿನಲ್ಲಿ ಏನು ತಿನ್ನುತ್ತಿದ್ದರು ಎಂಬುದನ್ನು ನೋಡಲು ಹೋಗಿದ್ದರೇ? 22ರಂದು ರಾಮ ಮಂದಿರದ ಅದ್ಧೂರಿ ಉದ್ಘಾಟನೆ ನಡೆಯುತ್ತಿರುವುದರಿಂದ ಈ ಜನರಿಗೆ ಹೊಟ್ಟೆನೋವು ಅಷ್ಟೆ, ಇಷ್ಟು ದೊಡ್ಡ ಹೇಳಿಕೆ ನೀಡಿದ ನಂತರವೂ ರಾಹುಲ್ ಗಾಂಧಿ ಮತ್ತು ಉದ್ಧವ್ ಠಾಕ್ರೆ ಏಕೆ ಮೌನವಾಗಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಮತ್ತಷ್ಟು ಓದಿ: ಬ್ಯಾಂಕಾಕ್: ಜೈ ಶ್ರೀರಾಮ್ ಬ್ಯಾನರ್ ಹಿಡಿದು 13 ಸಾವಿರ ಅಡಿ ಎತ್ತರದಿಂದ ಸ್ಕೈಡೈವಿಂಗ್ ಮಾಡಿದ ಯುವತಿ
ಅಖಿಲ ಭಾರತ ಸಂತ ಸಮಿತಿ, ಧರ್ಮ ಸಮಾಜದ ಮಹಾರಾಷ್ಟ್ರ ರಾಜ್ಯ ಮುಖ್ಯಸ್ಥ ಮಹಂತ್ ಅನಿಕೇತಶಾಸ್ತ್ರಿ ಮಾತನಾಡಿ, ಜಿತೇಂದ್ರ ಆವ್ಹಾದ್ ವಿರುದ್ಧ ಮಹಾರಾಷ್ಟ್ರ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ. ಶ್ರೀರಾಮನ ವಿರುದ್ಧ ಇದನ್ನೆಲ್ಲಾ ನಾವು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ