NEET-UG ಪ್ರಕರಣ: ಜಾರ್ಖಂಡ್‌ನ ಧನಬಾದ್‌ನಿಂದ ಪ್ರಮುಖ ಸಂಚುಕೋರನನ್ನು ಬಂಧಿಸಿದ ಸಿಬಿಐ

|

Updated on: Jul 03, 2024 | 9:01 PM

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಸಿಬಿಐ ಬುಧವಾರ ಅರೆಸ್ಟ್ ಮಾಡಿದೆ. ಪ್ರಮುಖ ಸಂಚುಕೋರ ಎಂದು ಹೇಳಲಾದ ಅಮನ್ ಸಿಂಗ್​​​ನ್ನು ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ಕೇಂದ್ರೀಯ ತನಿಖಾ ದಳ ಬುಧವಾರ ಬಂಧಿಸಿದೆ. NEET-UG ತನಿಖೆಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯು ಇಲ್ಲಿವರೆಗೆ ಏಳು ಮಂದಿಯನ್ನು ಬಂಧಿಸಿದೆ. 

NEET-UG ಪ್ರಕರಣ: ಜಾರ್ಖಂಡ್‌ನ ಧನಬಾದ್‌ನಿಂದ ಪ್ರಮುಖ ಸಂಚುಕೋರನನ್ನು ಬಂಧಿಸಿದ ಸಿಬಿಐ
ಸಿಬಿಐ
Follow us on

ದೆಹಲಿ ಜುಲೈ 03: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ (NEET-UG) ಪ್ರಕರಣದ ಪ್ರಮುಖ ಸಂಚುಕೋರ ಎಂದು ಹೇಳಲಾದ ಅಮನ್ ಸಿಂಗ್​​​ನ್ನು ಜಾರ್ಖಂಡ್‌ನ (Jharkhand) ಧನ್‌ಬಾದ್‌ನಲ್ಲಿ ಕೇಂದ್ರೀಯ ತನಿಖಾ ದಳ (CBI) ಬುಧವಾರ ಬಂಧಿಸಿದೆ.ನೀಟ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯು ಇಲ್ಲಿವರೆಗೆ ಏಳು ಮಂದಿಯನ್ನು ಬಂಧಿಸಿದೆ. ಭಾನುವಾರ, ಸಿಬಿಐ ಗುಜರಾತ್‌ನ ಗೋದ್ರಾ ಜಿಲ್ಲೆಯ ಖಾಸಗಿ ಶಾಲೆಯೊಂದರ ಮಾಲೀಕರನ್ನು ಬಂಧಿಸಿತ್ತು. ಇದು ಪ್ರಕರಣದಲ್ಲಿ ಆರನೇ ಬಂಧನವಾಗಿದೆ. ಪಂಚಮಹಲ್ ಜಿಲ್ಲೆಯ ಗೋಧ್ರಾ ಬಳಿ ಇರುವ ಜಯ್ ಜಲರಾಮ್ ಶಾಲೆಯ ಮಾಲೀಕ ದೀಕ್ಷಿತ್ ಪಟೇಲ್, ಅಭ್ಯರ್ಥಿಗಳ ಪರೀಕ್ಷೆಯಲ್ಲಿ ಅಂಕಗಳನ್ನು ಹೆಚ್ಚಿಸುವ ಭರವಸೆ ನೀಡಿ ₹ 5 ಲಕ್ಷದಿಂದ ₹ 10 ಲಕ್ಷದವರೆಗೆ ವಸೂಲಿ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.

ದೀಕ್ಷಿತ್ ಪಟೇಲ್ ಅಭ್ಯರ್ಥಿಗಳಿಗೆ ಉತ್ತರ ತಿಳಿದಿಲ್ಲದಿದ್ದರೆ ಪ್ರಶ್ನೆಗೆ ಉತ್ತರಿಸಬೇಡಿ ಎಂದು ಹೇಳಿರುವುದಾಗಿ  ಗುಜರಾತ್ ಪೊಲೀಸರು ಆರೋಪಿಸಿದ್ದಾರೆ. ಶಂಕಿತ ಆರೋಪಿಗಳು ಪರೀಕ್ಷೆ ಮುಗಿದ ನಂತರ ತಲಾ ₹ 10 ಲಕ್ಷ ಶುಲ್ಕ ಪಡೆದು 27 ವಿದ್ಯಾರ್ಥಿಗಳ ಪರವಾಗಿ ಉತ್ತರ ಪತ್ರಿಕೆಗಳನ್ನು ಭರ್ತಿ ಮಾಡಲು ಯೋಜಿಸಿದ್ದರು ಎನ್ನಲಾಗಿದೆ.

ಜೂನ್ 29 ರಂದು, ಹಜಾರಿಬಾಗ್‌ನಲ್ಲಿ ಹಿಂದಿ ಮಾಧ್ಯಮ ಸಂಸ್ಥೆಯೊಂದರ ಮಾರ್ಕೆಟಿಂಗ್ ವೃತ್ತಿಪರ ಜಮಾಲುದ್ದೀನ್ ಅನ್ಸಾರಿ ಎಂಬಾತನನ್ನು ಸಿಬಿಐ ಬಂಧಿಸಿತ್ತು. ಏಜೆನ್ಸಿ ಅಧಿಕಾರಿಗಳು ಓಯಸಿಸ್ ಶಾಲೆಯ ಪ್ರಾಂಶುಪಾಲ ಎಹ್ಸಾನುಲ್ ಹಕ್ ಮತ್ತು ಉಪ ಪ್ರಾಂಶುಪಾಲ ಇಮ್ತಿಯಾಜ್ ಆಲಂ ಅವರನ್ನು ಬಂಧಿಸಿದ ಮರುದಿನವೇ ಈ ಬಂಧನ ನಡೆದಿದೆ. ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಗಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ನಗರ ಸಂಯೋಜಕರಾಗಿ ಹಕ್ ಅವರನ್ನು ನೇಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 5 ರಂದು ನೀಟ್ ಪರೀಕ್ಷೆಯನ್ನು ನಡೆಸಿದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಕ್ರಮಗಳ ಆರೋಪದ ಮೇಲೆ ಟೀಕೆಗಳನ್ನು ಎದುರಿಸುತ್ತಿದೆ. ಇದರ ವಿರುದ್ಧ  ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದು ಪ್ರತಿಭಟನಾಕಾರರು ಮತ್ತು ರಾಜಕೀಯ ಪಕ್ಷಗಳು NTA ಅನ್ನು ವಿಸರ್ಜಿಸಲು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಲೋಕಸಭೆಯ ಭಾಷಣದಲ್ಲಿ ‘ಬಾಲಕ ಬುದ್ಧಿ’, ‘ಪರಾವಲಂಬಿ’ ಪದ ಬಳಸಿದ ಮೋದಿ; ಕಾಂಗ್ರೆಸ್ ತಿರುಗೇಟು

ನೀಟ್-ಯುಜಿ ಅಕ್ರಮಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

“ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಭಾಷಣದಲ್ಲಿ  ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಪ್ರಸ್ತಾಪಿಸಿದರು. ಇಡೀ ಸದನವು ರಾಜಕೀಯಕ್ಕಿಂತ ಮೇಲೇರುತ್ತದೆ ಮತ್ತು ಸಮಸ್ಯೆಯನ್ನು ಚರ್ಚಿಸುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ. ದುರದೃಷ್ಟವಶಾತ್, ಇದನ್ನು ರಾಜಕೀಯಗೊಳಿಸಲಾಗುತ್ತಿದೆ, ಇದು ದೇಶದ ಭವಿಷ್ಯಕ್ಕೆ ಸಂಬಂಧಿಸಿದೆ, ”ಎಂದು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರತಿಕ್ರಿಯಿಸುವಾಗ ಪ್ರಧಾನಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:47 pm, Wed, 3 July 24