ದೆಹಲಿ ಅಕ್ಚೋಬರ್ 07: ಭಾರತದ ಸಾರ್ವಭೌಮತೆಗೆ ಅಡ್ಡಿಪಡಿಸಲು ಚೀನಾದಿಂದ (China) ಹಣವನ್ನು ಸ್ವೀಕರಿಸಿದೆ ಎಂಬ ದೆಹಲಿ ಪೊಲೀಸರ (Delhi Police) ಆರೋಪವನ್ನು ನ್ಯೂಸ್‌ಕ್ಲಿಕ್ ಪೋರ್ಟಲ್ (NewsClick) ನಿರಾಕರಿಸಿದೆ. ತಮ್ಮ ವಿರುದ್ಧ ಪ್ರಾರಂಭವಾದ ಪ್ರಕ್ರಿಯೆಗಳು ಭಾರತದಲ್ಲಿನ ಮುಕ್ತ ಪತ್ರಿಕಾ ಮಾಧ್ಯಮವನ್ನು ಸದ್ದಡಗಿಸುವ ಪ್ರಯತ್ನ ಎಂದು ಅದು ಹೇಳಿದೆ. ಪೋರ್ಟಲ್ ದೇಶದ ವಿರುದ್ಧ ಅಸಮಾಧಾನವನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ ಎಂದು ಅದು ಪೋಲೀಸರು ಎಫ್‌ಐಆರ್‌ನಲ್ಲಿ ಹೇಳಿದ್ದು, ಇದು ಒಪ್ಪಲಾಗದ್ದು ಮತ್ತು ಸುಳ್ಳು ಎಂದು ನ್ಯೂಸ್ ಕ್ಲಿಕ್ ಹೇಳಿದೆ.
ಕಟ್ಟುನಿಟ್ಟಾದ ಯುಎಪಿಎ ಅಡಿಯಲ್ಲಿ ದಾಖಲಿಸಲಾದ ಎಫ್‌ಐಆರ್‌ನಲ್ಲಿ, ನೆವಿಲ್ಲೆ ರಾಯ್ ಸಿಂಘಮ್ ಎಂದು ಗುರುತಿಸಲಾದ ಚೀನಾದ ಕಮ್ಯುನಿಸ್ಟ್ ಪಕ್ಷದ ಸಕ್ರಿಯ ಸದಸ್ಯರಿಂದ ವಿದೇಶಿ ನಿಧಿಯನ್ನು ಕಂಪನಿಯ ಬೊಕ್ಕಸಕ್ಕೆ ತರಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹಿಂಸಾಚಾರ, ಪ್ರತ್ಯೇಕತೆ ಅಥವಾ ಇತರ ಯಾವುದೇ ಕಾನೂನುಬಾಹಿರ ಚಟುವಟಿಕೆಯನ್ನು ಎಂದಿಗೂ ಮಾಡಿಲ್ಲ ಅಥವಾ ಉತ್ತೇಜಿಸಲು ಪ್ರಯತ್ನಿಸಿಲ್ಲ ಎಂದು ನ್ಯೂಸ್‌ಕ್ಲಿಕ್ ಪೋರ್ಟಲ್ ಹೇಳಿದೆ.
ಎಫ್‌ಐಆರ್‌ನಲ್ಲಿನ ಆರೋಪಗಳು, ಮೇಲ್ನೋಟಕ್ಕೆ ಅಸಮರ್ಥನೀಯ ಮತ್ತು ನಕಲಿ. ಅಷ್ಟೇ ಅಲ್ಲದೆ ಜಾರಿ ನಿರ್ದೇಶನಾಲಯ, ಆರ್ಥಿಕ ಅಪರಾಧ ವಿಭಾಗ, ದೆಹಲಿ ಪೊಲೀಸ್ ಮತ್ತು ಆದಾಯ ತೆರಿಗೆ ಇಲಾಖೆಗಳು ಪದೇ ಪದೇ ತನಿಖೆ ಮಾಡಿದೆ ಎಂದು ಪೋರ್ಟಲ್ ಹೇಳಿದೆ.
ಪೋರ್ಟಲ್‌ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರಕಾಯಸ್ಥ ಮತ್ತು ಅದರ ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಪೊಲೀಸರು ಬಂಧಿಸಿದ ಕೆಲವು ದಿನಗಳ ನಂತರ, ಅದರ ಪತ್ರಕರ್ತರು ಮತ್ತು ಅದಕ್ಕೆ ಸಂಬಂಧಿಸಿದ 88 ಸ್ಥಳಗಳ ಮೇಲೆ ದಾಳಿ ನಡೆಸಿದ ಗಂಟೆಗಳ ನಂತರ ಈ ಹೇಳಿಕೆ ಬಂದಿದೆ.
ಇದನ್ನೂ ಓದಿ: ನ್ಯೂಸ್ ಕ್ಲಿಕ್ನ ಮಾಜಿ ಸಿಬ್ಬಂದಿಯ ಕೇರಳದಲ್ಲಿರುವ ಮನೆ ಮೇಲೆ ದೆಹಲಿ ಪೊಲೀಸ್ ದಾಳಿ
ಕಂಪನಿಯ ವಿರುದ್ಧದ ಇತ್ತೀಚಿನ ಎಫ್‌ಐಆರ್ “ಕಾನೂನುಬಾಹಿರ ಬಂಧನಗಳನ್ನು” ನಡೆಸುವ ಗುರಿಯನ್ನು ಹೊಂದಿದೆ ಎಂದು ನ್ಯೂಸ್‌ಕ್ಲಿಕ್ ಹೇಳಿದೆ. ದೆಹಲಿ ನ್ಯಾಯಾಲಯದ ಮಧ್ಯಪ್ರವೇಶದ ನಂತರ ಎಫ್‌ಐಆರ್‌ನ ಪ್ರತಿಯನ್ನು ನ್ಯೂಸ್‌ಕ್ಲಿಕ್‌ಗೆ ಒದಗಿಸಲಾಗಿದೆ.
ದೆಹಲಿ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 13, 16,17, 18 ಮತ್ತು 22C ಮತ್ತು IPC ಯ 153A ಮತ್ತು 120B ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಹಿರಿಯ ಪತ್ರಕರ್ತರು ಸೇರಿದಂತೆ ಹತ್ತು ಮಂದಿಯನ್ನು ಸೋಮವಾರ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ